10 ವರ್ಷದ ನಂತರ ಕೆಎಂಎಫ್ ಅಧ್ಯಕ್ಷ ಗಾದಿ ಮೇಲೆ ಎಚ್ ಡಿ ರೇವಣ್ಣ ಕಣ್ಣು
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಗಾದಿ ಮೇಲೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಕಣ್ಣಿಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಗಾದಿ ಅವರ ಪಾಲಿಗೆ ಇಲ್ಲವಾಗಿತ್ತು. ಇದೀಗ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಗಾದಿ ರೇವಣ್ಣ ಅವರಿಗೆ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಹದಿನೈದು ವರ್ಷಗಳ ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದ ರೇವಣ್ಣ ಅವರಿಗೆ ಆ ಸಂಸ್ಥೆ ಬಗ್ಗೆ ವಿಶೇಷ ಪ್ರೀತಿ ಇದೆ. ಹತ್ತು ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಆವರಿಸಿಕೊಂಡ ಆ ಸ್ಥಾನಕ್ಕೆ ಮತ್ತೆ ರೇವಣ್ಣ ಬರಲಾಗಲಿಲ್ಲ. ಕೆಎಂಎಫ್ ಅಧ್ಯಕ್ಷರ ಹುದ್ದೆಗೆ ಈ ವರ್ಷದ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಅದರ ಸಹವರ್ತಿ ಹದಿನಾಲ್ಕು ಒಕ್ಕೂಟಗಳಿಗೆ ಚುನಾವಣೆ ನಡೆಯಬೇಕು.
ಕೆಎಂಎಫ್ ನ ವಾರ್ಷಿಕ ವಹಿವಾಟು 15,500 ಕೋಟಿ ರುಪಾಯಿ. ಹಾಗಂತ ಹಣವೊಂದೇ ಮುಖ್ಯ ಪಾತ್ರ ವಹಿಸುತ್ತದೆ ಅಂತಲ್ಲ. ಅದರ ಜತೆಗೆ ಕರ್ನಾಟಕದಾದ್ಯಂತ 18 ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕರ ನಂಟು ಬೆಸೆಯಲಿದ್ದು, ಗ್ರಾಮೀಣ ಭಾಗದ ಮತಗಳ ಮೇಲೆ ಪರಿಣಾಮ ಬೀರುತ್ತದೆ.
2011ರಲ್ಲಿ ಡಿ.ವಿ.ಸದಾನಂದ ಗೌಡ ಅವರು ಈ ಹುದ್ದೆಗೆ ಪ್ರಯತ್ನಿಸಿದ್ದರು. ಅವರಿಗೆ ಬಿಜೆಪಿಯಿಂದ ಯಾವುದೇ ಸಹಾಯ ದೊರೆಯಲಿಲ್ಲ. ಆ ನಂತರ ಅವರು ಮುಖ್ಯಮಂತ್ರಿಯೇ ಆದರು. ಅದು ಬೇರೆ ಮಾತು. ಆದರೆ ಈಗ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಇರುವುದರಿಂದ ರೇವಣ್ಣ ಅವರಿಗೆ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುವ ಬೆಳ್ಳಿ ಗೆರೆಯೊಂದು ಕಾಣಿಸತೊಡಗಿದೆ. ಆದರೆ ಕಾಂಗ್ರೆಸ್ ನಲ್ಲೇ ಕೆಎಂಎಫ್ ಅಧ್ಯಕ್ಷ ಗಾದಿ ಕನಸು ಕಾಣುತ್ತಾ ಇರುವವರು ಇದ್ದಾರೆ.

ಮಾಗಡಿ ಬಾಲಕೃಷ್ಣ ಇತರರು ಆಕಾಂಕ್ಷಿಗಳು
ಒಂದು ಕಾಲದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಮಿತ್ರ- ಸದ್ಯಕ್ಕೆ ವಿರೋಧಿ ಹಾಗೂ ಕಾಂಗ್ರೆಸ್ ನಾಯಕ ಮಾಗಡಿಯ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳಲ್ಲಿ ಒಬ್ಬರು. ಇನ್ನು ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ ಕೂಡ ತಮ್ಮ ತಾಕತ್ತಿಗೆ ತಕ್ಕಂತೆ ಲಾಬಿ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ನಿಯೋಗದ ಜತೆ ತೆರಳಿ ಭೇಟಿ ಮಾಡಿದ ಶಿವಕುಮಾರ್
ಶಿವಕುಮಾರ್ ನೇತೃತ್ವದಲ್ಲಿ ನಿಯೋಗವೊಂದು ಮೇ ಇಪ್ಪತ್ತೆರಡನೇ ತಾರೀಕು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚೆ ನಡೆಸಿದೆ. ಹಗರಿಬೊಮ್ಮನಹಳ್ಳಿಯ ಶಾಸಕ- ಬಳ್ಳಾರಿ ಹಾಲು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ- ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೂಡ ಅಧ್ಯಕ್ಷ ಗಾದಿ ಆಕಾಂಕ್ಷಿಗಳಾಗಿದ್ದಾರೆ.

ಎರಡೂ ಪಕ್ಷಗಳು ಹಿರಿಯ ನಾಯಕರಿಂದ ತೀರ್ಮಾನ
ಈ ವಿಚಾರವಾಗಿ ಕಾಂಗ್ರೆಸ್ ನವರು ಅನಗತ್ಯವಾಗಿ ರಂಕಲು ಮಾಡುತ್ತಿದ್ದಾರೆ. ಕೆಎಂಎಫ್ ಅಧ್ಯಕ್ಷ ಗಾದಿಗೆ ರೇವಣ್ಣ ಅವರೇ ಅತ್ಯಂತ ಅರ್ಹರು. ಅವರ ಅನುಭವ ಅಗಾಧವಾಗಿದೆ. ಆದರೆ ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರುವುದು ಎರಡೂ ಪಕ್ಷಗಳ ಹಿರಿಯ ನಾಯಕರಿಗೆ ಸೇರಿದ್ದು ಎನ್ನುತ್ತಾರೆ ಜೆಡಿಎಸ್ ಮುಖಂಡರು. ನಿಯಮದ ಪ್ರಕಾರ: ಸಹವರ್ತಿ ಒಕ್ಕೂಟಗಳು ಕೆಎಂಎಫ್ ಗೆ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡುತ್ತವೆ. ಅವರೆಲ್ಲ ಸೇರಿ ಅಧ್ಯಕ್ಷರ ಆಯ್ಕೆ ಮಾಡುತ್ತಾರೆ.

ಹಾಸನ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್ ಪಾರಮ್ಯ
ಹಾಲು ಒಕ್ಕೂಟದ ಆ ನಿರ್ದೇಶಕರು ಅಧಿಕೃತವಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುವುದಿಲ್ಲ. ಆದರೆ ಚುನಾವಣೆಯನ್ನು ಪಕ್ಷದ ಆಧಾರದಲ್ಲೇ ಹೋರಾಡುತ್ತಾರೆ.. ಹಾಸನ ಹೊರತುಪಡಿಸಿ ಬಹುತೇಕ ಹಾಲು ಒಕ್ಕೂಟಗಳಲ್ಲಿ ಕಾಂಗ್ರೆಸ್ ಜಯಿಸಿದೆ. ಅಲ್ಲಿಂದ ರೇವಣ್ಣ ಪುನರಾಯ್ಕೆ ಆಗಿದ್ದಾರೆ. ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದ್ದು, ಅಲ್ಲಿ ಚುನಾವಣೆ ನಡೆಯಬೇಕಿದೆ.











Click it and Unblock the Notifications