Rajini: ದರ್ಶನ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ಯೂಟ್ಯೂಬರ್ ಸ್ಪಷ್ಟನೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾಗಿದ್ದು ದಿನದಿಂದ ದಿನಕ್ಕೆ ಪ್ರಕರಣ ರೋಚಕವಾಗುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಂದು ಮತ್ತೊಬ್ಬ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಇದ್ದಾರೆ, ಅದರಲ್ಲಿ ಓರ್ವ ಮಹಿಳೆ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದರ್ಶನ್‌ರ ಕಟ್ಟಾ ಅಭಿಮಾನಿ, ಯೂಟ್ಯೂಬರ್ ರಜಿನಿ ಮೇಲೂ ಟಿವಿ ವಾಹಿನಿಯೊಂದು ಆರೋಪ ಮಾಡಿದ್ದು, ರಜಿನಿ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಜಿನಿ ಎಕ್ಸ್‌ಪ್ರೆಸ್ ಹೆಸರಿನ ಯೂಟ್ಯೂಬ್ ವಾಹಿನಿಯಲ್ಲಿ ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತನಾಡಿರುವ ಅವರು, ದರ್ಶನ್ ಬಂಧಿತರಾಗಿರುವ ಕೊಲೆ ಪ್ರಕರಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ.
ವಾಹಿನಿಯೊಂದರಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವುಗಳು. ನನಗೂ ಪವಿತ್ರಾ ಗೌಡ, ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧವಿಲ್ಲ ಎಂದಿದ್ದಾರೆ.
ಹಲವು ವರ್ಷಗಳಿಂದ ದರ್ಶನ್ ಅವರ ಬಗ್ಗೆ ಸ್ಟೋರಿ ಮಾಡಿಕೊಂಡು ಬಂದಿದ್ದೇನೆ. ದರ್ಶನ್, ಅವರ ಅಭಿಮಾನಿಗಳು ನನ್ನ ಹೃದಯಕ್ಕೆ ಹತ್ತಿರಯವಾದವರು. ದರ್ಶನ್ ಮತ್ತು ಅವರ ಅಭಿಮಾನಿಗಳು ಸಾವಿರಾರು ಜನಕ್ಕೆ ಸಹಾಯ ಮಾಡಿರುವುದನ್ನು ನಾನೇ ನೋಡಿದ್ದೇನೆ, ಈ ಬಗ್ಗೆ ಸ್ಟೋರಿ ಮಾಡಿದ್ದೇನೆ. ಅದಕ್ಕೆ ಅವರ ಮೇಲೆ ವಿಶೇಷ ಪ್ರೀತಿ ಇದೆ, ಕೊನೆಯವರೆಗೂ ಇರಲಿದೆ ಎಂದರು.
ದರ್ಶನ್ ಬಂಧನವಾಗಿರುವ ಸಂದರ್ಭ ನೋಡಿಕೊಂಡು ನನ್ನ ಮೇಲೆ ಅಪಪ್ರಚಾರ ಮಾಡಲು ಕಾರ್ಯಕ್ರಮ ಮಾಡಲಾಗಿದೆ. ನಾನು ತಲೆಮರೆಸಿಕೊಂಡಿದ್ದೇನೆ ಎಂದೆಲ್ಲಾ ಹೇಳಲಾಗಿದೆ. ನಾನು ಯಾವ ತಪ್ಪು ಮಾಡಿಲ್ಲ ಅಂದಮೇಲೆ ನಾನ್ಯಾಕೆ ಹೆದರಲಿ ಎಂದಿದ್ದಾರೆ.
ದರ್ಶನ್ ಮತ್ತು ನನ್ನನ್ನು ಟಾರ್ಗೆಟ್ ಮಾಡಿ ಕಾರ್ಯಕ್ರಮ ಮಾಡಲಾಗಿದೆ. ರೇಣುಕಾಸ್ವಾಮಿ ಯಾರು ಎಂದೇ ನನಗೆ ಗೊತ್ತಿಲ್ಲ, ಸುಮ್ಮನೆ ನನ್ನ ಹೆಸರನ್ನು ಎಳೆದುತರಲಾಗುತ್ತಿದೆ.
ಸತ್ಯ ಏನೆಂದು ನನಗೂ ಗೊತ್ತಿಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ. ನನ್ನನ್ನೇ ಈ ಪ್ರಕರಣದಲ್ಲಿ ಸಿಲುಕಿಸಲು ನೋಡಲಾಗುತ್ತಿದೆ. ಇನ್ನು ದರ್ಶನ್ ಅವರನ್ನು ಸಿಲುಕಿಸಲು ಕೂಡ ಕಾಣದ ಕೈಗಳು ಕೆಲಸ ಮಾಡುತ್ತಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications