CinemaCon 2026: ಜಾಗತಿಕ ವೇದಿಕೆಯಲ್ಲಿ 'ರಾಮಾಯಣ' ಪ್ರಚಾರ ಶುರು; ಲಾಸ್‌ವೇಗಸ್‌ನಲ್ಲಿ ಬೀಡುಬಿಟ್ಟ ರಾಕಿಂಗ್ ಸ್ಟಾರ್ ಯಶ್
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ' (Ramayana) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಅಮೆರಿಕದ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಸಿನಿಮಾಕಾನ್ 2026' ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾಕಾನ್‌ನ ಮೊದಲ ದಿನವೇ ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಈ ಬೃಹತ್ ದೃಶ್ಯ ವೈಭವವನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಯಶ್, ಈ ಯೋಜನೆಯಲ್ಲಿ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿರುವುದು ವಿಶೇಷ. ಸಿನಿಮಾಕಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಯಶ್ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ದಟ್ಟವಾದ ಗಡ್ಡ ಮತ್ತು ಉದ್ದನೆಯ ಕೂದಲಿನೊಂದಿಗೆ ಸ್ವಾಗ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಯಶ್, ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಮಿಂಚಿದ್ದಾರೆ. ಅವರ ಈ ವಿಶಿಷ್ಟ ರೂಪವು 'ರಾಮಾಯಣ' ಚಿತ್ರದ ರಾವಣನ ಪಾತ್ರಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ ಎಂಬುದು ಅಭಿಮಾನಿಗಳ ಮಾತು. ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಕ್ಯಾಶುವಲ್ ಲುಕ್‌ನಲ್ಲಿ ಯಶ್ ಜೊತೆ ಸಾಥ್ ನೀಡಿದ್ದಾರೆ.
'ಟಾಕ್ಸಿಕ್' ಮತ್ತು 'ಅಸ್ತ್ರವರ್ಸ್' ಬಗ್ಗೆಯೂ ಮಾಹಿತಿ
ಸಂದರ್ಶನದ ವೇಳೆ ಯಶ್ ತಮ್ಮ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಟಾಕ್ಸಿಕ್' (Toxic) ಬಗ್ಗೆಯೂ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ನಮಿತ್ ಮಲ್ಹೋತ್ರಾ ಅವರು ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಸರಣಿಯ ಮುಂದಿನ ಭಾಗವಾದ 'ಅಸ್ತ್ರವರ್ಸ್' ಕುರಿತಾದ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದ್ದಾರೆ.
ರಾಮಾಯಣ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿ ನಟರು ಒಂದಾಗಿರುವುದು ವಿಶೇಷ. ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹನುಮಂತನ ಪಾತ್ರದಲ್ಲಿ ಬಾಲಿವುಡ್‌ನ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸುತ್ತಿದ್ದಾರೆ. ಯಶ್ ಅವರು ಈ ಚಿತ್ರದಲ್ಲಿ ರಾವಣನಾಗಿ ನಟಿಸುವುದರ ಜೊತೆಗೆ ಚಿತ್ರದ ಸಹ-ನಿರ್ಮಾಪಕರಾಗಿಯೂ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ.
Our first interview under the stage at #CinemaCon - with Namit Malhotra and Yash talking #Ramayana, hosted by @NikkiNovak. Full interview dropping soon at @Fandango! pic.twitter.com/e2FLppDuey
— Erik Davis (@ErikDavis) April 13, 2026
ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡದ ಯೋಜನೆಯಂತೆ 'ರಾಮಾಯಣ'ದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅದರ ಮುಂದಿನ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರವು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸಿನಿಮಾ ಶಕ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.












Click it and Unblock the Notifications