RCB: ಕಾಂಗ್ರೆಸ್ ಸರ್ಕಾರದ ವೈಫಲ್ಯ ನೇರವಾಗಿ ಟೀಕಿಸುತ್ತಿಲ್ಲವೇಕೆ: ಕನ್ನಡ ಪ್ರಸಿದ್ಧ ನಟನ ಪೋಸ್ಟ್‌ಗೆ ತರಾಟೆ!
ಬೆಂಗಳೂರಿನಲ್ಲಿ ಬುಧವಾರ ಭಾರೀ ದೊಡ್ಡ ದುರಂತವೇ ಸಂಭವಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದಿರುವ ಈ ದುರಂತವು ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಭಾರತದಾದ್ಯಂತ ಕ್ರಿಕೆಟ್ ಹಾಗೂ ಕ್ರೀಡಾಭಿಮಾನಿಗಳು ಈ ದುರಂತವನ್ನು ನೋಡಿ ಕಂಗಾಲಾಗಿದ್ದಾರೆ. ಇನ್ನು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಇದು ಬಹುದೊಡ್ಡ ಕಪ್ಪುಚುಕ್ಕಿ ಅಂತಲೇ ಹೇಳಲಾಗುತ್ತಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನದಿಂಲೇ ಈ ದುರಂತ ಸಂಭವಿಸಿದೆ. ಆದರೆ, ಕನ್ನಡದ ಪ್ರಸಿದ್ಧ ನಟರೊಬ್ಬರ ಪೋಸ್ಟ್ ಇದೀಗ ಸಾಕಷ್ಟು ಟೀಕೆಗೆ ಕಾರಣವಾಗಿದೆ. ನಿಮಗೆ ಸರ್ಕಾರವನ್ನು ಪ್ರಶ್ನೆ ಮಾಡುವ ಧೈರ್ಯ ಇಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಈಚೆಗೆ ಕಮಲ್ ಹಾಸನ್ ಅವರ ವಿಚಾರದಲ್ಲಿ ಮಾತನಾಡಿ ಟೀಕೆಗೆ ಗುರಿಯಾಗಿದ್ದ ನಟ ಕಿಶೋರ್ ಅವರು ಇದೀಗ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ಕುಂಭ ಮೇಳದಲ್ಲಿ ಆಗಿದ್ದನ್ನ ಸರ್ಕಾರದ ಮೇಲೆ ಹಾಕಿ ಈಗ ಜನರ ಮೇಲೆ ಹಾಕುತಿದ್ದಾನೆ ಸರ್ಕಾರದ ವೈಫಲ್ಯ ವಿರೋಧಿಸಲು ಧೈರ್ಯ ಇಲ್ಲವೇ ಎಂದು ಪ್ರಶ್ನೆ ಮಾಡಲಾಗುತ್ತಿದೆ. ನಟ ಕಿಶೋರ್ ಅವರು ಪೋಸ್ಟ್ ಮಾಡಿದ್ದೇನು ಎನ್ನುವ ವಿವರ ನೋಡೋಣ.

ನಾವೆಲ್ಲರೂ ಜವಾಬ್ದಾರರು.. ಎನ್ನುವ ಸಾಲಿನೊಂದಿಗೆ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಾರಂಭವಾಗಿದೆ. ಈ ಅದ್ಭುತ ವಿಜಯವನ್ನು ಈಗ ಈ ದುರಂತಕ್ಕಾಗಿ ಮಾತ್ರ ನೆನಪಿಸಿಕೊಳ್ಳಲಾಗುತ್ತದೆ ಎಂಬುದು ನಿಜಕ್ಕೂ ದುಃಖಕರ. ಅಗಲಿದವರು ಮತ್ತೆ ಬರಲು ಸಾಧ್ಯವಿಲ್ಲ. ಅವರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡಿವೆ... ಅವರ ನಷ್ಟವನ್ನು ತುಂಬಲು ಅಥವಾ ವಿವರಿಸಲು ಯಾವ ಪದಗಳಿಂದಲೂ ಸಾಧ್ಯವಿಲ್ಲ.
ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು.. ಇದು ಸರಕಾರದ, ಆಯೋಜಕರ, ಪೋಲೀಸರ, ಕ್ರಿಕೆಟ್ ಮಂಡಳಿಯ ವೈಫಲ್ಯ. ಮೃತರ ಸಂಖ್ಯೆಯನ್ನೂ ಮುಚ್ಚಿಟ್ಟ ಮಹಾಕುಂಭ ದುರಂತದ ಅಥವಾ ದೆಹಲಿ ರೈಲ್ವೆ ನಿಲ್ದಾಣ ಅಥವಾ ಮೋರ್ಬಿ ಸೇತುವೆ ದುರಂತದ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಇಲ್ಲಿ ಸತ್ಯವನ್ನು ಇತರ ಸ್ಥಳಗಳಂತೆ ಮರೆಮಾಚಲಾಗುತ್ತಿಲ್ಲ ಎಂದು ಸಮಾಧಾನ ಪಡಬಹುದೇನೋ.. ಎಂದು ಪೋಸ್ಟ್ ಮಾಡಿದ್ದಾರೆ.
ಮುಂದುವರಿದು ಆದರೆ... ಕ್ರಿಕೆಟ್ ಅನ್ನು ನಮ್ಮ ಧರ್ಮವೆಂದು ಪರಿಗಣಿಸುವ ನಾವು, ನಮ್ಮ ಸೆಲೆಬ್ರಿಟಿಗಳನ್ನು ದೇವತೆಗಳನ್ನಾಗಿ ಮಾಡಿ, ನಮ್ಮ ಕ್ರಿಕೆಟ್, ಚಲನಚಿತ್ರ ಮತ್ತು ರಾಜಕೀಯ ನಾಯಕರ ಮೇಲಿನ ಪ್ರೀತಿಯಲ್ಲಿ ಕುರುಡರಾದ ನಾವು, ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇಂದು ನಮ್ಮನ್ನು ನಾವು ಒಂದು ಬಹು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕು. ಕ್ರೀಡೆ, ರಾಷ್ಟ್ರೀಯತೆ, ಧರ್ಮದಿಂದ ಹಿಡಿದು ಭಾಷೆ ಮತ್ತು ಜಾತಿಯವರೆಗೆ ಎಲ್ಲದರಲ್ಲೂ ನಾವು ಅತಿ ಭಾವುಕರಾಗುತ್ತಿಲ್ಲವೇ? ಈ ಅತಿ ಭಾವುಕತೆಯ ಪ್ರಯೋಜನ ಪಡೆಯುತ್ತಿರುವವರಾರು? ಬೆಲೆ ತೆರುತ್ತಿರುವವರು ಯಾರು ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಹಲವರು ನಟ ಕಿಶೋರ್ ಅವರ ನಡೆಯನ್ನು ಖಂಡಿಸಿದ್ದಾರೆ. ಮಹಾಕುಂಭ ಮೇಳದ ದುರಂತಕ್ಕೂ ಇದಕ್ಕೂ ಏನು ಸಂಬಂಧ ಅಲ್ಲಿ ಕೋಟ್ಯಾಂತರ ಜನ ಸೇರಿದ್ದರು. ಇಲ್ಲಿನ ದುರಂತವನ್ನು ನೇರವಾಗಿ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಆದರೆ ಕೆಲವರು ನಟ ಕಿಶೋರ್ ಅವರು ಹೇಳಿರುವುದು ಸರಿಯಾಗಿದೆ ಎಂದೂ ಸಮರ್ಥನೆ ಮಾಡಿಕೊಂಡಿದ್ದಾರೆ.












Click it and Unblock the Notifications