ರಾಹುಲ್ಲಾ ಅಲ್ಲಾಡಿಸಪ್ಪಾ: ಯಾರಿದು ಬೆಳ್ಳುಳ್ಳಿ ಕಬಾಬ್?
ರಾಹುಲ್ಲಾ.. ರಾಹುಲ್ಲಾ.. ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ.. ರಾಹುಲ್ಲಾ ರುಬ್ಬಿ ರುಬ್ಬಿ ಕೊಡಪ್ಪಾ.. ಹಿಂಗೆ ನೀವು ಯುಟ್ಯೂಬ್ ಓಪನ್ ಮಾಡಿದ ತಕ್ಷಣವೇ ನಿಮಗೆಲ್ಲ ರಾಹುಲ್ಲಾ ದರ್ಶನ ಆಗುತ್ತದೆ. ಆದರೆ ಇದೇ ರಾಹುಲ್ ಬಗ್ಗೆ ಇದೀಗ ಟ್ರೋಲ್ ಹಾವಳಿ ಶುರುವಾಗಿದೆ. ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವ ಬಗ್ಗೆ ರಾಹುಲ್ಲಾ ಖ್ಯಾತಿಯ & ಬೆಳ್ಳುಳ್ಳಿ ಕಬಾಬ್ ಮೂಲಕ ಫೇಮಸ್ ಆಗಿರುವ ಹೋಟೆಲ್ ಮಾಲೀಕ ಚಂದ್ರು ಅವರು ರೊಚ್ಚಿಗೆದ್ದಿದ್ದಾರೆ.
ಹೌದು, ಇದು ಸೋಷಿಯಲ್ ಮೀಡಿಯಾ ಜಮಾನ. ಇದೇ ಕಾರಣಕ್ಕೆ ಇಲ್ಲಿ ಏನೇ ಮಾಡಿ ಅದಕ್ಕೆ ಒಂದು ಕೊಂಕು ಇದ್ದೇ ಇರುತ್ತದೆ. ಹಾಗೇ ಟ್ರೋಲ್ ಹಾವಳಿ ಕೂಡ ಬಲು ಜೋರು ಎನ್ನಬಹುದು. ಅದೇ ರೀತಿ 'ಬೆಳ್ಳುಳ್ಳಿ ಕಬಾಬ್' ಖ್ಯಾತಿಯ ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಅವರ ವಿಚಾರವನ್ನ ಟ್ರೋಲ್ ಮಾಡುತ್ತಿದ್ದಾರೆ ಕೆಲ ಕಿಡಿಗೇಡಿಗಳು. ಈ ಬಗ್ಗೆ ಈಗ ಸ್ವತಃ ಚಂದ್ರು ಅವರೇ ಮಾತನಾಡಿದ್ದು ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವವರ ವಿರುದ್ಧ ಗರಂ ಆಗಿದ್ದಾರೆ.

ಹೇ ರಾಹುಲ್ಲಾ.. ರುಬ್ಬಿ ಕೊಡಪ್ಪಾ..
ನಿಮಗೆ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆ ಗೊತ್ತಿರಬಹುದು, ಬೆಂಗಳೂರು ಹೃದಯ ಭಾಗದಲ್ಲಿ ಈ ಆಸ್ಪತ್ರೆ ಇದೆ. ಹೀಗೆ ಇದೇ ಆಸ್ಪತ್ರೆ ಎದುರು ಒಂದು ಹೋಟೆಲ್ ಇದೆ, ಈ ಹೋಟೆಲ್ ನಡೆಸುತ್ತಿದ್ದವರು ಚಂದ್ರು ಅವರು. ಅಲ್ಲಿ ಇವರ ಮಿಲಿಟರಿ ಹೋಟೆಲ್ ತುಂಬಾ ಫೇಮಸ್ ಆಗಿದೆ. ಏಕೆಂದರೆ ಇವರ ಆಹಾರದಲ್ಲಿ ಗುಣಮಟ್ಟದ ವಸ್ತುಗಳ ಬಳಕೆ ಮಾಡಿ, ಗ್ರಾಹಕರಿಗೆ ನೀಡುತ್ತಾರೆ. ಇಂತಿಪ್ಪ ಚಂದ್ರು ಅವರು ದೊಡ್ಡ ಹೋಟೆಲ್ ಮಾಡಿದ್ದಾರೆ. ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ಅಡುಗೆ ಮಾಡುವ ವಿಧಾನದ ಬಗ್ಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಆದರೆ ಇದೇ ವಿಡಿಯೋಗಳು ಇದೀಗ ಟ್ರೋಲ್‌ಗೆ ಕಾರಣವಾಗಿವೆ.
ವರ್ಲ್ಡ್ ಫೇಮಸ್ 'ಬೆಳ್ಳುಳ್ಳಿ ಕಬಾಬ್'
ಬಾಣಸಿಗ ಹಾಗೂ ಹೋಟೆಲ್ ಮಾಲೀಕ ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಸ್ವತಃ ನಾನು ಕೂಡ ಅವರ ಹೋಟೆಲ್ ಆಹಾರ ಸೇವಿಸಿದ್ದೇನೆ, ಹೀಗಿದ್ದಾಗ ಅವರು ತಮ್ಮ ಅಡುಗೆ ವಿಡಿಯೋದಲ್ಲಿ ವಿಶಿಷ್ಟವಾಗಿ ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಅದರಲ್ಲೂ ಚಂದ್ರು ಅವರ ಬೆಳ್ಳುಳ್ಳಿ ಕಬಾಬ್ ಈಗ ವರ್ಲ್ಡ್ ಫೇಮಸ್ ಆಗಿದೆ.
ಆದರೆ ಇದೇ ವಿಡಿಯೋ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟ್ರೋಲ್ ಮಾತ್ರ ಆಗಿದ್ದರೆ ಪರವಾಗಿಲ್ಲ ಬಿಡು ಗುರೂ ಎನ್ನಬಹುದಾಗಿತ್ತೋ ಏನೋ. ಆದರೆ ಕೆಟ್ಟ ಕೆಟ್ಟ ಪದ ಬಳಕೆ ಮಾಡುತ್ತಿರುವ ಬಗ್ಗೆ ಇದೀಗ ಚಂದ್ರು ಅವರು ಗರಂ ಆಗಿದ್ದಾರೆ. ಹಾಗೇ, ರಾಹುಲ್ಲಾ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಬಗ್ಗೆಯೂ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಕೊರೊನಾ ಸಮಯದಲ್ಲಿ ಬಂದ ರಾಹುಲ್ಲಾ!
ಜಗತ್ತಿಗೇ ಕೊರೊನಾ ಸೋಂಕು ಅಪ್ಪಳಿಸಿದ ಸಮಯಕ್ಕೆ ಕರ್ನಾಟಕ ಕೂಡ ಈ ಮಹಾಮಾರಿ ಹೊಡೆತಕ್ಕೆ ತತ್ತರಿಸಿತ್ತು. ಅದರಲ್ಲೂ ಕರ್ನಾಟಕದ ಹೋಟೆಲ್ ಉದ್ಯಮ ನಲುಗಿತ್ತು. ಹೀಗೆ ಚಂದ್ರು ಅವರು ಕೂಡ, ಕೊರೊನಾ ಬಂದಾಗ ಸಂಕಷ್ಟದ ದಿನಗಳ ಎದುರಿಸಿದ್ದರಂತೆ. ಆಗ ಕೆಲಸ ಮಾಡಲು ಅವರ ಹೊಸ ಹೋಟೆಲ್‌ಗೆ ನೌಕರರು ಸಿಗುತ್ತಿಲ್ಲ ಎಂಬ ಕೊರಗು ಕಾಡಿತ್ತಂತೆ. ಆದರೆ ಈ ಹುಡುಗ ರಾಹುಲ್ಲಾ, ಚಂದ್ರು ಅವರ ಜೊತೆಯಾಗಿ ನಿಂತಿದ್ದನಂತೆ. ಇದೇ ಕಾರಣಕ್ಕೆ ಕಳೆದ 2 ವರ್ಷ 6 ತಿಂಗಳಿಂದ ಇವನನ್ನ ತಮ್ಮ ರೈಟ್ ಹ್ಯಾಂಡ್ ರೀತಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಚಂದ್ರು ಅವರು.
ನೌಕರನ ಪರ ಚಂದ್ರು ಮಾತು
ಒಟ್ನಲ್ಲಿ ಟ್ರೋಲ್ ಮಾಡುವವರು ಮಾಡಲಿ, ಆದರೆ ಒಳ್ಳೆಯ ರೀತಿಯಾಗಿ ಟ್ರೋಲ್ ಮಾಡಿ ಅಂತಾ ಚಂದ್ರು ಅವರು ಹೇಳುತ್ತಾರೆ. ಆದ್ರೆ ಕೆಟ್ಟ ಕೆಟ್ಟ ಪದ ಬಳಕೆ ಮಾಡುತ್ತಾ ಟ್ರೋಲ್ ಮಾಡಿದರೆ ಅದನ್ನ ದೇವರು ಮೆಚ್ಚುವುದಿಲ್ಲ. ಹಾಗೇ ತಿನ್ನುವ ಅನ್ನದ ವಿಚಾರದಲ್ಲಿ ಹೀಗೆ ಕೆಟ್ಟ ಪದ ಬಳಸಿದರೆ ಅದು ನಿಮಗೆ ಒಳ್ಳೆಯದು ಮಾಡಲ್ಲ ಎಂದು ಚಂದ್ರು ಅವರು ಈಗ, ಆಕ್ರೋಶ ಹೊರಹಾಕಿದ್ದಾರೆ. ಹಾಗೇ ತಮ್ಮ ಹೋಟೆಲ್ ನೌಕರ ರಾಹುಲ್ಲಾ ಪರವಾಗಿಯೂ ಮಾತನಾಡಿದ್ದಾರೆ. ಜೊತೆಗೆ ತಮ್ಮ ಬೆಳ್ಳುಳ್ಳಿ ಕಬಾಬ್ ಬಗ್ಗೆ ಹೆಮ್ಮೆಯನ್ನ ವ್ಯಕ್ತಪಡಿಸಿದ್ದಾರೆ.












Click it and Unblock the Notifications