ಸ್ಯಾಂಡಲ್‌ವುಡ್‌ಗೂ ಕಮಿಟಿ: ಫಿಲ್ಮ್ ಚೇಂಬರ್ ಸಭೆಯಲ್ಲಿ ಏನೇನಾಯ್ತು?
ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರಿಗೆ ಲೈಂಗಿಕ ದೌರ್ಜನ್ಯ ಕುರಿತಂತೆ ವರದಿ ಸಲ್ಲಿಸಿದ್ದ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್‌ವುಡ್‌ಗೂ ಒಂದು ಸಮಿತಿ ರಚಿಸಬೇಕು ಎನ್ನುವ ಬೇಡಿಕೆ ಸಂಬಂಧ ಇಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಹೈಡ್ರಾಮವೇ ನಡೆದಿದ್ದು, ಕಮಿಟಿ ಬೇಕು ಎನ್ನುವ ವಿಚಾರವಾಗಿ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಫಿಲ್ಮ್ ಚೇಂಬರ್‌ನ ಮುಖ್ಯಸ್ಥರು, ಸದಸ್ಯರು, ಸಿನಿಮಾ ನಟಿಯರು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ನಿರ್ಮಾಪಕರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಕನ್ನಡ ಚಿತ್ರರಂಗಕ್ಕೂ ಒಂದು ಸಮಿತಿ ಬೇಕು ಎಂದು ಹಲವರು ಬೇಡಿಕೆ ಇಟ್ಟರೆ, ಇನ್ನೂ ಕೆಲವರು ನಮ್ಮ ಚಿತ್ರರಂಗದಲ್ಲಿ ಅಂತಹ ಕೆಟ್ಟ ಸ್ಥಿತಿ ಇನ್ನೂ ಇಲ್ಲ. ಹಾಗಾಗಿ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿಯರಾದ ನೀತು, ಭಾವನಾ ರಾಮಣ್ಣ, ತಾರಾ ಅನುರಾಧ, ಅನಿತಾ ಭಟ್, ಸಂಜನಾ ಗಲ್ರಾನಿ, ಕವಿತಾ ಲಂಕೇಶ್ ಸೇರಿದಂತೆ ಹಲವು ಮಹಿಳಾ ಕಲಾವಿದರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೀಗ ನಮ್ಮ ಸ್ಯಾಂಡಲ್‌ವುಡ್‌ಗೆ ಅಂತಹ ಕಮಿಟಿ ಬೇಡ ಎನ್ನುವ ಕೂಗು ಕಲಾವಿದರಿಂದಲೇ ಕೇಳಿ ಬಂದಿದೆ.
ಸಭೆ ಬಳಿಕ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಕನ್ನಡ ಚಿತ್ರರಂಗಕ್ಕೂ ಸಮಿತಿ ಬೇಕಾ? ಬೇಡ್ವಾ? ಎನ್ನುವುದರ ಬಗ್ಗೆ ಚರ್ಚೆಯಾಗಿದೆ. ಮಹಿಳೆಯರ ಹಕ್ಕುಗಳನ್ನು ಕಾಪಾಡುವುದು ನಮ್ಮ ಹಕ್ಕು. ಮಹಿಳಾ ಆಯೋಗದ ಮೂಲಕ ಒಂದು ಸಮಿತಿ ರಚನೆ ಮಾಡಲು ನಿರ್ಧರಿಸಿದ್ದೇವೆ. ಈ ಸಭೆಗೆ ಸಿನಿಮಾರಂಗದ ಸಾಕಷ್ಟು ನಟಿಯರು ಬಂದಿರಲಿಲ್ಲ. ಈ ಬಗ್ಗೆ ಮುಂದೆ ಮತ್ತೊಂದು ಸಭೆ ಆಗಲಿದ್ದು, ಅದರಲ್ಲಿ ಎಲ್ಲ ನಟಿಯರು ಹಾಜರಾಗಬೇಕು ಎಂದು ಹೇಳಿದ್ದಾರೆ.
ಸಾ.ರಾ ಗೋವಿಂದು ಅವರೂ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಸಮಿತಿ ರಚಿಸುವ ಅಗತ್ಯವೇನಿಲ್ಲ. ಒಂದು ವೇಳೆ ಮಹಿಳೆಯರಿಗೆ ಏನಾದರೂ ಸಮಸ್ಯೆಗಳು ಎದುರಾದರೆ ಅದನ್ನು ಪರಿಹರಿಸಲು ಚಿತ್ರರಂದ ಸದಾ ಬದ್ಧವಾಗಿದೆ. ಯಾರಿಗಾದರೂ ಆ ರೀತಿಯ ಅನುಭವಗಳು ಆಗಿದ್ದರೆ, ಧೈರ್ಯವಾಗಿ ಬಂದು ನಮ್ಮ ಮುಂದೆ ಹೇಳಿಕೊಳ್ಳಬಹುದು. ನಾವೆಲ್ಲ ಸೇರಿ ಆ ಸಮಸ್ಯೆ ಪರಿಹರಿಸುತ್ತೇವೆ. ಪುಣ್ಯಕ್ಕೆ ಇಲ್ಲಿವರೆಗೆ ಅಂತಹ ದೂರುಗಳು ನಮಗೂ ಬಂದಿಲ್ಲ ಎಂದಿದ್ದಾರೆ.
ಒಟ್ಟಾರೆಯಾಗಿ ಹೇಮಾ ಕಮಿಟಿ ಮಾದರಿಯಲ್ಲೇ ಸ್ಯಾಂಡಲ್‌ವುಡ್‌ಗೂ ಕಮಿಟಿ ರಚಿಸಬೇಕು ಎನ್ನುವ ಕೂಗಿಗೆ ಅಷ್ಟೇನು ಬಲ ಇರಲಿಲ್ಲ. ಬಹುತೇಕರು ಸಮಿತಿ ಬೇಡ ಎಂದೇ ಅಭಿಪ್ರಾಯ ಹಂಚಿಕೊಂಡಿದ್ದು, ದುಡಿಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ (ಪಾಶ್) ಅಡಿಯಲ್ಲೇ ಒಂದು ಸಮಿತಿ ರಚಿಸುವಂತೆ ಫಿಲ್ಮ್ ಚೇಂಬರ್‌ಗೆ ಮಹಿಳಾ ಆಯೋಗ ಸೂಚಿಸಲಾಗಿದೆ. ಮುಂದೆ ಮತ್ತೊಂದು ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಬಳಿಕ ಚಿತ್ರರಂಗದ ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿತ್ತು.












Click it and Unblock the Notifications