Virat Kohli: ವಿರಾಟ್ 'ರನ್'ಗಲ್! ಕೊಹ್ಲಿ ಸಿನಿಮಾ ಮಾಡಿದ್ರೆ ಏನೆಲ್ಲಾ ಹೆಸರಿಡಬಹುದು ನೋಡಿ
ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ನವೆಂಬರ್ 15ರಂದು ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿ ಶಿವಣ್ಣ ಖಡಕ್ ಲುಕ್, ಅಭಿನಯಕ್ಕೆ ಮನ ಸೋತಿದ್ದಾರೆ. ಸಿನಿಮಾ ಕತೆ, ಆಕ್ಷನ್, ಸೆಂಟಿಮೆಂಟ್ ಎಲ್ಲಾ ಚನ್ನಾಗಿದ್ದು ಪ್ರೇಕ್ಷಕ ಚಿತ್ರಮಂದಿರದತ್ತ ಮುಖ ಮಾಡಿದ್ದಾನೆ. ಶಿವರಾಜ್‌ಕುಮಾರ್ ಅವರಿಗೆ ಇಂತಹ ಕಥೆಗಳು ಚನ್ನಾಗಿ ಒಪ್ಪುತ್ತವೆ ಎಂದು ಸಿನಿಮಾ ನೋಡಿದ ಬಹುತೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಸಿನಿಮಾವನ್ನು ವಿರಾಟ್ ಕೊಹ್ಲಿ ಮಾಡಿದ್ದರೆ!
ವಿರಾಟ್ ಕೊಹ್ಲಿ ಬೆಂಗಳೂರಿನ ದತ್ತು ಪುತ್ರ ಎಂದೇ ಅಭಿಮಾನಿಗಳು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಬೆಂಗಳೂರು ಕಂಡರೆ ವಿರಾಟ್ ಕೊಹ್ಲಿಗೂ ಅಷ್ಟೇ ಅಭಿಮಾನವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಭೈರತಿ ರಣಗಲ್ ಅವತಾರದ ಫೋಟೊ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಶಿವರಾಜ್ ಕುಮಾರ್ ಕೂಡ ಆರ್ ಸಿಬಿ ತಂಡದ ದೊಡ್ಡ ಅಭಿಮಾನಿ, ಕೊಹ್ಲಿಯನ್ನು ಕಂಡರೆ ಶಿವಣ್ಣನಿಗೂ ತುಂಬಾ ಇಷ್ಟ. ಕಳೆದ ಬಾರಿ ಐಪಿಎಲ್‌ನಲ್ಲಿ ಮೈದಾನದಲ್ಲೇ ಆರ್ ಸಿಬಿ ಪಂದ್ಯಗಳನ್ನು ವೀಕ್ಷಿಸಿ ಬೆಂಬಲಿಸಿದ್ದರು.
ಭೈರತಿ ರಣಗಲ್‌ನಲ್ಲಿ ಶಿವರಾಜ್‌ಕುಮಾರ್ ಮಾಸ್ ಲುಕ್ ಕೊಟ್ಟಿರುವ ಫೋಟೊವನ್ನು ಮಾರ್ಪಡಿಸಿ ಕೊಹ್ಲಿ ಫೋಟೊ ಹಾಕಲಾಗಿದ್ದು, ವಿರಾಟ್ ಕೊಹ್ಲಿ ಸಿನಿಮಾ ಮಾಡಿದರೆ ಏನು ಟೈಟಲ್ ಕೊಡಬಹುದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದು ಇದಕ್ಕೆ ಅಭಿಮಾನಿಗಳು ಬಗೆ ಬಗೆಯ ಟೈಟಲ್ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಅಭಿನಯದ ಸಿನಿಮಾಗೆ ಎನ್ ಹೆಸರಿಡಬೇಕು? 🎬🤔🔥
— Royal Challengers Bengaluru Kannada (@RCBinKannada) November 17, 2024
ಕಾಮೆಂಟ್ ಮಾಡಿ! ✍️👀#PlayBold #ನಮ್ಮRCB pic.twitter.com/X458yfcW2q
ವಿರಾಟ್ 'ರನ್'ಗಲ್!
ಆರ್ ಸಿಬಿ ಅಭಿಮಾನಿಗಳು ಈ ಪೋಸ್ಟ್‌ಗೆ ಹಲವು ಟೈಟಲ್ ಸೂಚಿಸಿದ್ದು ಕೆಲವು ಶೀರ್ಷಿಕೆಗಳು ಮನ ಸೆಳೆಯುವಂತಿದ್ದು ಇನ್ನಷ್ಟು ಟೈಟಲ್‌ಗಳು ತಮಾಷೆಯಾಗಿವೆ. ಪ್ರಣೂತ್ ಗೌಡ ಎನ್ನುವವರು 'ವಿರಾಟ್‌ನ ಮೈಲಿಗಲ್ಲು' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇಮ್ಮೋರ್ಟಲ್ ಎನ್ನುವ ಎಕ್ಸ್ ಖಾತೆ ಪ್ರತಿಕ್ರಿಯೆ ನೀಡಿದ್ದು 'ವಿರಾಟ್ ರನ್‌ಗಲ್' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ವಿರಾಟ ಪರ್ವ, ವೀರ ರನ್‌ಗಲ್, ಚಿನ್ನಸ್ವಾಮಿ ರಣಗಲ್ಲು (ಬ್ಯಾಟ್ ಹಿಡಿದ್ರೆ ಬರೀ ಮೈಲಿಗಲ್ಲು), ವಿರಾಟ ಪರ್ವ, ಬ್ಯಾಡಿಗೆ ಮಿರ್ಚಿ, ಕೊಹ್ಲಿ ರಣಗಲ್ ಎನ್ನುವ ಹಲವು ಶೀರ್ಷಿಕೆಗಳನ್ನು ನೀಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ
ಸದ್ಯ ಆಸ್ಟ್ರೇಲಿಯಾದಲ್ಲಿರುವ ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಕೊಹ್ಲಿ ವಿಫಲವಾಗಿದ್ದು ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿಲ್ಲ ಎಂದು ಕಡೆಗಣಿಸಬಾರದು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರರು ಆಸ್ಟ್ರೇಲಿಯಾ ತಂಡದ ನಾಯಕ ಪಾಟ್ ಕಮ್ಮಿನ್ಸ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.












Click it and Unblock the Notifications