Bharathi Vishnuvardhan: ಹೆಣ್ಣುಮಕ್ಕಳು ಜಡೆ ಹಾಕದಿದ್ರೆ ಏನೆಲ್ಲ ಆಗುತ್ತೆ? ನಟಿ ಭಾರತಿ ಶಾಕಿಂಗ್ ಹೇಳಿಕೆ
ಈಗೆಲ್ಲ ಮಾಡ್ರನ್ ಜಗತ್ತು, ನಮಗಿಷ್ಟ ಬಂದಂತೆ ನಾವಿರುತ್ತೇವೆ ಅನ್ನೋ ಜಮಾನ. ಇನ್ನು ಮೊದಲೆಲ್ಲ ಹೆಣ್ಣುಮಕ್ಕಳು ತಲೆಕೂದಲನ್ನು ಫ್ರೀಯಾಗಿ ಬಿಡುತ್ತಿರಲಿಲ್ಲ. ಒಂದು ವೇಳೆ ಬಿಟ್ಟರೂ ಅವರಿಗೆ ಹಿರಿಯರಿಂದ ಫುಲ್ ಕ್ಲಾಸ್ ಆಗುತ್ತಿತ್ತು. ಇದೇ ಕಾರಣಕ್ಕೆ ಹೆಣ್ಣುಮಕ್ಕಳು ಜಡೆ ಕಟ್ಟುವುದನ್ನು ಮಿಸ್ ಮಾಡುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ಸಂಪ್ರದಾಯಗಳು ಬದಿಗೆ ಸರಿದಿವೆ. ಈಗೆಲ್ಲ ಕೂದಲು ಫ್ರೀಯಾಗಿ ಬಿಡೋದೆ ಟ್ರೆಂಡ್ ಅಂತ ಕರೀತಾರೆ ಈ ಜನರೇಷನ್ ಹುಡುಗಿಯರು. ಆದರೆ ಸ್ಯಾಂಡಲ್‌ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಈ ವಿಚಾರದಲ್ಲಿ ಫುಲ್ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?
ಆಧುನಿಕತೆಯ ಹಾದಿಯಲ್ಲಿ ಸಾಗುತ್ತಿರುವ ಹುಡುಗಿಯರು ಈಗೆಲ್ಲ ಜಡೆ ಕಟ್ಟಿಕೊಳ್ಳುವ ಪದ್ಧತಿಗೆ ಬ್ರೇಕ್ ಹಾಕ್ತಿದ್ದಾರೆ. ಬಹುತೇಕರು ಈಗ ಫ್ರೀ ಹೇರ್ ಬಿಡುವುದನ್ನೇ ಇಷ್ಟಪಡುತ್ತಾರೆ. ಕೂದಲನ್ನು ಯಾವುದೇ ಹಂಗಿಲ್ಲದೆ ಬಿಡುವ ಹೆಣ್ಣುಮಕ್ಕಳು ಓಪನ್ ಹೇರ್ ಟ್ರೆಂಡ್ ಸೃಷ್ಟಿಸಿದ್ದಾರೆ. ಇವರ ಮುಂದೆ ಜಡೆ ಅಂತೆಲ್ಲ ಪ್ರಸ್ತಾಪ ಮಾಡಿದ್ರಂತೂ ಮುಖವನ್ನು ಹಾಗಲಕಾಯಿ ತಿಂದಂತೆ ಇಟ್ಕೋತಾರೆ. ಇನ್ನು ನಮ್ಮ ಕೂದಲು ನಮ್ಮಿಷ್ಟ ಎಂದು ಬೋಲ್ಡ್ ಆಗಿ ಮಾತನಾಡುವ ಹೆಣ್ಣುಮಕ್ಕಳ ಕುರಿತು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಮನೆ ಯೂಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿರುವ ಭಾರತಿ ವಿಷ್ಣುವರ್ಧನ್ ಅವರು, ಹೆಣ್ಣುಮಕ್ಕಳು ಜಡೆ ಹಾಕಿಕೊಳ್ಳಬೇಕು. ಕೂದಲನ್ನ ಬಿಟ್ಟುಕೊಂಡಿರಬಾರದು, ತುಂಬಾ ಕಷ್ಟದ ಕಾಲದಲ್ಲಿ ಮಾತ್ರ ಕೂದಲನ್ನು ಬಿಡುತ್ತಾರೆ. ನಮ್ಮ ಇತಿಹಾಸ ಸಂಪ್ರದಾಯಗಳನ್ನು ನೋಡುವುದಾದರೆ, ದ್ರೌಪದಿ ಯಾಕೆ ಕೂದಲನ್ನ ಬಿಟ್ಟಿದ್ದರು? ಕಷ್ಟಗಳ ನಿವಾರಣೆಯಾಗುವವರೆಗೆ ಅವರು ಕೂದಲನ್ನು ಕಟ್ಟಿರಲಿಲ್ಲ ಎಂದು ಪುರಾಣಗಳನ್ನು ಉಲ್ಲೇಖಿಸಿ ಕೂದಲ ಮಹತ್ವ ತಿಳಿಸಿದ್ದಾರೆ.
ಹಾಗಾಗಿ ನಾವು ಕೂದಲನ್ನು ಯಾಕೆ ಕಟ್ಟಿಕೊಳ್ಳಬೇಕು ಅಂದ್ರೆ, ನಮ್ಮ ಕೂದಲಿನಲ್ಲಿ ಜ್ಞಾನ ಸರಸ್ವತಿ ಗುಪ್ತವಾಗಿ ಇರುತ್ತಾಳೆ ಎನ್ನುವ ಪ್ರತೀತಿ ಇದೆ. ಹಾಗಾಗಿ ಆಕೆಯನ್ನು ನಾವು ಹಿಡಿದೇ ಇಟ್ಟುಕೊಳ್ಳಬೇಕು. ಅಂದರೆ ಜ್ಞಾನ ಸರಸ್ವತಿ ಇರೋ ಜಡೆಯನ್ನು ಕಟ್ಟಿರಲೇಬೇಕು. ಒಂದು ವೇಳೆ ಕೂದಲನ್ನು ಫ್ರೀಯಾಗಿ ಬಿಟ್ಟರೆ ಸರಸ್ವತಿ ನಮ್ಮನ್ನು ಬಿಟ್ಟು ಓಡಿ ಹೋಗುತ್ತಾಳೆ ಎಂದೂ ಭಾರತಿ ಹೇಳಿದ್ದಾರೆ.
ಜಡೆಯನ್ನು ಹಿಡಿದು ಕಟ್ಟಿದಾಗ ಸರಸ್ವತಿ ಕೂಡ ಅಲ್ಲಿಯೇ ಇರಲು ಇಚ್ಛಿಸುತ್ತಾಳೆ. ಇಲ್ಲದಿದ್ರೆ ನನ್ನ ಮೇಲೆ ಇವರಿಗೆ ಕಾಳಜಿ ಇಲ್ಲ ಎಂದು ದೂರ ಸರಿಯುತ್ತಾಳೆ. ನೀವು ಜಡೆ ಹಾಕಲ್ಲ ಅಂದ್ರೆ ನಿಮ್ಮ ಬಳಿ ಸರಸ್ವತಿ ಇರೋಕೆ ಚಾನ್ಸೇ ಇಲ್ಲ! ಎಂದಿದ್ದಾರೆ. ಈಗೆಲ್ಲ ದೇಶದಲ್ಲಿ ಯಾಕೆ ಎಲ್ಲರೂ ಇಷ್ಟೆಲ್ಲ ಕಷ್ಟ ಅನುಭವಿಸುತ್ತಿದ್ದಾರೆ ಎಂದರೆ ಇದೇ ಕಾರಣ ಎಂದೂ ಅವರು ಹೇಳಿದ್ದಾರೆ.

ಈಗೆಲ್ಲ ಮಕ್ಕಳು ಮಾತ್ರವಲ್ಲ, ತಾಯಂದಿರು ಕೂಡ ಜಡೆ ಕಟ್ಟುವುದಿಲ್ಲ. ನನಗೆ ಇದು ಅರ್ಥವೇ ಆಗುತ್ತಿಲ್ಲ, ಕೂದಲನ್ನ ಬಿಡುವುದರಿಂದ ಅದೇನು ಲಕ್ಷಣವೋ ಗೊತ್ತಿಲ್ಲ. ಅಲ್ಲದೆ ಜಡೆ ಬಿಡುವುದು ಪ್ರವೋಕ್ ಮಾಡಿದಂತೆಯೂ ಇರುತ್ತೆ. ನಾವು ನಮ್ಮನ್ನ ಗೌರವಿಸಿಕೊಳ್ಳಬೇಕೇ ಹೊರತು, ಮತ್ತೊಬ್ಬರನ್ನು ಆಕರ್ಷಿಸಲು ಅಲಂಕಾರ ಮಾಡಿಕೊಳ್ಳುವುದಲ್ಲ, ನಮ್ಮನ್ನ ನಾವು ಪ್ರೀತಿಸಿಕೊಳ್ಳಬೇಕು ಎಂದೂ ಅವರು ಅಭಿಪ್ರಾಯ ತಿಳಿಸಿದ್ದಾರೆ.
ಹೆಣ್ಣುಮಕ್ಕಳು ಲಕ್ಷಣವಾಗಿ ಜಡೆ ಹಾಕ್ಕೊಳ್ಳಿ, ಇಲ್ಲ ಗಂಟು ಹಾಕಿಕೊಳ್ಳಿ, ಇಲ್ಲವೇ ರಿಬ್ಬನ್ ಕಟ್ಟಿಕೊಳ್ಳಿ. ಯಾವ ಕಾರಣಕ್ಕೂ ಕೂದಲನ್ನು ಫ್ರೀಯಾಗಿ ಬಿಡಬೇಕು. ಯಾಕಂದ್ರೆ ನಮ್ಮ ಜ್ಞಾನ ಬೆಳೆಯಬೇಕು ಅಂದ್ರೆ ಜಡೆ ಹಾಕಿಕೊಳ್ಳಲೇಬೇಕು. ಲಕ್ಷಣ ಆಮೇಲೆ, ಆದ್ರೆ ನಮ್ಮ ಜ್ಞಾನ ಹಾಗೂ ಜೀವನಕ್ಕೆ ಇದು ಮುಖ್ಯ ಎಂದಿದ್ದಾರೆ. ಇದನ್ನು ಎಷ್ಟು ಮಂದಿ ಒಪ್ಪಿಕೊಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಇದೇ ಸತ್ಯ ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.











Click it and Unblock the Notifications