AR Rahman: ಎಆರ್ ರೆಹಮಾನ್ ಬಾಳಲ್ಲಿ ಬಿರುಗಾಳಿ! ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ
ಸಂಗೀತ ಮಾಂತ್ರಿಕರೆಂದೇ ಹೆಸರಾಗಿರುವ ಗಾಯಕ, ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ರೆಹಮಾನ್ ಪತ್ನಿ ಸಾಯಿರಾ ತಾವು ಗಂಡನಿಂದ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಸಾಯಿರಾ ಅವರ ವಕೀಲರಾದ ವಂದನಾ ಶಾ ಇಬ್ಬರು ವಿಚ್ಛೇದನ ಪಡೆಯುತ್ತಿರುವ ನಿರ್ಧಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತ ಚಲನಚಿತ್ರರಂಗದಲ್ಲಿ ಈ ಸುದ್ದಿ ಅಚ್ಚರಿಗೊಳ್ಳುವಂತೆ ಮಾಡಿದೆ.
"ಮದುವೆಯಾಗಿ ಹಲವು ವರ್ಷಗಳ ಬಳಿಕ, ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್‌ರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ನಡುವಿನ ಸಂಬಂಧದಲ್ಲಿ ಭಾವನಾತ್ಮಕ ಒತ್ತಡ ಹೆಚ್ಚಾಗಿದ್ದು, ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ ನಡುವೆ ಉತ್ತಮ ಪ್ರೀತಿಯಿದ್ದರೂ, ಉದ್ವಿಗ್ನತೆ, ಸಮಸ್ಯೆಗಳು ಇಬ್ಬರ ನಡುವೆ ಅಂತರವನ್ನು ಹೆಚ್ಚಿಸಿವೆ ಎಂದು ದಂಪತಿಗಳು ಅರ್ಥ ಮಾಡಿಕೊಂಡಿದ್ದಾರೆ.

ಈ ಸಮಯದಲ್ಲಿ ಇಬ್ಬರ ನಡುವೆ ಮತ್ತೆ ಬಾಂಧವ್ಯ ಉತ್ತಮವಾಗಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡಿದ್ದು, ಸಾಯಿರಾ ಅವರು ನೋವು ಮತ್ತು ಸಂಕಟದಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸಾಯಿರಾ, ಸಾರ್ವಜನಿಕರು ಗೌಪ್ಯತೆ, ಘನತೆ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಆರ್ ರಹಮಾನ್ ಮತ್ತು ಸಾಯಿರಾ 1995ರಲ್ಲಿ ಮದುವೆಯಾಗಿದ್ದರು, ಇವರಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎನ್ನುವ ಮೂವರು ಮಕ್ಕಳಿದ್ದಾರೆ. ಎಆರ್ ರೆಹಮಾನ್ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಸಂಗೀತ ನಿರ್ದೇಶಕರು, ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಕೂಡ ಅವರದ್ದಾಗಿದೆ.
ಎಆರ್ ರೆಹಮಾನ್ ಇತ್ತೀಚೆಗೆ ಸಂಗೀತ ನಿರ್ದೇಶನ ಮಾಡಿದ ಧನುಷ್ ನಿರ್ದೇಶನದ ರಾಯನ್ ಸಿನಿಮಾದ ಹಾಡು ಭಾರಿ ಜನಪ್ರಿಯವಾಗಿತ್ತು. ಛಾವಾ, ಥಗ್ ಲೈಫ್, ಗಾಂಧಿ ಟಾಕ್ಸ್ ಮುಂತಾದ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.












Click it and Unblock the Notifications