Silent Sunil: ಡಾಲಿ ಮದುವೆಗೆ ಬಂದು ವಿಶ್ ಮಾಡಿದ ರೌಡಿ ಸೈಲೆಂಟ್ ಸುನೀಲ, ವಿಡಿಯೋ ವೈರಲ್
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್-ಧನ್ಯತಾ ಅವರ ಅದ್ಧೂರಿ ವಿವಾಹ ಸಮಾರಂಭ ಮೈಸೂರಿನಲ್ಲಿ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ನಟ ನಟಿಯರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು. ಡಾಲಿ ಮದುವೆಗೆ ಬೆಂಗಳೂರಿನ ನಟೋರಿಯಸ್ ರೌಡಿ ಕೂಡ ಬಂದು ವಿಶ್ ಮಾಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆ ಹುಟ್ಟುಹಾಕಿದೆ.
ಎರಡು ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಡಾಲಿ ಅವರ ಮದುವೆಗಾಗಿ ಅದ್ಧೂರಿ ಸೆಟ್‌ಗಳನ್ನು ಸಹ ನಿರ್ಮಿಸಲಾಗಿತ್ತು. ಆರತಕ್ಷತೆ ಹಾಗೂ ಮದುವೆ ಸಮಾರಂಭಕ್ಕಾಗಿ ಬೃಹತ್ ವೇದಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಶನಿವಾರ ನಡೆದ ಇವರ ಆರತಕ್ಷತೆಗೆ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. ಸಿನಿಮಾ ನಟ ನಟಿಯರು, ರಾಜಕಾರಣಿಗಳು ಆಗಮಿಸಿ, ಡಾಲಿ ಜೋಡಿಗೆ ವಿಶ್ ಮಾಡಿ ಹೋದರು. ಇದೇ ವೇಳೆ ಬೆಂಗಳೂರಿನ ರೌಡಿ ಸೈಲೆಂಟ್ ಸುನೀಲ ಕೂಡ ಕಾಣಿಸಿಕೊಂಡಿದ್ದಾನೆ. ವೇದಿಕೆಗೆ ಬಂದು ಡಾಲಿ ಅವರೊಂದಿಗೆ ಆಪ್ತವಾಗಿ ಮಾತನಾಡಿ ವಿಶ್ ಮಾಡಿದ್ದಾನೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. "ಇಷ್ಟಕ್ಕೂ ಡಾಲಿಗೂ ಈ ರೌಡಿ ಸುನೀಲನಿಗೂ ಏನು ಸಂಬಂಧ? ಎಂದು ಪ್ರಶ್ನೆ ಎತ್ತಿದ್ದಾರೆ. ನಿಮ್ಮಿಬ್ಬರ ನಡುವೆ ಇಷ್ಟೊಂದು ಆಪ್ತತೆ ಯಾವಾಗಿನಿಂದ?" ಎಂದು ಕೇಳುತ್ತಿದ್ದಾರೆ. "ಸಿನಿಮಾ ನಟರಾದ ನೀವು ರೌಡಿ ಜೊತೆಗೆ ಏಕೆ ನಂಟು ಹೊಂದಿದ್ದೀರಿ?" ಎಂದು ಡಾಲಿಗೆ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಡಾಲಿ ಹೇಳುತ್ತಿದ್ದ ಕೆಲವು ಜೀವನ ಸಂದೇಶದ ವಿಡಿಯೋಗಳನ್ನು ಈ ವಿಡಿಯೋ ಜೊತೆ ಲಿಂಕ್ ಮಾಡಿ ವ್ಯಂಗ್ಯವೂ ಆಡುತ್ತಿದ್ದಾರೆ.
"ವೇದಿಕೆ ಮೇಲೆ ನಿಂತು ನೀವು ಶರಣರ ವಚನಗಳನ್ನು ಹೇಳುತ್ತೀರಿ. ಸಮಾಜ ಹಾಗಿರಬೇಕು, ಹೀಗಿರಬೇಕು ಎಂದು ಉಪದೇಶ ಕೊಡ್ತೀರಿ. ಈಗ ರೌಡಿಗಳೊಂದಿಗೆ ಸ್ನೇಹ ಬೆಳೆಸಿಕೊಂಡು ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದೀರಿ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ಡಾಲಿ ವಿರುದ್ಧ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಡಾಲಿ ಮದುವೆಯಲ್ಲಿ ರೌಡಿ ಸೈಲೆಂಟ್ ಸುನೀಲ ಕಾಣಿಸಿಕೊಂಡಿರುವುದು ಸದ್ಯ ವಿವಾದಕ್ಕೂ ಕಾರಣವಾಗಿದೆ.

ಸೈಲೆಂಟ್ ಸುನೀಲನ ಹಿನ್ನೆಲೆ ಏನು?: ಬೆಂಗಳೂರಿನಲ್ಲಿ ಈಗಿನ ರೌಡಿಗಳ ಪೈಕಿ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ ಕೂಡ ಒಬ್ಬ. ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ ಸೈಲೆಂಟ್ ಸುನೀಲ ಚಿಕ್ಕವಯಸ್ಸಿನಲ್ಲೇ ಬಾಲಾಪರಾಧಿಯಾಗಿ ಜೈಲುವಾಸ ಅನುಭವಿಸಿದ್ದ. ಈತನ ಮೇಲೆ 20 ವರ್ಷ ವಯಸ್ಸಿನಲ್ಲೇ ರೌಡಿಶೀಟ್ ಕೂಡ ತೆರೆಯಲಾಗಿತ್ತು. ಸುಮಾರು 1996ರಿಂದಲೂ ಸುನೀಲ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ.

ಈತನ ವಿರುದ್ಧ ರಾಜಾಜಿನಗರ, ಸುಬ್ರಹ್ಮಣ್ಯನಗರ ಸೇರಿದಂತೆ ಹಲವು ಸ್ಟೇಷನ್‌ಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹತ್ತಾರು ಕೇಸ್‌ಗಳು ದಾಖಲಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಆ ಕೇಸ್‌ಗಳೆಲ್ಲ ಕ್ಲೋಸ್ ಆಗಿದ್ದು, ರೌಡಿಶೀಟ್ ಮಾತ್ರ ಹಾಗೇ ಉಳಿದಿದೆ ಎಂದು ಹೇಳಲಾಗಿದೆ. ಅಲ್ಲದೆ ಸೈಲೆಂಟ್ ಸುನೀಲ ಬಿಜೆಪಿ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಬರಲು ಕೂಡ ಮುಂದಾಗಿದ್ದ. ಚಾಮರಾಜಪೇಟೆ ಕೇತ್ರದಿಂದ ಕಣಕ್ಕಿಳಿದು ಎಂಎಲ್‌ಎ ಆಗಲು ಹೊರಟಿದ್ದ. ಆದರೆ, ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಬಿಜೆಪಿ ಸದಸ್ಯತ್ವ ಕೂಡ ರದ್ದು ಮಾಡಲಾಗಿತ್ತು.












Click it and Unblock the Notifications