Actor Darshan: ಈ ಹೋಮ ದರ್ಶನ್‌ಗಾಗಿ ಅಲ್ಲ! ಕಾಟೇರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದೇನು?
ಕೆಜಿಎಫ್, ಕಾಂತಾರ, ಚಾರ್ಲಿಯಂತಹ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದಿದ್ದ ಸ್ಯಾಂಡಲ್‌ವುಡ್ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ, ಈ ವರ್ಷ ಬಿಡುಗಡೆಯಾದ ಯಾವ ಸಿನಿಮಾಗಳೂ ಸರಿಯಾಗಿ ಒಂದು ವಾರ ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಸಿನಿಮಾಗೆ ಜನ ಬರ್ತಿಲ್ಲ ಅನ್ನೋದು ಒಂದು ಕಡೆಯಾದರೆ, ದರ್ಶನ್ ಬಂಧನ ಕೂಡ ಕನ್ನಡ ಚಿತ್ರರಂಗಕ್ಕೆ ಆಘಾತ ಕೊಟ್ಟಿದೆ.
ಆಗಸ್ಟ್ 13, 14 ರಂದು ಕನ್ನಡ ಸಿನಿಮಾ ಕಲಾವಿದರ ಸಂಘದ ಕಚೇರಿಯಲ್ಲಿ ಪೂಜೆ, ಹೋಮ ಹಮ್ಮಿಕೊಳ್ಳಲಾಗಿದೆ. ಈ ಪೂಜೆಯನ್ನು ರಾಕ್‌ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಆಯೋಜಿಸಿದ್ದು, ದರ್ಶನ್ ಬಿಡುಗಡೆಗಾಗಿ ಹೋಮ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು. ಇದಕ್ಕೆ ಈಗ ರಾಕ್‌ಲೈನ್ ವೆಂಕಟೇಶ್ ಸ್ಪಷ್ಟನೆ ಕೊಟ್ಟಿದ್ದು, ಈ ಪೂಜೆ ದರ್ಶನ್ ಬಿಡುಗಡೆಗಾಗಿ ಮಾಡುತ್ತಿಲ್ಲ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ, ಒಳ್ಳೆ ಸಿನಿಮಾಗಳಿಲ್ಲದೆ ಹಲವು ಸಿಂಗಲ್ ಸ್ಕ್ರೀನ್ ಸಿನಿಮಾ ಮಂದಿರಗಳು ಬಾಗಿಲು ಮುಚ್ಚುತ್ತಿವೆ. ಸಿನಿಮಾ ಕಲಾವಿದರು, ತಂತ್ರಜ್ಞರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು ಚಿತ್ರರಂಗದ ಬೆಳವಣಿಗೆಗಾಗಿ ಹೋಮ ಮತ್ತಯ ಪೂಜೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ರಾಕ್‌ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್‌ಲೈನ್ ವೆಂಕಟೇಶ್, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಹೋಮ ಮಾಡಲಾಗುತ್ತದೆ. ನಟ ದರ್ಶನ್ ಜೈಲು ಸೇರಿದ್ದಾರೆ ಎನ್ನುವ ಕಾರಣಕ್ಕೆ ಈ ಪೂಜೆ ಮಾಡಲಾಗುತ್ತಿದೆ ಎಂದು ಅನೇಕರು ಅನುಮಾನಪಟ್ಟದ್ದಾರೆ. ಅದೆಲ್ಲಾ ಸುಳ್ಳು, ದರ್ಶನ್‌ಗಾಗಿ ಪೂಜೆ ಮಾಡುವುದಿದ್ದರೆ ಮನೆಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ದೊಡ್ಡಣ್ಣ ಅವರ ಇಚ್ಛೆಯಂತೆ ಪೂಜೆ
ಅನೇಕರು ಇದೇ ವಿಚಾರವಾಗಿ ನನಗೆ ಕರೆ ಮಾಡಿ ಕೇಳಿದ್ದಾರೆ. ಹೋಮ ಮತ್ತು ಪೂಜೆ ಬಿಟ್ಟು ಇನ್ನೇನು ಇಲ್ಲ. ಕೋವಿಡ್ ಬಳಿಕ ಪೂಜೆ ಮಾಡಬೇಕು ಅಂದುಕೊಂಡಿದ್ದೆವು, ಚಿತ್ರರಂಗದ ಅನೇಕರನ್ನು ಕಳೆದುಕೊಂಡೆವು. ಪೂಜೆ ಮಾಡಿಸಬೇಕು ಎಂದು ದೊಡ್ಡಣ್ಣ ಒಂದು ತಿಂಗಳ ಹಿಂದೆಯೇ ಕೇಳಿದ್ದರು, ಆಗಸ್ಟ್ 14ರಂದು ಒಳ್ಳೆಯ ದಿನ ಎಂದು ಪೂಜೆ ಮಾಡುತ್ತಿದ್ದೇವೆ ಎಂದರು.
ಚಿತ್ರರಂಗದ ಉಳಿವು ಮತ್ತು ಅಭಿವೃದ್ಧಿಗಾಗಿ ಈ ಪೂಜೆ ನಡೆಸಲಾಗುತ್ತಿದೆ. ಚಿತ್ರರಂಗದ ಕಾರ್ಮಿಕರ ಒಕ್ಕೂಟ, ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಎಲ್ಲರೂ ಸೇರಿಯೇ ಈ ಪೂಜೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications