Dolly Dhananjay: ನಟ ಡಾಲಿ ಧನಂಜಯ್ "ಅದ್ಧೂರಿ ವಿವಾಹಕ್ಕೆ" ಇದೇ ಕಾರಣ !
Dolly Dhananjay: ನಟ ಡಾಲಿ ಧನಂಜಯ್ ಅವರ ವಿವಾಹ ಅದ್ಧೂರಿಯಾಗಿ ನಡೆಯಲಿದೆ. ಡಾಲಿ ಅವರ ವಿವಾಹಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಡಾಲಿ ಅವರ ವಿವಾಹ ನಿಗದಿಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಈ ವಿಚಾರವಾಗಿ ಚರ್ಚೆಗಳು ನಡೆಯುತ್ತಲ್ಲೇ ಇವೆ. ವಿವಾಹ ಆಮಂತ್ರಣ ಪತ್ರ ಹಾಗೂ ಗಣ್ಯರನ್ನು ಕರೆಯುವುದು ಹಾಗೂ ನಟ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎನ್ನುವುದು ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ. ಈ ಎಲ್ಲದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾದ ಮತ್ತೊಂದು ವಿಷಯವೆಂದರೆ ಡಾಲಿ ಧನಂಜಯ್ ಅವರು ಅತ್ಯಂತ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ ಎನ್ನುವುದು.
ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ... ಎನ್ನುತ್ತಿದ್ದ ಡಾಲಿ ಅವರು ಬೆಳೆದ ಮೇಲೆ ಆ ಮಾತಿನಂತೆಯೇ ನಡೆದುಕೊಳ್ಳಬೇಕಿತ್ತು ಎಂದು ಕೆಲವರು ವಾದ ಮಾಡಿದ್ದರು. ಇನ್ನೂ ಕೆಲವರು ಇದು ಅವರ ವೈಯಕ್ತಿಕ ವಿಚಾರ ಅವರಿಗೆ ಇಷ್ಟವಾದಂತೆ ಮಾಡಿಕೊಳ್ಳಲಿ ಬಿಡಿ ಎಂದಿದ್ದರು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೂ ಡಾಲಿ ಅವರೇ ಉತ್ತರಿಸಿದ್ದಾರೆ.

ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರ ವಿವಾಹ ಫೆಬ್ರವರಿ 15 ಮತ್ತು 16ರಂದು ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಸಮಾರಂಭಕ್ಕಾಗಿ ವಿಶಾಲವಾದ ಜಾಗದಲ್ಲಿ ಚಾಮುಂಡೇಶ್ವರಿ ದೇಗುಲದ ಮಾದರಿಯಲ್ಲಿ ಬೃಹತ್ ಮಂಟಪ ನಿರ್ಮಾಣದ ಸಿದ್ಧತೆ ಜೋರಾಗಿ ನಡೆಯುತ್ತಿದೆ.
ಡಾಲಿ ಅವರು ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ... ಎಂದಿದ್ದರು. ಇದನ್ನು ಕರ್ನಾಟಕದ ಜನತೆ ಹಾಗೂ ಬಡ, ಮಧ್ಯಮ ವರ್ಗದವರು ಮೆಚ್ಚಿಕೊಂಡಿದ್ದರು. ಆದರೆ ವಿವಾಹದ ವಿಚಾರದಲ್ಲಿ ಡಾಲಿ ಅವರು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಇದೇ ಮಾದರಿಯಲ್ಲಿ ಸರಳವಾಗಿ ವಿವಾಹವಾಗಿದ್ದರೆ ಚೆನ್ನಾಗಿತ್ತು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದರು. ಡಾಲಿ ಅವರ ಅಭಿಮಾನಿಗಳು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರು ವಿವಾಹ ಕಾರ್ಯಕ್ರಮ ಯಾವ ಕಾರಣಕ್ಕೆ ಇಷ್ಟೊಂದು ದೊಡ್ಡದಾಯಿತು ಎನ್ನುವ ಬಗ್ಗೆ ವಿವರಣೆ ಕೊಟ್ಟಿದ್ದಾರೆ.
ಮದುವೆಯ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಮೈಸೂರಿನೊಂದಿಗೆ ನನಗೆ ತುಂಬಾ ಭಾವನಾತ್ಮಕ ನಂಟಿದೆ. ನಾನು ಓದಿದ್ದು, ರಂಗಭೂಮಿಯಲ್ಲಿ ನಟಿಸಿದ್ದು ನಟನೆಯ ನಂಟು ಬೆಳೆದಿದ್ದು ಎಲ್ಲವೂ ಇಲ್ಲಿಂದಲೇ. ಅದೇ ಕಾರಣಕ್ಕೆ ನಾನು ಇಲ್ಲಿ ಮದುವೆ ಆಗುತ್ತಿದ್ದೇನೆ ಎಂದು ಅವರು ಮೈಸೂರಿನಲ್ಲಿ ಮದುವೆ ಆಯೋಜಿಸಿರುವ ಬಗ್ಗೆ ಹೇಳಿದ್ದಾರೆ. ಮುಂದುವರಿದು ಯಾವ ಕಾರಣಕ್ಕೆ ವಿವಾಹ ಅದ್ಧೂರಿಯಾಗಿ ನಡೆಯುತ್ತಿದೆ ಎನ್ನುವ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಸರಳವಾಗಿಯೇ ಮದುವೆ ಆಗಬೇಕು ಅಂತ ಅಂದುಕೊಂಡಿದ್ದೆ. ಆದರೆ ಮನೆಯವರು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ವಿವಾಹ ಕಾರ್ಯಕ್ರಮ ದೊಡ್ಡದಾಗಿ ಎಂದು ಅವರು ಹೇಳಿದ್ದಾರೆ. ನನ್ನ ಅಭಿಮಾನಿಗಳಿಗೋಸ್ಕರವೇ ವಿದ್ಯಾಪತಿ ದ್ವಾರವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನಸಾಮಾನ್ಯರು ಹಾಗೂ ವಿಐಪಿಗಳಿಗೂ ಸಹ ಒಂದೇ ತರ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದೊಂದಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಸಹ ಸ್ನೇಹಿತರು ಬರ್ತಾ ಇದ್ದಾರೆ. ಅಂದಾಜು 35,000 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications