Ram Gopal Varma: ಕಮಲ್ ಬೆಂಬಲಿಸಿ ಕನ್ನಡಿಗರನ್ನ ಗೂಂಡಾಗಳು ಎಂದ ರಾಮ್ ಗೋಪಾಲ್ ವರ್ಮಾ
ತಮಿಳು ನಟ ಕಮಲ್ ಹಾಸನ್ ಅವರ ಕನ್ನಡ ವಿವಾದದ ಕಿಚ್ಚು ಹೊತ್ತಿಕೊಂಡಿರುವ ಹೊತ್ತಲ್ಲೇ ಇದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ ಖ್ಯಾತ ನಿರ್ದೇಶಕ. ಹೌದು ಈಗಾಗಲೇ ಕನ್ನಡಿಗರನ್ನು ಎದುರು ಹಾಕಿಕೊಂಡಿರುವ ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೂ ಸಂಕಷ್ಟ ಎದುರಾಗಿದೆ. ಹೀಗಿರುವಾಗ ಸದಾ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಾಗುವ ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕನ್ನಡಿಗರನ್ನು ಗೂಂಡಾ ಎಂದು ಕರೆದಿದ್ದಾರೆ.
ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಕನ್ನಡ ಭಾಷೆಯ ಕುರಿತು ಅವರ ಇತ್ತೀಚಿನ ಹೇಳಿಕೆಗಳು ಭಾರಿ ಟೀಕೆಗೆ ಒಳಗಾಗಿದೆ. ಕನ್ನಡ ಪರ ಸಂಘಟನೆಗಳು ಕಮಲ್ ವಿರುದ್ಧ ಗರಂ ಆಗಿದ್ದು, ಕೂಡಲೇ ಕ್ಷಮೆಯಾಚಿಸುವಂತೆ ಡೆಡ್‌ಲೈನ್ ನೀಡಿವೆ. ಆದರೆ ನಾನು ಕ್ಷಮೆ ಕೇಳಲ್ಲ ಎನ್ನುವ ಮೂಲಕ ಕಮಲ್ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದರ ನಡುವೆ ರಾಮ್‌ಗೋಪಾಲ್ ವರ್ಮಾ ಕೂಡ ಕಮಲ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ʼಪ್ರಜಾಪ್ರಭುತ್ವದ ಹೊಸ ಹೆಸರು ಅಸಹಿಷ್ಣುತೆ, ವಾಸ್ತವದ ನಿಖರತೆಯನ್ನು ಲೆಕ್ಕಿಸದೆ, ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾವನ್ನು ನಿಷೇಧಿಸುವ ಬೆದರಿಕೆಗಳು ಹೊಸ ರೀತಿಯ ಗೂಂಡಾಗಿರಿಗೆ ಸಮಾನವಾಗಿದೆ ಎಂದು ಟ್ವೀಟ್ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ನಟನ ಬೆಂಬಲಕ್ಕೆ ನಿಂತಿದ್ದಾರೆ. ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ನಿಷೇಧ ಮಾಡುವುದು ಖಂಡಿಸಿದ್ದಾರೆ.
ದಿಢೀರ್ ಟ್ವೀಟ್ ಡಿಲೀಟ್
ರಾಮ್ ಗೋಪಾಲ್ ವರ್ಮಾ ಅವರು ಸದಾ ಟೀಕಿಸುವ ಟ್ವೀಟ್‌ಗಳನ್ನು ಮಾಡುವಲ್ಲಿ ಹೆಸರುವಾಸಿ. ಹಾಗಾಗಿ ಸದ್ಯ ಕರ್ನಾಟಕದಲ್ಲಿ ಹೊತ್ತಿರುವ ಕನ್ನಡ ಭಾಷಾ ವಿವಾದದ ಬೆಂಕಿಗೆ ತಮ್ಮ ಟ್ವೀಟ್ ಮೂಲಕ ಕಿಡಿ ಹತ್ತಿಸಲು ಮುಂದಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಆರ್‌ಜಿವಿ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಕನ್ನಡಿಗರನ್ನು ಗೂಂಡಾಗಳೆಂದು ಕರೆದ ಕಾರಣ, ಇದು ಮತ್ತೊಂದು ತಿರುವು ಪಡೆದುಕೊಳ್ಳಬಹುದು ಎಂದು ಯೋಚಿಸಿ, ಟ್ವೀಟ್ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಗೋಪಾಲ್ ವರ್ಮ ಕೂಡ ಕನ್ನಡಿಗರನ್ನು ಗೂಂಡಾಗಳೆಂದು ಕರೆದಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications