Puneeth Rajkumar: ಅಪ್ಪು ಮೊದಲ ಸಂಬಳ ಎಷ್ಟು ಸಾವಿರ ಗೊತ್ತಾ?
ಪುನೀತ್ ರಾಜ್‌ಕುಮಾರ್ ಕನ್ನಡಿಗರು ಎಂದೂ ಮರೆಯದ ಹೆಸರು. ಅಪ್ಪು ಕನ್ನಡಿಗರನ್ನು ಬಿಟ್ಟುಹೋಗಿ 3 ವರ್ಷಗಳಾಗಿದೆ ಆದರೆ ಕನ್ನಡಿಗರ ಮನಸ್ಸಿನಲ್ಲಿ ಪುನೀತ್ ಎಂದಿಗೂ ಅಜರಾಮರ. ಪುನೀತ್ ರಾಜ್‌ಕುಮಾರ್ ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳಿಗೆ ಹಬ್ಬ, ಅಭಿಮಾನಿಗಳನ್ನು ಮಾತ್ರವಲ್ಲ ಕುಟುಂಬ ಸಮೇತ ಜನ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ್ದರು ಅಪ್ಪು. ಸಿನಿಮಾ ಮಾತ್ರವಲ್ಲದೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ.
ಅಪ್ಪು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಅಪ್ಪು ತಾವು ಪಡೆದ ಮೊದಲ ಸಂಬಳದ ಬಗ್ಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಸಂಸದ ತೇಜಸ್ವಿ ಸೂರ್ಯ ಜೊತೆ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ತಾವು ಪಡೆದ ಮೊದಲ ಸಂಬಳದ ಬಗ್ಗೆ ಹಂಚಿಕೊಂಡಿದ್ದರು.

ಮೊದಲ ಸಂಬಳ ಪಡೆದಿದ್ದು ಯಾವಾಗ?
ಪುನೀತ್ ರಾಜ್‌ಕುಮಾರ್ ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು. ಬೆಟ್ಟದ ಹೂವು ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದು ಮಿಂಚಿದವರು. ಅಪ್ಪ ರಾಜ್‌ಕುಮಾರ್ ಜೊತೆ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಜಿದ್ದಿಗೆ ಬಿದ್ದವರಂತೆ ಅಪ್ಪನ ಎದುರು ನಟಿಸಿ ಮಿಂಚಿದ್ದವರು ಪುನೀತ್ ರಾಜ್‌ಕುಮಾರ್.
ಬಾಲನಟರಾಗಿದ್ದಾಲೆ ಪುನೀತ್ ರಾಜ್‌ಕುಮಾರ್ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟವರು. ಹಾಗಾದರೆ ಸಿನಿಮಾದಲ್ಲಿ ಅಭಿನಯಿಸಲು ಅವರು ದುಡ್ಡು ಪಡೆಯುತ್ತಿದ್ದರಾ ಎನ್ನುವ ಪ್ರಶ್ನೆಗೆ ಕೂಡ ಉತ್ತರ ಕೊಟ್ಟಿದ್ದಾರೆ. ಚಿಕ್ಕ ಹುಡುಗನಿದ್ದಾಗ ಸಿನಿಮಾದಲ್ಲಿ ನಟಿಸಲು ನಾನು ಹಣ ಪಡೆಯುತ್ತಿರಲಿಲ್ಲ ಆದರೆ ನನಗೆ ಬೇಕಾದ್ದನ್ನು ಕೊಡಿಸಿದರೆ ಮಾತ್ರ ನಟಿಸುತ್ತಿದ್ದೆ, ತುಂಬಾ ಖರ್ಚು ಮಾಡಿಸಿಬಿಡುತ್ತಿದ್ದೆ, ಅದಕ್ಕೆ ನನ್ನಮ್ಮ ನನಗೆ ದುಬಾರಿ ಬಾಲನಟ ಎಂದು ಕರೆಯುತ್ತಿದ್ದರು ಎಂದಿದ್ದಾರೆ.
16ನೇ ವರ್ಷದಲ್ಲಿ ಮೊದಲ ಸಂಬಳ
16 ವರ್ಷದವನಿದ್ದಾಗ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ ಆಗ ನನಗೆ 10 ಸಾವಿರ ಸಂಬಳ ಕೊಡುತ್ತಿದ್ದರು ಎಂದು ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ. ತಮ್ಮದೇ ಸಂಸ್ಥೆಯಲ್ಲಿ ಕೆಲಸದವನಾಗಿ ಕೆಲಸ ಮಾಡಿದ್ದೆ ಎನ್ನುವ ವಿಚಾರ ಕೇಳಿ ಸಂಸದ ತೇಜಸ್ವಿ ಸೂರ್ಯ ಕೂಡ ಅಚ್ಚರಿಗೊಂಡಿದ್ದರು. ಅದಾದ ಬಳಿಕ ಪುನೀತ್ ರಾಜ್‌ಕುಮಾರ್ ಹಲವು ವ್ಯವಹಾರಗಳನ್ನು ಮಾಡುತ್ತಿದ್ದರು.
ಅದಾದ ಬಳಿಕ 2002ರಲ್ಲಿ ಪುನೀತ್ ರಾಜ್‌ಕುಮಾರ್ ಅಪ್ಪು ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಬಂದವರು ಪುನೀತ್ ರಾಜ್‌ಕುಮಾರ್. ಅಪ್ಪು ಸಿನಿಮಾ ಎಂದರೆ ಮಕ್ಕಳು, ಮಹಿಳೆಯರು ಇಷ್ಟಪಟ್ಟು ನೋಡುತ್ತಿದ್ದರು.
ಕೋಟ್ಯಂತರ ಜನರ ಆಶೀರ್ವಾದ, ಕನ್ನಡಿಗರ ಪ್ರೀತಿಯನ್ನು ಪಡೆದುಕೊಂಡಿದ್ದ ಪುನೀತ್ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ, ಅಕ್ಟೋಬರ್ 29, 2021ರಂದು ಹೃದಯ ಸ್ಥಂಭನದಿಂದ ಕನ್ನಡಿಗರನ್ನು ಬಿಟ್ಟು ಹೋದರು. ದೈಹಿಕವಾಗಿ ಅವರು ನಮ್ಮ ಜೊತೆ ಇಲ್ಲದೇ ಇದ್ದರೂ, ಸಿನಿಮಾ ಮೂಲಕ, ತಮ್ಮ ವ್ಯಕ್ತಿತ್ವದ ಮೂಲಕ ಎಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಇರುತ್ತಾರೆ.












Click it and Unblock the Notifications