ಡೈರೆಕ್ಟರ್ ಪ್ರೇಮ್ ಹೀರೋ ಆಗೋದನ್ನ ತಡೆದಿದ್ದ ರಾಜ್ ಕುಟುಂಬ, ಯಾಕೆ?
ಸ್ಯಾಂಡಲ್‌ವುಡ್‌ನ ಹಿಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಪ್ರೇಮ್ ಹಲವು ಸಿನಿಮಾಗಳಲ್ಲಿ ಡೈರೆಕ್ಟ್ ಮಾಡಿ ಛಾಪು ಮೂಡಿಸಿದ್ದಾರೆ. ಪ್ರೇಮ್ ಡೈರೆಕ್ಷನ್‌ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲ ಸೂಪರ್ ಡೂಪರ್ ಹಿಟ್ ಕಂಡಿದ್ದವು. ಅಂತಹ ಕಥೆಗಳಿಗೆ ಹೆಸರಾಗಿದ್ದ ಪ್ರೇಮ್ ಅವರು ರಾಜ್ ಕುಟುಂಬದ ನಟರಿಗೂ ಸಿನಿಮಾ ನಿರ್ದೇಶಿಸಿ ಗೆದ್ದಿದ್ದರು. ಆದರೆ, ಪ್ರೇಮ್ ಅವರು ನಟರಾಗುವ ಹುಮ್ಮಸ್ಸಿನಲ್ಲಿದ್ದಾಗ ಅದನ್ನು ತಡೆದಿತ್ತಂತೆ ರಾಜ್ ಕುಟುಂಬ.
ಅಚ್ಚರಿ ಎನಿಸಿದರೂ ಇದು ನಿಜ ಎನ್ನುತ್ತಾರೆ ಪ್ರೇಮ್. ಮೊದಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಪ್ರೇಮ್ ಅವರು ಜೋಗಿ ಸಿನಿಮಾ ನಿರ್ದೇಶಿಸಿದ್ದರು. ಓಂ ಬಳಿಕ ಶಿವಣ್ಣನಿಗೆ ಹೊಸ ತಿರುವು ಕೊಟ್ಟಿದ್ದೇ ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾ. ಜೋಗಿ ಇಂದಿಗೂ ಕನ್ನಡದ ಹಿಟ್ ಸಿನಿಮಾಗಳ ಸಾಲಿನಲ್ಲೇ ಉಳಿದಿದೆ. ತಮ್ಮ ಪ್ರತಿಭೆ ಮೂಲಕ ಪ್ರೇಮ್ ಪುನೀತ್ ರಾಜ್‌ಕುಮಾರ್ ಅವರಿಗೂ ಒಂದು ಸಿನಿಮಾ ನಿರ್ದೇಶಿಸಿದ್ದರು. ಈ ರೀತಿ ರಾಜ್ ಕುಟುಂಬಕ್ಕೆ ಪ್ರೇಮ್ ತೀರಾ ಹತ್ತಿರದವರೇ ಆಗಿಬಿಟ್ಟಿದ್ದರು.

ನಿರ್ದೇಶನದಲ್ಲಿ ಗೆದ್ದಿದ್ದ ಪ್ರೇಮ್ ಅವರಿಗೆ ತೆರೆ ಮೇಲೆ ನಟನಾಗಿ ಕಾಣಿಸಿಕೊಳ್ಳಬೇಕು ಎಂದು ಮಹಾದಾಸೆ ಇತ್ತು. ಇನ್ನೇನು ನಟನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಬೇಕು ಎನ್ನುವ ಘಳಿಗೆಯಲ್ಲಿ ರಾಜ್‌ಕುಟುಂಬದ ಯಜಮಾನಿಯಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ನೇರವಾಗಿ ಒಂದು ಮಾತನ್ನು ಪ್ರೇಮ್ ಅವರಿಗೆ ಹೇಳಿದ್ದರಂತೆ.
ಒಂದು ದಿನ ಪ್ರೇಮ್ ಅವರು ದೊಡ್ಮನೆಗೆ ಹೋಗಿದ್ದಾಗ ಅಣ್ಣಾವ್ರು ಹಾಗೂ ಪಾರ್ವತಮ್ಮ ಅವರು ಒಟ್ಟಿಗೆ ಕುಳಿತಿದ್ದರಂತೆ. ಆಗ ಪ್ರೇಮ್ ಅವರನ್ನು ಮಾತನಾಡಿಸಿದ್ದ ಪಾರ್ವತಮ್ಮ ಅವರು, ನಿನ್ನ ಬಗ್ಗೆ ಒಂದು ವಿಚಾರ ಕಿವಿಗೆ ಬಿತ್ತು. ನೀನು ಹೀರೋ ಆಗಲು ಹೊರಟಿದ್ದೀಯಂತೆ ನಿಜಾನಾ? ಎಂದು ಪ್ರೇಮ್ ಅವರನ್ನು ಕೇಳಿದ್ದರಂತೆ. ಇದಕ್ಕೆ ನಗುತ್ತಲೇ ಉತ್ತರಿಸಿದ್ದ ಪ್ರೇಮ್ ಅವರು, ಹೌದು ನಾನು ಹೀರೋ ಆಗಲು ಹೊರಟಿದ್ದೇನೆ ಎಂದು ಕನ್ಫರ್ಮ್ ಮಾಡಿದ್ದರು.

ಇದಕ್ಕೆ ಅಲ್ಲಿಯೇ ಪ್ರತಿಕ್ರಿಯಿಸಿದ್ದ ಪಾರ್ವತಮ್ಮ ಅವರು ನೇರವಾಗಿ ಪ್ರೇಮ್, ನೀನು ಹೀರೋ ಎಲ್ಲ ಆಗಬೇಡಪ್ಪ ಎಂದು ಹೇಳಿದ್ದರಂತೆ. ಇದನ್ನು ಕೇಳಿ ಒಂದು ಕ್ಷಣ ಪ್ರೇಮ್ ಅವರಿಗೂ ಶಾಕ್ ಆಗಿತ್ತಂತೆ. ಕೊನೆಗೆ ಏನೂ ಮಾತನಾಡದೆ ಪ್ರೇಮ್ ಸುಮ್ಮನಾಗಿದ್ದಾಗ ಪಾರ್ವತಮ್ಮ ಅವರು ಅದಕ್ಕೆ ಕಾರಣವನ್ನೂ ಹೇಳಿದ್ದರಂತೆ.
ಮಣಿರತ್ನಂ ಅವರು ತುಂಬಾ ಚೆನ್ನಾಗಿ ನಿರ್ದೇಶನ ಮಾಡುತ್ತಾರೆ. ಅಂತಹ ಪ್ರತಿಭೆ ನಿನ್ನಲ್ಲೂ ಇದೆ. ಹಾಗಾಗಿ ನೀನು ನಿರ್ದೇಶನದಲ್ಲೇ ಮುಂದುರಿಯುವುದು ಒಳ್ಳೆಯದು. ಅದು ಬಿಟ್ಟು ನಟನೆ, ಹೀರೋ ಅಂತೆಲ್ಲ ಸುಮ್ಮನೆ ತಲೆಕೆಡಿಸಿಕೊಳ್ಳಬೇಡ ಪ್ರೇಮ್ ಎಂದಿದ್ದರಂತೆ..ಅಂದರೆ ಪ್ರೇಮ್ ಅವರು ನಟನಾಗುವುದಕ್ಕಿಂತ ನಿರ್ದೇಶಕನಾಗಿ ಒಳ್ಳೆಯ ಭವಿಷ್ಯವಿದೆ ಎಂಬರ್ಥದಲ್ಲಿ ಪಾರ್ವತಮ್ಮ ಅವರು ಬುದ್ಧಿಮಾತು ಹೇಳಿದ್ದರಂತೆ.

ಪತ್ನಿಯ ಈ ಮಾತು ಕೇಳಿ ಪಕ್ಕದಲ್ಲೇ ಇದ್ದ ರಾಜ್‌ಕುಮಾರ್ ಅವರು ಮಧ್ಯಪ್ರವೇಶಿಸಿದ್ದರು. ಪಾರ್ವತಿ ಯಾಕೆ ಹಾಗೆ ಹೇಳುತ್ತಿದ್ದೀಯ? ಪ್ರೇಮ್ ನಟನಾಗಬೇಕು ಎನ್ನುವ ಆಸೆಗೆ ನೀನೇಕೆ ಅಡ್ಡಿಪಡಿಸುತ್ತಿದ್ದೀಯ? ಬೇಡ ಎಂದು ಅಣ್ಣಾವ್ರು ಪ್ರೇಮ್ ಪರ ಮಾತನಾಡಿದ್ದರಂತೆ. ಅಲ್ಲದೆ ನೀವು ಡೈರೆಕ್ಷನ್ ಜೊತೆಗೆ ನಟನೆಯಲ್ಲೂ ಮುಂದುವರಿಯಿರಿ ಎಂದು ಬೆನ್ನಿಗೆ ನಿಂತಿದ್ದರಂತೆ. ನಮ್ಮ ಮಕ್ಕಳಂತೆ ಪ್ರೇಮ್ ಕೂಡ ನಟನಾಗಿ ಬೆಳೆಯಲಿ. ಅವರೂ ನಟಿಸಿ, ಸಿನಿರಂಗದಲ್ಲಿ ಮಿಂಚಲಿ ಎಂದು ಅಣ್ಣಾವ್ರು ಪಾವರ್ತಮ್ಮ ಅವರಿಗೆ ಹೇಳಿದ್ದರಂತೆ.
ಈ ಮಾತನ್ನು ಪ್ರೇಮ್ ಅವರು ಆಗಾಗ ನೆನೆಯುತ್ತಲೇ ಇರುತ್ತಾರೆ ಎನ್ನಲಾಗಿದೆ. ಇನ್ನು ತನ್ನಾಸೆಯಂತೆ ಪ್ರೇಮ್ ಅವರು ನಟನೆಗೆ ಇಳಿದು ಸಾಹಸ ಮಾಡೇಬಿಟ್ಟಿದ್ದರು. "ಈ ಪ್ರೀತಿ ಏಕೆ ಭೂಮಿ ಮೇಲಿದೆ" ಸಿನಿಮಾವನ್ನು ತಾವೇ ನಿರ್ದೇಶಿಸಿ, ನಟಿಸಿ ಹೀರೋ ಕೂಡ ಆದರು. ಆದರೆ ಬಳಿಕ ಅವರು ಮತ್ತೆ ನಟನಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ನಿರ್ದೇಶನದಲ್ಲೇ ಮುಂದುವರಿದಿದ್ದಾರೆ.












Click it and Unblock the Notifications