ಪತಿ ಇಲ್ಲದ ಅನುಕಂಪದಿಂದ ಚಾನ್ಸ್ ಕೇಳುತ್ತಿಲ್ಲ: ನಟಿ ರಶ್ಮಿ ಕುಲಕರ್ಣಿ ಕಂಬ್ಯಾಕ್ ಯಾವಾಗ?
ಕಿಚ್ಚ ಸುದೀಪ್ ನಟನೆಯ ಮೈ ಆಟೋಗ್ರಾಫ್ ಸಿನಿಮಾದ ನಾಯಕಿ ಜೀವನದಲ್ಲಿ ಬರಸಿಡಿಲೇ ಬಡಿದಿದೆ. ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೆಲವೊಂದಿಷ್ಟು ಸಿನಿಮಾಗಳನ್ನು ಮಾಡಿ ಕಳೆದ ಕೆಲವು ವರ್ಷಗಳಿಂದ ತೆರೆ ಮರೆಗೆ ಸರಿದವರು ನಟಿ ರಶ್ಮಿ ಕುಲಕರ್ಣಿ ಅವರ ಬಾಳಲ್ಲಿ ಯಾರೂ ಊಹಿಸದ ದುರಂತ ನಡೆದಿದೆ. ಹೌದು ಮುದ್ದಾದ ಕುಟುಂಬದ ಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದ ರಶ್ಮಿ ಕುಲಕರ್ಣಿ ಬಾಳಲ್ಲಿ ಬಿರುಗಾಳಿ ಬೀಸಿದ್ದು, ಅವರ ಪತಿ ಸಂದೀಪ್ ಕಲಬುರ್ಗಿ ಹೃದಯಾಘಾತದಿಂದ ವಿಧವಶರಾಗಿದ್ದಾರೆ.
2025ರ ಜನವರಿ 5ನೇ ತಾರೀಕು ಭಾನುವಾರ ಎದ್ದು ತಿಂಡಿ ತಿಂದು ರಿಲ್ಯಾಕ್ಸ ಆಗಿ ಮಲಗಿದ್ದ ಸಂದೀಪ್ ಕಲಬುರ್ಗಿ ಅವರು, ಮಲಗಿದಲ್ಲಿಯೇ ಕೊನೆಯುಸಿರೆಳೆದಿದ್ದರು. ತಮ್ಮ ಜೀವನದಲ್ಲಿ ನಡೆದ ಈ ದುರಂತದ ಬಗ್ಗೆ ನಟಿ ರಶ್ಮಿ ಕುಲಕರ್ಣಿ, ನ್ಯುಸೋ ನ್ಯೂಸು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು, ಇದೇ ವೇಳೆ ನಟನೆಗೆ ತಮ್ಮ ಕಂಬ್ಯಾಕ್ ಬಗ್ಗೆ ಕೂಡ ಮಾತನಾಡಿದ್ದಾರೆ.

'ನಾನು ನಟನೆಗೆ ಕಂಬ್ಯಾಕ್ ಮಾಡಬೇಕು ಎನ್ನುವುದು ಯಾವತ್ತೋ ಫಿಕ್ಸ್ ಆಗಿತ್ತು. ಈ ಫೆಬ್ರವರಿಯಲ್ಲಿ ಕಂಬ್ಯಾಕ್ ಮಾಡಲೇಬೇಕು ಅಂತಾ ಇತ್ತು. ಅದರ ಬಗ್ಗೆ ಪ್ಲಾನ್ ಕೂಡ ಮಾಡುತ್ತಿದ್ದೆ. ನನ್ನ ಮುಂದಿನ ಹೆಜ್ಜೆ ಎಲ್ಲಿ ಇಡಬೇಕು ಅಂತೆಲ್ಲಾ ಯೋಚನೆ ಕೂಡ ಮಾಡುತ್ತಿದೆ. ಅದಕ್ಕೆ ಅವರು ಕೂಡ ಸಹಾಯ ಮಾಡುತ್ತಿದ್ದರು. ಅವರಿಗೂ ನಾನು ಕಂಬ್ಯಾಕ್ ಮಾಡಬೇಕು ಎನ್ನುವುದು ಇತ್ತು. ನಾನು ಅವರ ಆಸೆಯನ್ನು ನಿರಾಸೆ ಮಾಡುವುದಿಲ್ಲ. ನಾನು ಮಾಡಿಯೇ ಮಾಡುತ್ತೇನೆ' ಎಂದರು.
'ನಾನು ಮೊದಲು ಹೀಗಿರಲಿಲ್ಲ ತುಂಬಾ ಮುದ್ದಾಗಿ ಬೆಳೆಸಿದ್ದರು. ಮೊದಲು ಪಟಾಕಿ ಹೊಡೆಯಲು ಹೆದರುತ್ತಿದ್ದವಳು ಇಂದು ಇಷ್ಟು ದೊಡ್ಡ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಅಂದರೆ ಇದು ಜೀವನ ನನಗೆ ಕೊಟ್ಟಿದ್ದು. ನೀನು ಮಾಡು ಮಾಡಲೇಬೇಕು ಬೇರೆ ಆಯ್ಕೆ ಇಲ್ಲ ಅಂತಾ ಭಗವಂತ ಕೊಟ್ಟ. ಆ ಗಟ್ಟಿತನ ಆಗ ಬರುತ್ತಾ ಹೋಗುತ್ತದೆ. ಜೀವನದಲ್ಲಿ ಗಟ್ಟಿತನ ಎನ್ನುವುದು ಯಾರೋ ಹೇಳಿ ಕಲಿಯುವುದಲ್ಲ. ಅನುಭವ ಕಲಿಸುವ ಪಾಠ' ಎಂದು ಹೇಳಿದರು.

'ನಾನು ಚಿಕ್ಕವಳಿರುವಾಗಿನಿಂದಲೂ ನಾನೊಬ್ಬಳು ನಟಿಯಾಗಬೇಕು ಎನ್ನುವ ನನ್ನ ಕನಸು ಸ್ಪಷ್ಟವಾಗಿತ್ತು. ಆದರೆ ಈಗ ಕಲಾವಿದೆ ಆಗಬೇಕು. ಕಲಾವಿದೆಗೆ ಯಾವುದೇ ಭಾಷೆಯಾಗಲೀ, ಯಾವುದೇ ಚಿತ್ರರಂಗವಾಗಲೀ, ಸಣ್ಣ ಪರದೆಯಾಗಲೀ, ಓಟಿಟಿ ಆಗಲೀ, ಯಾವುದೇ ಪಾತ್ರವಾಗಲಿ ಅದನ್ನು ಅದ್ಭುತವಾಗಿ ಮಾಡಬೇಕು. ಜನರಿಗೆ ಆ ಪಾತ್ರ ಇಷ್ಟ ಆಗಬೇಕು. ಆಗ ನಾನು ಗೆದ್ದಂತೆ. ನನಗೆ ಕಂಬ್ಯಾಕ್ ಮಾಡಲು ಮೊದಲಿನಿಂದಲೂ ಅವಕಾಶ ಇತ್ತು. ಆದರೆ ಈ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಬಂದು ನಾನು ಕಂಬ್ಯಾಕ್ ಮಾಡುತ್ತಿಲ್ಲ. ಇದು ಮೊದಲೇ ನಿರ್ಧಾರ ಆಗಿತ್ತು'.
'ನಾನು ನಟಿಯಾಗಿ ಮುಂದುವರಿಯಬೇಕು ಎನ್ನುವುದು, ಪ್ರತಿ ದಿನ, ಪ್ರತಿ ಕ್ಷಣ ಇದೇ ಆಲೋಚನೆಯಾಗಿತ್ತು. ಪರಿಸ್ಥಿತಿ ಹೀಗೆ ಅಂತಾ ನಾನು ಕಂಬ್ಯಾಕ್ ಮಾಡುತ್ತಿಲ್ಲ. ದಯವಿಟ್ಟು ಯಾರೂ ಆ ರೀತಿ ಅಂದುಕೊಳ್ಳಬೇಡಿ. ಇದು ನನ್ನ ಜೀವನದಲ್ಲಿ ನಡೆದಿರುವುದನ್ನು ನಾನು ನಿಮ್ಮ ಜೊತೆ ಹೇಳಿಕೊಳ್ಳುತ್ತಿರುವುದು ಅಷ್ಟೇ. ಇದೇ ಅನುಕಂಪದಿಂದ ಪಾತ್ರದ ಆಫರ್‌ಗಳನ್ನು ಪಡೆಯಬೇಕು ಎನ್ನುವುದಲ್ಲಾ' ಎಂದು ಬಹಳ ಸ್ಪಷ್ಟವಾಗಿ ಹೇಳಿದರು.












Click it and Unblock the Notifications