Manjummel Boys On OTT: ಥಿಯೇಟರ್‌ನಲ್ಲಿ ಕಮಾಲ್ ಮಾಡಿದ ಮಂಜುಮ್ಮೆಲ್ ಬಾಯ್ಸ್‌ಗೆ ಒಟಿಟಿಯಲ್ಲೂ ಭರ್ಜರಿ ಪ್ರತಿಕ್ರಿಯೆ
ಮಲಯಾಳಂನ 'ಮಂಜುಮ್ಮೆಲ್ ಬಾಯ್ಸ್' 2024 ರ ಅತ್ಯಂತ ಯಶಸ್ವಿ ಚಲನಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರು ಕೂಡ ಫುಲ್ ಮಾರ್ಕ್ಸ್ ನೀಡಿದ್ದರು. ಥಿಯೇಟರ್ ಬಳಿಕ ಒಟಿಟಿಗೆ ಕಾಲಿಟ್ಟಿರುವ ಮಂಜುಮ್ಮೆಲ್ ಬಾಯ್ಸ್‌ಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ಹೌದು... ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿಗೂ ಹೆಚ್ಚು ಬಾಚಿಕೊಂಡ ಮಂಜುಮ್ಮೆಲ್ ಬಾಯ್ಸ್ ಭಾರಿ ಯಶಸ್ಸು ಕಂಡ ಸಿನಿಮಾ. ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರವಾಗಿ ದಾಖಲೆ ಬರೆದಿದೆ. ಥಿಯೇಟರ್‌ನಲ್ಲಿ 'ಮಂಜುಮ್ಮೆಲ್ ಬಾಯ್ಸ್' ಮಿಸ್ ಮಾಡಿಕೊಂಡವರು ಒಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದರು, ಆ ದಿನವೂ ಬಂದಿದ್ದು, ಒಟಿಟಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ದೃಶ್ಯಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ಒಟಿಟಿಯಲ್ಲಿ ಮಂಜುಮ್ಮೆಲ್ ಬಾಯ್ಸ್‌ಗೆ ಭರ್ಜರಿ ರೆಸ್ಪಾನ್ಸ್!
ಟ್ವಿಟರ್‌ನಲ್ಲಿ ಸಿನಿಮಾದ ದೃಶ್ಯಗಳನ್ನು ಹಂಚಿಕೊಂಡ ಪ್ರೇಕ್ಷಕರು "ಜನರು ಹಾಡನ್ನು ಸ್ಯಾಚುರೇಟೆಡ್ ಮಾಡಿದರು.ಇದು ಅತಿಯಾಯಿತು ಎಂದು ಅನೇಕರು ಟೀಕೆ ಮಾಡಿದರು. ಆದರೆ.. ಅದು ಮುಖ್ಯವಲ್ಲ. ಮುಖ್ಯ ಕಥಾವಸ್ತುವಿನಿಂದ ಹೊರಹೋಗದೆ ಒಂದು ಸರ್ವೈವಲ್ ಥ್ರಿಲ್ಲರ್ ಸಿನಿಮಾವನ್ನು ಹೇಗೆ ಮಾಡಬೇಕು ಎಂಬುದನ್ನು ಇದನ್ನು ನೋಡಿ ಕಲಿಯಬೇಕು" ಎಂದಿದ್ದಾರೆ.
ಮತ್ತೊಬ್ಬ ನೆಟ್ಟಿಗರು, "ಥಿಯೇಟರ್‌ನಲ್ಲಿ ಈ ಸಿನಿಮಾವನ್ನು 3 ಬಾರಿ ನೋಡಿದ್ದೆ. ಆದರೂ ಒಟಿಟಿಯಲ್ಲಿ ನೋಡುವಾಗ ಈ ದೃಶ್ಯವು ನನ್ನ ಕಣ್ಣುಗಳನ್ನು ತೇವಗೊಳಿಸುತ್ತದೆ" ಎಂದು ಕೊನೆಯ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನೋಬ್ಬರು, "ಮಾಸ್ಟರ್‌ಪೀಸ್ ಫಿಲ್ಮ್‌ಗಳನ್ನು ಮಾಡಲು ಹೆಚ್ಚು ಸಮಯ ಬೇಕು ಎಂಬ ಹಳೆಯ ಮಾತುಗಳಿವೆ, ಆದರೆ ಮಲಯಾಳಂ ಚಿನಿಮಾ ರಂಗ ಅದನ್ನು ತಪ್ಪು ಎಂದು ಸಾಬೀತು ಮಾಡಿದೆ. ಅವರು ಬ್ಯಾಕ್ ಟು ಬ್ಯಾಕ್ ಮಾಸ್ಟರ್‌ಪೀಸ್ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಮಂಜುಮ್ಮೆಲ್‌ಬಾಯ್ಸ್ ಸಿನಿಮಾದ ಛಾಯಾಗ್ರಹಣ ಮತ್ತು ನಿರ್ದೇಶನವು ಉನ್ನತ ದರ್ಜೆ ಮತ್ತು ಕ್ಲೈಮ್ಯಾಕ್ಸ್ ಮಾತ್ರ ಅದ್ಭುತ" ಎಂದಿದ್ದಾರೆ.

ಮಂಜುಮ್ಮೆಲ್ ಬಾಯ್ಸ್
ಮಲಯಾಳಂನ 'ಮಂಜುಮ್ಮೆಲ್ ಬಾಯ್ಸ್' 2006 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಈ ಚಿತ್ರವು 2006 ರಲ್ಲಿ ತಮಿಳುನಾಡಿನ ಕೊಡೈಕೆನಾಲ್‌ನ ಕತೆ ತಿಳಿಸುತ್ತದೆ. ಸರ್ವೈವಲ್ ಥ್ರಿಲ್ಲರ್ ಸಿನಿಮಾದಲ್ಲಿ ಗುನಾ ಗುಹೆಯ ಕಂದಕದಲ್ಲಿ ಬಿದ್ದ ಸ್ನೇಹಿತನನ್ನು ರಕ್ಷಿಸಲು ಸ್ನೇಹಿತರ ಗುಂಪು ಮಾಡುವ ಸಾಹಸಗಳೇ ಸಿನಿಮಾದ ಜೀವಾಳ.
ಮಂಜುಮ್ಮೆಲ್ ಬಾಯ್ಸ್ ಫೆಬ್ರವರಿ 22 ರಂದು ಮಲಯಾಳಂ ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂ ಮತ್ತು ತಮಿಳಿನಲ್ಲಿ ದೊರೆತ ಪ್ರತಿಕ್ರಿಯೆಯೊಂದಿಗೆ ಮಂಜುಮ್ಮೆಲ್ ಬಾಯ್ಸ್ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ತೆಲುಗಿನಲ್ಲಿ ಏಪ್ರಿಲ್ 6 ರಂದು ಬಿಡುಗಡೆಯಾಯಿತು. ಈ ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗಲಿದೆ. ಮೇ 5 ರಿಂದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಹು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.
ಚಿದಂಬರಂ ನಿರ್ದೇಶನ ಚಿತ್ರದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್ ಮತ್ತು ವಿಷ್ಣು ರೇಘು ನಟಿಸಿದ್ದಾರೆ.












Click it and Unblock the Notifications