Aparna: ಅಪ್ಪುರನ್ನ ನಗಿಸಿದ್ದ ಅಪರ್ಣಾ: ನಿಂತು ಹೋಯಿತು ಒನ್ & ಓನ್ಲಿ ವರಲಕ್ಷ್ಮಿ ಕಾಮಿಡಿ
''ಹಾಯ್.... ಸಲ್ಲೂ... ನಾನು ಅಪರ್ಣಾ ಮಾತಾಡ್ತಾಯಿದಿನಿ... ಅದೇನು ಗೊತ್ತಾ..? ನಮ್ಮ ಶೋಗೆ ಅಪ್ಪು ಬಂದಿದಾರೆ. ಆದರೆ ನನ್ನಾ ಹಾಗೂ ಅಪ್ಪು ಮಧ್ಯ ಏನೂ ಇಲ್ಲ. ನಾವಿಬ್ಬರು ಬರೀ ಸ್ನೇಹಿತರು. ನೀನು ಮಾತ್ರ ಏನನ್ನೂ ಅರ್ಥ ಮಾಡಿಕೊಳ್ಳಬೇಡ'' ಹೀಗೆ ಒನ್ & ಓನ್ಲಿ ವರಲಕ್ಷ್ಮಿಗೆ ಸಲ್ಮಾನ್ ಖಾನ್, ಒಬಾಮಾ ಹಾಗೂ ವಿರಾಟ್ ಕೊಹ್ಲಿ ಕರೆ ಬಂದಿದೆ ಅಂತ ಮಾಡುವ ಕಾಮಿಡಿಗೆ ಜನ ಬಿದ್ದು ಬಿದ್ದು ನಗ್ತಾಯಿದ್ರು.
ಕನ್ನಡದ ಕಾಮಿಡಿ ಶೋ ಮಜಾ ಟಾಕೀಸ್‌ನ ಒನ್ & ಓನ್ಲಿ ವರಲಕ್ಷ್ಮಿ ಕಾಮಿಡಿಗೆ ತುಂಬಾ ಜನ ಫ್ಯಾನ್ಸ್ ಇದ್ದಾರೆ. ದೊಡ್ಡ ದೊಡ್ಡ ಜನರ ಕರೆ ಬಂದಿದೆ ಅಂತ ಕಾಮಿಡಿ ಮಾಡ್ತಾಯಿದ್ದ ಅಪರ್ಣಾ ಅವರಿಗೆ 2015ರ ವಜಾ ಟಾಕೀಸ್ ಖ್ಯಾತಿ ತಂದುಕೊಟ್ಟಿತ್ತು.

ಮಜಾ ಟಾಕೀಸ್ ವರಲಕ್ಷ್ಮಿ (ಅಪರ್ಣಾ) ಸ್ಟೇಜ್ ಮೇಲೆ ಬಂದರೆ ಸಾಕು ಅವರಿಗೆ ಸಲ್ಲು(ಬಾಲಿವುಡ್ ನಟ ಸಲ್ಮಾನ್‌ಖಾನ್), ಬರಾಕ್ ಒಬಾಮ (ಅಮೇರಿಕಾದ ಅಧ್ಯಕ್ಷ) ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ದೊಡ್ಡ ಜನ ಕರೆ ಮಾಡಿದರೆ ಅಂತ ಫೋನ್ ಕಾಲ್‌ನಲ್ಲಿ ಮಾತಾಡುತ್ತ ಅಪರ್ಣಾ ಕಾಮಿಡಿ ಮಾಡ್ತಾಯಿದ್ರು. ಜೊತೆಗೆ ವಿವಿಧ ಪಾತ್ರಗಳನ್ನು ಕೂಡ ಅವರು ನಿಭಾಯಿಸ್ತಾಯಿದ್ದರು.
ಅಪರ್ಣಾ ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತಾಯಿದ್ರೋ ಅಷ್ಟೇ ಚೆನ್ನಾಗಿ ಕಾಮಿಡಿ ಕೂಡ ಮಾಡ್ತಾಯಿದ್ರು. ಕಾಮಿಡಿಯಲ್ಲೂ ಅಪರ್ಣಾ ಮನೆ ಮಾತಾಗಿದ್ದರು. ಮಜಾ ಟಾಕೀಸ್ ಶೋಗೆ ನಟಿ ಸುಧಾರಾಣಿ ಬಂದಾಗ 'ನಿನ್ನಂತ ಅಪ್ಪ ಇಲ್ಲ... ಒಂದೊಂದು ಮಾತು ಬೆಲ್ಲ...' ಅಂತ ಅಪರ್ಣಾ ಅವರು ಮಗಳ ಪಾತ್ರ ಮಾಡಿದ್ದರು. ಇದೊಂದು ದೃಶ್ಯವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ.
ಜೊತೆಗೆ ಈ ಶೋಗೆ ಹಿಂದೆ ನಟ ಪುನೀತ್ ರಾಜಕುಮಾರ್ ಅವರು ಬಂದಾಗ ಒನ್ & ಓನ್ಲಿ ವರಲಕ್ಷ್ಮಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (ಪಾತ್ರದಲ್ಲಿ ಮಾತ್ರ) ಕರೆ ಬಂದಿತ್ತು. ಆಗ ಒನ್ & ಓನ್ಲಿ ವರಲಕ್ಷ್ಮಿ ಕರೆಯಲ್ಲಿ ಮಾತನಾಡುತ್ತಾ, ''ಹಾಯ್.... ಸಲ್ಲೂ... ನಾನು ಅಪರ್ಣಾ ಮಾತಾಡ್ತಾಯಿದಿನಿ... ಅದೇನು ಗೊತ್ತಾ..? ನಮ್ಮ ಶೋಗೆ ಅಪ್ಪು ಬಂದಿದಾರೆ. ಆದರೆ ನನ್ನಾ ಹಾಗೂ ಅಪ್ಪು ಮಧ್ಯ ಏನೂ ಇಲ್ಲ. ನಾವಿಬ್ಬರು ಬರೀ ಸ್ನೇಹಿತರು. ನೀನು ಮಾತ್ರ ಏನನ್ನೂ ಅರ್ಥ ಮಾಡಿಕೊಳ್ಳಬೇಡ'' ಅಂತ ಹೇಳಿ ಫೋನ್ ಕಟ್ ಮಾಡಿ ಅಪ್ಪು ಬಳಿ ಬಂದು ''ಸಲ್ಲುಗೆ ನನ್ನ ಕಂಡರೆ ತುಂಬಾ ಇಷ್ಟ. ಹೀಗಾಗಿ ಯಾರಾದ್ರು ನಮ್ ಶೋಗೆ ಬಂದರೆ ಹೊಟ್ಟೆ ಉರಿ'' ಅಂತ ಅಪ್ಪುರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದರು ಅಪರ್ಣಾ.

ಅಲ್ಲದೆ ಚಂದನ ವಾಹಿನಿಯಲ್ಲಿ ಸೊಗಸಾಗಿ, ಸುಲಲಿತವಾಗಿ ನಿರೂಪಣೆ ಮಾಡ್ತಾಯಿದ್ದ ಅಪರ್ಣಾ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಜನರ ಮನ ಮುಟ್ಟುವಂತೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಆರ್‌ಜೆ ಆಗಿದ್ದ ಅಪರ್ಣಾ ಅವರು ಹಿಂದೊಮ್ಮೆ ಎಂಟು ಗಂಟೆಗಳ ಕಾಲ ಸತತವಾಗಿ ದೀಪಾವಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಖ್ಯಾತಿ ಹೊಂದಿದ್ದಾರೆ. ಹೀಗೆ ನಿರೂಪಣೆ ಮೂಲಕ ಪ್ರೇಕ್ಷೇಕರ ಮನ ಗೆದ್ದಿದ್ದ ಅಪ್ಪಟ ಕನ್ನಡತಿ ಅಪರ್ಣಾ ಈಗ ನೆನಪು ಮಾತ್ರ.
ಹೌದು... ನಿರೂಪಕಿ, ಕಾಮಿಡಿಯನ್, ರಂಗಕಲಾವಿದೆ ನಟಿ ಅಪರ್ಣಾ ಅಕಾಲಿಕ ನಿಧನ ಕನ್ನಡ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೊಡ್ಡ ವೇದಿಕೆಗಳಲ್ಲಿ ಕನ್ನಡದ ಅದ್ಭುತ ಧ್ವನಿಯಾಗಿದ್ದ ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ಸ್ವರ್ಗಸ್ಥರಾಗಿದ್ದಾರೆ.
ಮಜಾ ಟಾಕೀಸ್ನಲ್ಲಿ ಕಾಮಿಡಿ ಮಾಡ್ತಾ, ಜನ ಸಾಗರ ಸೇರಿದ ದೊಡ್ಡ ವೇದಿಕೆಗಳ ಧ್ವನಿಯಾಗಿದ್ದ ಅಪರ್ಣಾ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. ಎರಡು ವರ್ಷದ ಹಿಂದೆ ಅಪರ್ಣಾ ಅವರಿಗೆ ಕ್ಯಾನ್ಸರ್ ಇರುವುದು ತಿಳಿದಿತ್ತು. ಅಪರ್ಣಾ ಅವರಿಗೆ ನಿರೂಪಣಾ ಶಾಲೆ ತೆರೆಯಬೇಕು ಎನ್ನುವ ಆಸೆ ಇತ್ತು. ಆದರೆ ವಿಧಿಯಾಟಕ್ಕೆ ಅಪರ್ಣಾ ಕೊನೆಯುಸಿರು ಎಳೆದಿದ್ದಾರೆ.

'ನಿರೂಪಣೆ ಶಾಲೆ' ಸ್ಥಾಪಿಸುವ ಮೂಲಕ ಜ್ಞಾನ ಹಂಚಿಕೊಳ್ಳಬೇಕು ಅನ್ನೋ ಬಯಕೆ ಅವರಿಗೆ ಇತ್ತು. ಆದರೀಗ ಅಪರ್ಣಾ ಆಸೆ ಈಡೇರಲೇ ಇಲ್ಲ. ಅವರ ಕನಸು ನನಸಾಗಲೇ ಇಲ್ಲ. ಬಾರದ ಲೋಕಕ್ಕೆ ಅಪರ್ಣಾ ತೆರಳಿದ್ದಾರೆ. ಅವರ ಅಕಾಲಿಕ ಅಗಲಿಕೆ ನೆನೆದು ಕನ್ನಡ ಲೋಕ ಕಣ್ಣೀರು ಹಾಕಿದೆ.












Click it and Unblock the Notifications