Landlord movie: ಚಿತ್ರಮಂದಿರಕ್ಕೆ ತೆರಳಿ 'ಲ್ಯಾಂಡ್ ಲಾರ್ಡ್' ಸಿನಿಮಾ ವೀಕ್ಷಿಸುತ್ತೇನೆ: ಸಿಎಂ ಸಿದ್ದರಾಮಯ್ಯ
ನಟ ದುನಿಯಾ ವಿಜಯ್ ಅಭಿನಯದ "ಲ್ಯಾಂಡ್ ಲಾರ್ಡ್" ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಲ್ಯಾಂಡ್ ಲಾರ್ಡ್ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಚಿತ್ರವನ್ನು ವೀಕ್ಷಿಸುವಂತೆ ಪ್ರೀತಿಪೂರ್ವಕವಾಗಿ ಆಹ್ವಾನಿಸಿತು. ಇದಕ್ಕೆ ಒಪ್ಪಿದ ಸಿಎಂ ಸಿದ್ದರಾಮಯ್ಯ ಅವರು ಈ ಸಿನಿಮಾ ವೀಕ್ಷಿಸುವ ಆಸಕ್ತಿ ತೋರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಭೇಟಿಯ ವೇಳೆ ಚಿತ್ರದ ಆಶಯ, ಕಥಾಹಂದರ ಹಾಗೂ ಸಮಾಜಕ್ಕೆ ನೀಡುವ ಸಂದೇಶಗಳ ಬಗ್ಗೆ ಚಿತ್ರತಂಡ ಸಿಎಂಗೆ ವಿವರ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲ್ಯಾಂಡ್ ಲಾರ್ಡ್ ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಾಗದೆ, ಸಮಾಜದಲ್ಲಿರುವ ಜಾತಿ ಅಸಮಾನತೆ, ಸಾಮಾಜಿಕ ಬೇಧಭಾವ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಕುರಿತಾಗಿ ಗಂಭೀರ ಚರ್ಚೆ ನಡೆಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಜಕ್ಕೂ ಇದೊಂದು ದಿಟ್ಟ ಪ್ರಯತ್ನ
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಉದ್ದೇಶವೇ ಪ್ರಧಾನವಾಗಿರುವ ಸಿನಿಮಾಗಳ ನಡುವೆ, ಸಮಾಜದ ನೋವು-ನಲಿವುಗಳನ್ನು ಪ್ರತಿಬಿಂಬಿಸುವ, ಸಾಮಾಜಿಕ ಕಳಕಳಿಯನ್ನು ಕೇಂದ್ರವಾಗಿಟ್ಟುಕೊಂಡ ಚಿತ್ರಗಳು ವಿರಳವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರದ ಮೂಲಕ ವಾಸ್ತವ ಸಮಾಜದ ಸಮಸ್ಯೆಗಳನ್ನು ಜನಸಾಮಾನ್ಯರ ಮುಂದೆ ಇಡುವ ಧೈರ್ಯ ತೋರಿರುವುದು ನಿಜಕ್ಕೂ ದಿಟ್ಟ ಪ್ರಯತ್ನವಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟರು. ಸಮಾಜದಲ್ಲಿ ಸಮಾನತೆ, ನ್ಯಾಯ ಹಾಗೂ ಸಂವಿಧಾನದ ಮೂಲಭೂತ ಮೌಲ್ಯಗಳ ಮಹತ್ವವನ್ನು ಜನರಿಗೆ ತಲುಪಿಸುವ ಕೆಲಸವನ್ನು ಚಿತ್ರತಂಡ ಮಾಡಿದೆ ಎಂದು ಅವರು ಹೇಳಿದರು.
ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರವು ಸಾಮಾಜಿಕ ಸಂದೇಶದ ಜೊತೆಗೆ ಕಲಾತ್ಮಕತೆಯನ್ನೂ ಹೊಂದಿರುವುದು ಸಂತಸದ ವಿಚಾರವಾಗಿದೆ. ಇಂತಹ ಕಥಾಹಂದರದ ಚಿತ್ರಗಳು ಜನರಲ್ಲಿ ಚಿಂತನೆ ಮೂಡಿಸಿ, ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಬಲ್ಲವು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೂಲಕ ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟರಿಗೆ ಲ್ಯಾಂಡ್ ಲಾರ್ಡ್ ಒಂದು ಮಾದರಿಯಾಗಲಿ ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಲ್ಯಾಂಡ್ ಲಾರ್ಡ್ ಸಿನಿಮಾ ಶತದಿನೋತ್ಸವವನ್ನು ಯಶಸ್ವಿಯಾಗಿ ಪೂರೈಸಲಿ ಹಾಗೂ ಇಂತಹ ಇನ್ನಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬರಲು ಈ ಸಿನಿಮಾ ಸ್ಪೂರ್ತಿಯಾಗಲಿ ಎಂದು ಹಾರೈಸಿದರು. ಇದು ಎಲ್ಲರೂ ನೋಡಲೇಬೇಕಾದ ಚಿತ್ರವಾಗಿದ್ದು, ತಾವು ಕೂಡ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುವುದಾಗಿ ಭರವಸೆ ನೀಡಿದರು. ಜೊತೆಗೆ ಸಾರ್ವಜನಿಕರು ಈ ಸಿನಿಮಾವನ್ನು ತಪ್ಪದೇ ನೋಡಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಲ್ಯಾಂಡ್ ಲಾರ್ಡ್ ತಾರಾಗಣ
ಲ್ಯಾಂಡ್ ಲಾರ್ಡ್ ಕನ್ನಡ ಭಾಷೆಯ ಆಕ್ಷನ್-ನಾಟಕ ಚಿತ್ರವಾಗಿದ್ದು, ಜಡೇಶ್ ಕೆ. ಹಂಪಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಸ್.ಸೂರಜ್ ಗೌಡ ಹಾಗೂ ಕೆ.ವಿ.ಸತ್ಯಪ್ರಕಾಶ್ ನಿರ್ಮಿಸಿದ್ದಾರೆ. ಜನವರಿ 23ರಂದು ಚಿತ್ರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದು, ನಟಿ ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿಥನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ, ಭಾವನಾ ರಾವ್, ರಾಕೇಶ್ ಅಡಿಗ ಹಾಗೂ ಅಚ್ಯುತ್ ಕುಮಾರ್ ಸೇರಿದಂತೆ ಖ್ಯಾತ ಕಲಾವಿದರ ತಾರಾಬಳಗ ಈ ಸಿನಿಮಾದಲ್ಲಿದೆ. ಲ್ಯಾಂಡ್ ಲಾರ್ಡ್ ಚಿತ್ರದ ಕಥಾಹಂದರವು 1980ರ ದಶಕದ ಗ್ರಾಮೀಣ ಹಿನ್ನೆಲೆಯನ್ನು ಆಧರಿಸಿದ್ದು, ಆ ಕಾಲಘಟ್ಟದ ಸಾಮಾಜಿಕ ವಾಸ್ತವಗಳು, ಸಂಘರ್ಷಗಳು ಮತ್ತು ಮೌಲ್ಯಗಳನ್ನು ನೈಜವಾಗಿ ತೆರೆ ಮೇಲೆ ಮರುಸೃಷ್ಟಿಸಲಾಗಿದೆ.












Click it and Unblock the Notifications