ನೇಣು ಬಿಗಿದ ಸ್ಥಿತಿಯಲ್ಲಿ ಕಬಾಲಿ ಸಿನಿಮಾ ನಿರ್ಮಾಪಕನ ಶವ ಪತ್ತೆ
ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ಟಾಲಿವುಡ್‌ನ ಖ್ಯಾತ ಯುವ ನಿರ್ಮಾಪಕ ಕೆ.ಪಿ.ಚೌಧರಿ (44) ಅವರು ಗೋವಾದ ಹಳ್ಳಿಯೊಂದರ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಾದ ಸಿಯೋಲಿಮ್ ಗ್ರಾಮದ ಬಾಡಿಗೆ ಮನೆಯಲ್ಲಿ ಚೌಧರಿ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ತಿಳಿಸಿದ್ದಾರೆ. ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಔಟ್‌ಪೋಸ್ಟ್ ಅವರ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಬಾಲಿ ಚಿತ್ರವನ್ನು ಚೌಧರಿ ತೆಲುಗಿನಲ್ಲಿ ನಿರ್ಮಿಸಿ ಸಕ್ಸಸ್ ಕಂಡಿದ್ದರು. ಅಲ್ಲದೆ 2023ರಲ್ಲಿ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡವು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಅವರನ್ನು ಬಂಧಿಸಿತ್ತು.
ಚೌದರಿ ಟಾಲಿವುಡ್ ಮಾತ್ರವಲ್ಲದೆ, ಕಾಲಿವುಡ್‌ನಲ್ಲೂ ಸಕ್ರಿಯರಾಗಿದ್ದರು. ಆದರೆ, ವರದಿಗಳ ಪ್ರಕಾರ ಚೌಧರಿ ಅವರು ಅನೇಕ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ ಚೌಧರಿ ಮೈತುಂಬಾ ಸಾಲ ಮಾಡಿಕೊಂಡಿದ್ದ ಹಿನ್ನೆಲೆ ಸಾಲ ನೀಡಿದವರಿಂದಲೂ ಹೆಚ್ಚಿನ ಒತ್ತಡವಿತ್ತು ಎನ್ನಲಾಗಿದೆ.
ಸಿನಿಮಾಗಳ ಮೂಲಕ ಚೌಧರಿ ಸಕ್ಸಸ್ ಕಂಡಿದ್ದರೂ ಇತ್ತೀಚೆಗೆ ಅವರು ಇಂಡಸ್ಟ್ರಿಯಲ್ಲಿ ಹಿನ್ನಡೆ ಕಂಡಿದ್ದರು. ಇದರಿಂದಾಗಿಯೇ ಅವರು ಡ್ರಗ್ಸ್ ಜಾಲಕ್ಕೂ ಕಾಲಿಟ್ಟಿದ್ದರು ಎನ್ನುವ ಆರೋಪವಿದೆ. ಗೋವಾದ ಓಎಚ್‌ಎಂ ಪಬ್‌ನ ಮೂಲಕ ಸರಬರಾಜು ಮಾಡಿದ ಡ್ರಗ್ಸ್ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಚೌಧರಿ ಕೂಡ ಭಾಗಿಯಾಗಿದ್ದರು ಎನ್ನುವ ಗಂಭೀರ ಆರೋಪವಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಾರಣ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ಅವರು ಚೌಧರಿ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಅವರ ಸ್ನೇಹಿತರು ಹೇಳಿದ್ದಾರೆ.
ಮೂಲತಃ ಖಮ್ಮಮ್ ಜಿಲ್ಲೆಯವರಾದ ಚೌಧರಿ ಅವರು 2016ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ತೆಲುಗು ಭಾಷೆಯಲ್ಲಿ ರಜನಿಕಾಂತ್ ಅವರ ಕಬಾಲಿ ಸಿನಿಮಾದ ನಿರ್ಮಾಪಕರಾಗಿ ಯಶಸ್ವಿಯಾಗಿದ್ದರು. ಬಳಿಕ 2023ರಲ್ಲಿ ಸೈಬರಾಬಾದ್ ಪೊಲೀಸರು 93 ಗ್ರಾಂ ಕೊಕೇನ್‌ನೊಂದಿಗೆ ಚೌಧರಿ ಅವರನ್ನು ಬಂಧಿಸಿದ್ದರು. ಇವರಿಗೆ ಚಿತ್ರರಂಗ ಮತ್ತು ಉದ್ಯಮಿಗಳೊಂದಿಗೆ ಉತ್ತಮ ಸಂಪರ್ಕವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚೌಧರಿ ಅವರು ನೈಜೀರಿಯಾ ಪ್ರಜೆಯಿಂದ ಗಾಂಜಾ ಪಡೆದು ತನ್ನ ಆಪ್ತ ವಲಯದಲ್ಲಿ ಮಾರಾಟ ಕೂಡ ಮಾಡುತ್ತಿದ್ದರು ಎಂದು ವರದಿಯಾಗಿದೆ. ಈ ಹಿಂದೆ ಬಂಧಿತರಾಗಿದ್ದ ಡ್ರಗ್ ಡೀಲರ್ ಎಡ್ವಿನ್ ನೂನ್ಸ್ ಜತೆಯೂ ಚೌಧರಿ ನಂಟು ಹೊಂದಿದ್ದರು ಎನ್ನಲಾಗಿದೆ. ಈ ಕೇಸ್ ಬಳಿಕ ಚೌಧರಿ ಗೋವಾಗೆ ತೆರಳಿ ಅಲ್ಲಿ ಕ್ಲಬ್ ತೆರೆದಿದ್ದರು. ಆದರೆ ಇದರಿಂದ ಅವರು ನಷ್ಟ ಅನುಭವಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚೌಧರಿ ಅವರ ಸಾವಿನ ವಿಚಾರ ತಿಳಿದು ಚಿತ್ರರಂಗ ಶಾಕ್‌ಗೆ ಒಳಗಾಗಿದೆ.












Click it and Unblock the Notifications