ಅಂಬೆಗಾಲಿಟ್ಟ ಕೂಸುಗಳೇ, ಶಿವಣ್ಣನ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ: ಜಗ್ಗೇಶ್
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಸದ್ಯ ಕಿರುತೆರೆ ನಟಿಗೆ ಅತ್ಯಾಚಾರ ಕೇಸ್‌ನಲ್ಲಿ ಜೈಲುಪಾಲಾಗಿದ್ದಾರೆ. ಆದರೆ ಮನು ಮಾತನಾಡಿರುವುದು ಎನ್ನಲಾದ ಆಡಿಯೋಗಳು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿವೆ. ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಮನು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಇನ್ನು ಹಿರಿಯ ನಟ, ನವರಸನಾಯಕ ಜಗ್ಗೇಶ್ ಕೂಡ ಈ ವಿಚಾರವಾಗಿ ತಮ್ಮದೇ ಶೈಲಿಯಲ್ಲಿ ಚಳಿಬಿಡಿಸಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ನಟ ಶಿವಣ್ಣ ಹಾಗೂ ನಟ ದರ್ಶನ್ ಸಾವಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. ಇದು ಮಡೆನೂರು ಮನು ಆಡಿರುವ ಮಾತು ಎಂದೇ ಹೇಳಲಾಗುತ್ತಿದೆ. ʼಶಿವರಾಜ್‌ಕುಮಾರ್ ಇನ್ನೊಂದು ಆರು ವರ್ಷ ಸತ್ತು ಹೋಗ್ತಾರೆ, ಧ್ರುವ ಸರ್ಜಾ ಇನ್ನೊಂದು 8 ವರ್ಷ ಅಷ್ಟೇ, ದರ್ಶನ್ ಈಗಾಗಲೇ ಸತ್ತೇ ಹೋದ, ಸಿನಿಮಾ ಮಾಡಲ್ಲ, ಕ್ರೇಜ್ ಇರುತ್ತೆ. ಈ ಮೂವರಿಗೆ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನುʼ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಈ ಧ್ವನಿ ಮನು ಅವರದ್ದೇ ಎಂದು ಆರೋಪ ಮಾಡಲಾಗಿದ್ದು, ಶಿವಣ್ಣನ ಅಭಿಮಾನಿಗಳು ಮನು ವಿರುದ್ಧ ಕೆಂಡವಾಗಿದ್ದಾರೆ. ಇದೇ ವಿಚಾರವಾಗಿ ನಟ ಜಗ್ಗೇಶ್ ಕೂಡ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ (ಟ್ವಿಟರ್) ಬರೆದುಕೊಂಡಿರುವ ಜಗ್ಗೇಶ್, ʼಒಂದು ಗಾದೆ ಮಾತು ನೆನಪಾಯಿತು, ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸವೇ ಇಲ್ಲ. ಇಂದು ಇದ್ದದ್ದು ನಾಳೆ ಇರದು, ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೇʼ ಎಂದು ಮಾತಿನಲ್ಲೇ ಚಳಿಬಿಡಿಸಿದ್ದಾರೆ.
ʼಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲ, ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು ಎಂದು ಜಗ್ಗೇಶ್ ಬೇಸರದ ಮಾತುಗಳನ್ನಾಡಿದ್ದಾರೆ. ನಟ ಶಿವರಾಜಕುಮಾರ್ ಅವರು ಚಿತ್ರರಂಗದ ಕಿರೀಟ ಇದ್ದಂತೆ. ಅವರು ಎಲ್ಲರನ್ನೂ ಪ್ರೀತಿಸುವ ಜೀವ, ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ ಎಂದೂ ಜಗ್ಗೇಶ್ ವಾರ್ನಿಂಗ್ ಕೊಟ್ಟಿದ್ದಾರೆ. ನೊಂದುಕೊಳ್ಳದಿರಿ ಶಿವಣ್ಣ, ನೀವು ಹಿಮಾಲಯ, ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮನ್ನ ಹೆತ್ತವರು, ಕನ್ನಡಿಗರ ಆಶೀರ್ವಾದ ಇದೆ. ವೀ ಲವ್ ಯೂʼ ಎಂದು ಪೋಸ್ಟ್ ಮಾಡಿದ್ದಾರೆ.
ಮನುಗೆ ವಾರ್ನಿಂಗ್ ಕೊಟ್ಟ ಫ್ಯಾನ್ಸ್
ಆಡಿಯೋ ವೈರಲ್ ಆದ ಬೆನ್ನಲ್ಲೇ ಧ್ರುವ ಸರ್ಜಾ, ನಟ ದರ್ಶನ್ ಹಾಗೂ ಶಿವಣ್ಣನ ಅಭಿಮಾನಿಗಳು ಮನುಗೆ ನೇರವಾಗಿ ವಾರ್ನಿಂಗ್ ಕೊಡುತ್ತಿದ್ದಾರೆ. ಶಿವಣ್ಣನ ಅಭಿಮಾನಿಗಳು ಕರ್ನಾಟಕ ಫಿಲ್ಮ್ ಚೇಂಬರ್‌ಗೆ ದೂರು ಕೊಡಲು ಮುಂದಾಗಿದ್ದು, ಕೂಡಲೇ ಮನು ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ದರ್ಶನ್, ಧ್ರುವ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಮನು ಬಗ್ಗೆ ಕೋಪ ಪ್ರದರ್ಶಿಸಿದ್ದಾರೆ. ಆ ಆಡಿಯೋದಲ್ಲಿ ಮಾತನಾಡಿರುವುದು ನಿಜವಾಗಿಯೂ ಮನುನೇ ಆಗಿದ್ದಲ್ಲಿ, ಪರಿಣಾಮ ಬೇರೆ ರೀತಿಯೇ ಇರುತ್ತೆ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ. ಇತ್ತ ಕೋರ್ಟ್ ಅತ್ಯಾಚಾರ ಕೇಸ್‌ನಲ್ಲಿ ಮನುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದೆ.












Click it and Unblock the Notifications