ಸೋಲುವ ಸಿನಿಮಾಗಳಿಗೆ ಯಾಕೆ ಒದ್ದಾಡಿಕೊಂಡು ಮ್ಯೂಸಿಕ್ ಮಾಡಬೇಕು-ಗುರು ಕಿರಣ್
ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾಗಿರುವ ಗುರು ಕಿರಣ್ ಮಾಡಿರುವ ಬಹುತೇಕ ಸಿನಿಮಾಗಳು ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿದ್ದವು. ಈಗೀಗ ಗುರು ಕಿರಣ್ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಹೊಸ ಸಂಗೀತ ನಿರ್ದೇಶಕರು ಬರುತ್ತಿದ್ದಂತೆ ಗುರು ಕಿರಣ್ ತೆರೆ ಮರೆಗೆ ಸರಿಯುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಸ್ವತಃ ಗುರು ಕಿರಣ್ ಉತ್ತರಿಸಿದ್ದಾರೆ.
ಫಿಲ್ಮೀ ಬೀಟ್ ಕನ್ನಡದ ಜೊತೆ ಮಾತನಾಡಿದ ಅವರು, 'ದೇವರ ಲೆಕ್ಕದಲ್ಲಿ ನನ್ನ ರನ್ ರೇಟ್ ಚೆನ್ನಾಗಿದೆ. ನಾನು ಮಾಡಿದ ನೂರು ಸಿನಿಮಾದಲ್ಲಿ ನೆಲವತ್ತಾರು ಸಿನಿಮಾಗಳು ನೂರು ದಿನ ಓಡಿವೆ. ಆ ರೀತಿಯ ಗುಣಮಟ್ಟವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ನನ್ನ 50 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಾಡಿದ ಸಿನಿಮಾಗಳ ಸಕ್ಸೆಸ್ ರೇಟ್ ಜಾಸ್ತಿ ಇದೆ. ಈಗ ಏನಾಗುತ್ತದೆ ಅಂದರೆ ಸಿನಿಮಾದ ಕಥೆಗಳು ಸ್ಫೂರ್ತಿ ನೀಡಲ್ಲ. ಯಾವುದೇ ಒಂದು ಟ್ಯೂನ್ ಮಾಡಬೇಕು ಅಂದರೂ ಕಥೆ ನಮ್ಮನ್ನು ಸೆಳೆಯಬೇಕು' ಎಂದರು.

'ಕೆಲವೊಮ್ಮೆ ಹೊಸಬರು ಹೆಂಗಾದರೂ ಸಿನಿಮಾ ಮಾಡಿ ಮುಗಿಸೋಣ ಎಂದು ನೋಡುತ್ತಾರೆ. ಇದು ಸರಿಯಲ್ಲ. ಒಂದು ಸಿನಿಮಾವನ್ನು ಎಷ್ಟು ಚೆನ್ನಾಗಿ ಮಾಡಬಹುದು ಎಂದು ಯೋಚಿಸಬೇಕು. ಅದನ್ನು ಬಿಟ್ಟು ಹೇಗಾದರೂ ಮುಗಿಸೋಣ ಎಂದುಕೊಳ್ಳಬಾರದು. ಈಗ ಸಿನಿಮಾ ಮಾಡುವ ಮಾದರಿ ಬದಲಾಗಿ ಹೋಗಿದೆ. ಸಿನಿಮಾಗೆ ಈಗ ಬ್ಯುಸಿನೆಸ್ ಮಾಡಲು ಬರುತ್ತಾರೆ'.
'ಮೊದಲೆಲ್ಲಾ ಕಲೆಗೆ ಬೆಲೆ ಕೊಡುತ್ತಿದ್ದ ನಿರ್ಮಾಪಕರ ಬಳಗ ಇತ್ತು. ಆದರೆ ಈಗ ಹೇಗಾಗಿದೆ ಅಂದರೆ ಒಂದು ಸಿನಿಮಾಗೆ ಇಷ್ಟು ಬಂಡವಾಳ ಹಾಕಿ ಇಷ್ಟು ಲಾಭ ಎತ್ತಬೇಕು ಎಂದು ಯೋಚಿಸುತ್ತಾರೆ. ಇಲ್ಲಾ ಇಷ್ಟು ಹಣದಲ್ಲಿ ಸಿನಿಮಾ ಮುಗಿಸಬೇಕು ಎಂದು ಯೋಚಿಸುತ್ತಾರೆ. ಪರಿಸ್ಥಿತಿ ಹೀಗಿದ್ದಾಗ ಒಳ್ಳೆಯ ಸಿನಿಮಾಗಳನ್ನು ಮಾಡುವುದು ಕಷ್ಟವಾಗುತ್ತಿದೆ' ಎಂದು ಹೇಳಿದರು.
'ಕೊರೊನಾ ಮುಗಿದ ಮೇಲೆ ನಾನು ಅಡ್ವಾನ್ಸ್ ತೆಗೆದುಕೊಂಡಿದ್ದ ಎಲ್ಲಾ ಹಣವನ್ನು ವಾಪಸ್ ಕೊಟ್ಟಿದ್ದೇನೆ. ಒಳ್ಳೆ ಸಿನಿಮಾ ಬಂದರಷ್ಟೇ ಮಾಡೋಣ ಅಂತಾ ನಿರ್ಧರಿಸಿದ್ದೇನೆ. ಒಳ್ಳೆ ಸಿನಿಮಾ ಬಂದಾಗ ನನ್ನ ಮನಸ್ಸೇ ಮಾಡು ಅಂತಾ ಹೇಳುತ್ತದೆ, ಆಗ ಖಂಡಿತಾ ಮಾಡುತ್ತೇನೆ. ಸುಮ್ಮನೆ ಒಂದಿಷ್ಟು ಸಿನಿಮಾಗಳನ್ನು ಲೆಕ್ಕಕ್ಕೆ ಮಾಡುವುದಕ್ಕಿಂತ ಒಳ್ಳೆಯ ಸಿನಿಮಾಗಳನ್ನು ಮಾಡೋಣ' ಎಂದರು.

'ಮೊನ್ನೆ ಒಂದು ವರದಿ ನೋಡಿದೆ ಎರಡು ತಿಂಗಳಲ್ಲಿ ಎಪ್ಪತೈದು ಸಿನಿಮಾಗಳು ಬಿಡುಗಡೆಯಾಗಿದೆ ಅಂತಾ. ಆದರೆ ಒಂದು ಕೂಡ ನಿಂತಿಲ್ಲ. ಇಂತಹ ಸಿನಿಮಾಗಳಲ್ಲಿ ಮಾಡಿಯೂ ಏನು ಉಪಯೋಗ ಇದೆ. ಸುಮ್ಮನೆ ಲೆಕ್ಕಕ್ಕೆ ಮಾಡಬೇಕಾ?. ಈಗ ಬಂದಿರುವ ಸಿನಿಮಾಗಳು ಯಾವುದು ಎಂದು ನನಗೆ ಗೊತ್ತಿಲ್ಲ. ನಮಗೂ ಒಂದಷ್ಟು ಕಥೆಗಳು ಬರುತ್ತದೆ. ಆ ಕಥೆಗಳು ನಮಗೆ ಆಸಕ್ತಿ ಎನಿಸಿದರೆ, ಖಂಡಿತವಾಗಿಯೂ ನಮಗೆ ಮಾಡಲು ಇಷ್ಟ ಇರುತ್ತದೆ. ಇಲ್ಲ ಅಂದರೆ ನಾವು ಒಂದು ಸಿನಿಮಾ ಮ್ಯೂಸಿಕ್‌ಗೆ ಮೂರು ತಿಂಗಳು ಒದ್ದಾಡಬೇಕು. ಇಂತಹ ಕಥೆಗಳಿಗೆ ಮೂರು ತಿಂಗಳು ಒದ್ದಾಡುವ ಬದಲು ಬೇರೆ ಕೆಲಸ ಮಾಡಬುದಲ್ಲವೇ' ಎಂದು ಪ್ರಶ್ನಿಸಿದರು.
ಗುರು ಕಿರಣ್ ಒಂದು ಸಿನಿಮಾಗೆ ಹೆಚ್ಚಿನ ಸಂಭಾವನೆ ಕೇಳುತ್ತಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, 'ಹೌದು ಆ ರೀತಿಯಲ್ಲಾ ಹೇಳುತ್ತಾರೆ. ಹಿಂದೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗುವುದಿಲ್ಲ. ನಾವು ಬೇಕು ಅಂದವರು ನಮ್ಮ ಹತ್ತಿರ ಬಂದೇ ಬರುತ್ತಾರೆ. ನನ್ನ ತಟ್ಟೆಗೆ ಬರುವುದು ನನ್ನ ತಟ್ಟೆಗೆ ಬಂದೇ ಬರುತ್ತದೆ. ಅದನ್ನು ಯಾರು ಏನೂ ಮಾಡಲು ಆಗುವುದಿಲ್ಲ. ನೀವು ಏನೆಂದು ಈಗಾಗಲೇ ನೀವು ಸಾಬೀತು ಮಾಡಿಯಾದ ಮೇಲೆ ಮತ್ತೆ ಹೊಸದಾಗಿ ಯಾರಿಗಾಗಿ ಸಾಬೀತು ಮಾಡುವ ಅವಶ್ಯಕತೆ ಇಲ್ಲ' ಎಂದು ಹೇಳಿದರು.
'ಜೀವನವನ್ನು ಎಂಜಾಯ್ ಮಾಡಬೇಕು, ಜೊತೆಗೆ ಮಾಡುವ ಕೆಲಸವನ್ನು ಕೂಡ ಎಂಜಾಯ್ ಮಾಡಬೇಕು. ಮೊದಲಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿರುವುದು. ಆ ರೀತಿಯ ಸಿನಿಮಾಗಳು ಮತ್ತೆ ಬರಬೇಕು. ಆ ರೀತಿಯ ಪ್ರಾಜೆಕ್ಟ್‌ಗಳು ಬಂದಾಗ ಖಂಡಿತಾ ಮಾಡುತ್ತೇನೆ. ಯಾವ ಪ್ರಾಜೆಕ್ಟ್‌ಗಳನ್ನೂ ಮಾಡುವುದೇ ಇಲ್ಲ ಅಂತಾ ನಾನು ಕುಳಿತಿಲ್ಲ. ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇನೆ. ಯಾವ ಸಿನಿಮಾಗಳನ್ನು ಬೇಕಾದರೂ ಮಾಡುತ್ತೇನೆ ಅಂದರೆ ಎಪ್ಪತ್ತೈದು ಸಿನಿಮಾಗಳಲ್ಲಿ ಇಪ್ಪತ್ತೈದು ಸಿನಿಮಾ ನನಗೆ ಬರುವುದಿಲ್ವಾ? ಸಿನಿಮಾಗಳನ್ನು ಮಾಡುವ ಹಸಿವು ಇದೆ. ಆದರೆ ಒಳ್ಳೆಯ ಸಿನಿಮಾಗಳನ್ನು ಮಾಡೋಣ ಅಂತಾ ಕಾಯುತ್ತಿದ್ದೇನೆ' ಎಂದು ಹೇಳಿದರು.
'ನಾನು ಮೊದಲು ದೊಡ್ಡ ದೊಡ್ಡ ಡೈರೆಕ್ಟರ್‌ಗಳ ಜೊತೆ ಸಿನಿಮಾ ಮಾಡಿಲ್ಲ. ಎಲ್ಲಾ ಹೊಸಬರ ಜೊತೆಗೆ ಸಿನಿಮಾ ಮಾಡಿದ್ದು, ಇವತ್ತಿಗೆ ಅವರೆಲ್ಲಾ ದೊಡ್ಡ ನಿರ್ದೇಶಕರಾಗಿದ್ದಾರೆ. ಎಲ್ಲಾ ಹೊಸ ಡೈರೆಕ್ಟರ್‌ಗಳ ಜೊತೆ ನಾನು ಮ್ಯೂಸಿಕ್ ಡೈರೆಕ್ಟರ್ ಆಗಿದ್ದು. ನನಗೆ ಮೊದಲಿನಿಂದಲೂ ಒಳ್ಳೆ ಸಿನಿಮಾದ ಜೊತೆ ಕೆಲಸ ಮಾಡಬೇಕು ಎನ್ನುವುದು ಬಿಟ್ಟರೆ ದೊಡ್ಡ ಡೈರೆಕ್ಟರ್, ದೊಡ್ಡ ಹೀರೋ ಜೊತೆ ಮಾಡಬೇಕು ಎನ್ನುವ ಆಲೋಚನೆಯಲ್ಲಾ ಇಲ್ಲ' ಎಂದರು.
'ನಾನು ಮ್ಯೂಸಿಕ್ ಡೈರೆಕ್ಟರ್ ಆದ ಮೇಲೆ ಕಡಿಮೆ ಎಂದರೆ ಆರವತ್ತು ಎಪ್ಪತ್ತು ಹೊಸ ಹಾಡುಗಾರರನ್ನು ಪರಿಚಯ ಮಾಡಿದ್ದೇನೆ. ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದೇನೆ ಎನ್ನುವ ಹೆಮ್ಮೆ ಇದೆ. ಅದು ಕೂಡ ಕರ್ನಾಟಕದವರನ್ನೇ ಪರಿಚಯಿಸಿದ್ದೇನೆ. ಅದರಲ್ಲಿ ತುಂಬಾ ಜನ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅವರನ್ನು ನೋಡಿದರೆ ಖುಷಿ ಇರುತ್ತದೆ. ಬೇರೆಯವರು ಬೆಳೆಯಲಿಲ್ಲಾ, ಅವರ ಪ್ರತಿಭೆ, ನಡವಳಿಕೆ ಎಲ್ಲವೂ ಅದಕ್ಕೆ ಕಾರಣವಾಗಿರುತ್ತದೆ. ಅವರನ್ನು ಪರಿಚಯಿಸುವುದು ನನ್ನ ಕೆಲಸ ಅವರು ಹೆಸರು ಉಳಿಸಿಕೊಂಡರಾ, ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾರಾ ಎಂದೆಲ್ಲಾ ನಾನು ಯೋಚಿಸುವುದು ಕೂಡ ಇಲ್ಲ' ಎಂದು ಹೇಳಿದರು.
'ನೀವು ಹಿಂದೆ ನಡೆದು ಹೋದ ಘಟನೆಗಳ ಬಗ್ಗೆ ಯೋಚಿಸಿದರೆ ಮುಂದಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಹಿಂದೆ ಆಗಿರುವ ಯಶಸ್ಸಿನ ಬಗ್ಗೆ ನೆನಪಿದೆ ಖುಷಿ ಇದೆ ಹೆಮ್ಮೆ ಇದೆ. ಹಾಗಂತ ಅದನ್ನೇ ಮಾತನಾಡಿಕೊಂಡು ಕೂರಲು ಆಗುವುದಿಲ್ಲ. ನಾನಂತೂ ಬದಲಾಗಿಲ್ಲ. ನಾನು ಮೊದಲು ಹೇಗೆ ಇದ್ದೇನೋ ಹಾಗೇ ಇದ್ದೇನೆ. ಕಾಲೇಜಿಗೆ ಹೋಗುವಾಗ ಹೇಗಿದ್ದೆ ಈಗಲೂ ಹಾಗೇ ಇದ್ದೇನೆ. ಕನ್ನಡ ಸ್ವಲ್ಪ ಬದಲಾಗಿದೆ ಅಷ್ಟೇ. ಮೊದಲು ಮಂಗಳೂರು ಕನ್ನಡ ಜಾಸ್ತಿ ಬರುತ್ತಿತ್ತು ಈಗ ಇಲ್ಲಿನ ಕನ್ನಡ ಬರುತ್ತಿದೆ ಅಷ್ಟೇ' ಎಂದು ಗುರು ಕಿರಣ್ ಹೇಳಿದರು.












Click it and Unblock the Notifications