Actor Darshan; ದರ್ಶನ್ ಬಗ್ಗೆ ಮೊದಲ ಬಾರಿ ಮಾತನಾಡಿ ವಾರ್ನಿಂಗ್ ಕೊಟ್ಟ ದಿನಕರ್ ತೂಗುದೀಪ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಬರುವ ವಿಶ್ವಾಸದಲ್ಲಿದ್ದಾರೆ. ಪದೇ ಪದೇ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗುತ್ತಿರುವುದು ಆತಂಕ ಮೂಡಿಸಿದ್ದರೂ, ಜಾಮೀನು ಸಿಗುತ್ತಾ ಇಲ್ಲವಾ ಎನ್ನುವುದು ಅಕ್ಟೋಬರ್ 8ರಂದು ನಿರ್ಧಾರವಾಗಲಿದೆ.
ಜೈಲಿನಲ್ಲಿರುವ ದರ್ಶನ್‌ರನ್ನು ಕುಟುಂಬದವರು, ಸ್ನೇಹಿತರು ಭೇಟಿ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿಯಮಿತವಾಗಿ ದರ್ಶನ್‌ರನ್ನು ಭೇಟಿ ಮಾಡುತ್ತಲೇ ಇರುತ್ತಾರೆ, ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್ ತೂಗುದೀಪ ಕೂಡ ಹಲವು ಬಾರಿ ದರ್ಶನ್‌ರನ್ನು ಭೇಟಿ ಮಾಡಿದ್ದರೆ, ಮಗ ವಿನೀಶ್ ಕೂಡ ಭೇಟಿ ಮಾಡಿದ್ದರು. ದರ್ಶನ್ ಬಂಧನದ ಬಗ್ಗೆ ಈವರೆಗೂ ಕುಟುಂಬದ ಯಾರೊಬ್ಬರೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಈಗ ತಮ್ಮ ದಿನಕರ್ ತೂಗುದೀಪ್ ಮಾತನಾಡಿದ್ದು, ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ದಿನಕರ್ ತೂಗುದೀಪ್ ಅವರ ನಿರ್ದೇಶನದ ರಾಯಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಾಯಲ್ ಸಿನಿಮಾದ ಎರಡನೇ ಹಾಡನ್ನು ತುಮಕೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದ ಚಿತ್ರತಂಡ, ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಾಡು ಬಿಡುಗಡೆ ಮಾಡಿತು.
ದಿನಕರ್ ತೂಗುದೀಪ್ ಹೇಳಿದ್ದೇನು?
ಹಾಡು ಬಿಡುಗಡೆ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ದಿನಕರ್ ತೂಗುದೀಪ್, ನಮಗೆ ಯಾವುದೇ ಸಮಸ್ಯೆ ಇದ್ದರೂ ಬೆಂಬಲ ಕೊಡುತ್ತಿರುವ ಸೆಲೆಬ್ರೆಟೀಸ್‌ಗೆ ನಾವು ನಮ್ಮ ಕುಟುಂಬ ಚಿರಋಣಿಯಾಗಿರುತ್ತದೆ. ನಾವು ಏನೇ ಹೆಸರು ಮಾಡಿದ್ದರೂ ಅದು ನಿಮ್ಮ ಅಭಿಮಾನದಿಂದ, ನಮ್ಮ ಪರಿಸ್ಥಿತಿಯಿಂದಾಗಿ ನಾನು ಇಷ್ಟು ದಿನ ಹೊರಗಡೆ ಎಲ್ಲೂ ಹೋಗಿರಲಿಲ್ಲ, ನನ್ನನ್ನು ನಂಬಿ ಜಯಣ್ಣ, ಭೋಗೇಂದ್ರ ಹಣ ಹಾಕಿದ್ದಾರೆ, ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವುದು ನನ್ನ ಜವಾಬ್ದಾರಿ ಅದಕ್ಕಾಗಿ ಬಂದಿದ್ದೇನೆ ಎಂದರು.
ಡಿ ಬಾಸ್ ಅಭಿಮಾನಿಗಳಿಗೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ. ನಿಮ್ಮ ಪ್ರೀತಿ ಹೀಗೆ ಇರಲಿ, ನಿಮ್ಮ ಪ್ರೀತಿ, ಅಭಿಮಾನ ಇರುವವರೆಗೆ ಡಿ ಬಾಸ್‌ಗೆ ಯಾರೂ ಏನೂ ಮಾಡಲು ಆಗಲ್ಲ ಎಂದು ಹೇಳುವ ಮೂಲಕ ಅವರ ವಿರೋಧಿಗಳಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ನಮ್ಮ ಸಿನಿಮಾ ಮಾತ್ರವಲ್ಲ ಎಲ್ಲಾ ಕನ್ನಡ ಸಿನಿಮಾಗಳಿಗೂ ಬೆಂಬಲ ಕೊಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ನವಗ್ರಹ, ಸಾರಥಿ, ಜೊತೆ ಜೊತೆಯಲಿ ಸಿನಿಮಾಗಳನ್ನು ನಾನು ಸೂಪರ್ ಹಿಟ್ ಮಾಡಿಲ್ಲ, ಒಳ್ಳೆ ಸಿನಿಮಾ ಮಾಡೋದಷ್ಟೇ ನನ್ನ ಕೆಲಸ, ಅದನ್ನು ಹಿಟ್ ಮಾಡಿದ್ದು ಅಭಿಮಾನಿಗಳು, ರಾಯಲ್ ಸಿನಿಮಾದಲ್ಲಿ ಕೂಡ ಮನರಂಜನೆಗೆ ಕೊರತೆಯಿಲ್ಲ ಸಿನಿಮಾ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.












Click it and Unblock the Notifications