ಸಾಲ ಮಾಡಿದ ಮೊಮ್ಮಗ! ಖ್ಯಾತ ಹೀರೋ ಮನೆ ಮುಟ್ಟುಗೋಲು ಹಾಕಿಕೊಳ್ಳಲು ಹೈಕೋರ್ಟ್ ಆದೇಶ
ತಮಿಳು ಸಿನಿಮಾದ ದಿಗ್ಗಜ ನಟ ದಿವಂಗತ ಶಿವಾಜಿ ಗಣೇಶನ್ ಅವರ ಮನೆ ಮುಟ್ಟುಗೋಲು ಹಾಕಿಕೊಳ್ಳಲು ಚೆನ್ನೈನ ಹೈಕೋರ್ಟ್ ಆದೇಶ ನೀಡಿದೆ. ಮೊಮ್ಮಗ ಮಾಡಿದ ಸಾಲಕ್ಕೆ ಇದೀಗ ಹಿರಿಯ ನಟನ ಮನೆ ಹರಾಜಿಗೆ ಬಂದಿದೆ. ಶಿವಾಜಿ ಗಣೇಶನ್ ಅವರ ಮೊಮ್ಮಗ ದುಶ್ಯಂತ್ ಮತ್ತು ಪತ್ನಿ ಅಭಿರಾಮಿ ತಮಿಳು ಚಿತ್ರ ಜಗಜಾಲ ಕಿಲಾಡಿ ನಿರ್ಮಾಣಕ್ಕಾಗಿ ಸಾಲ ಮಾಡಿದ್ದು ಈಗ ಸಂಕಷ್ಟಕ್ಕೆ ಸಿಲುಕಿಸಿದೆ.
ಸಿನಿಮಾ ನಿರ್ಮಾಣಕ್ಕಾಗಿ ಮಾಡಿದ ಸಾಲ ವಾಪಸ್ ಮಾಡದ ಹಿನ್ನಲೆಯಲ್ಲಿ ಮರುಪಾವತಿಯಾಗದ ಸಾಲಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಶಿವಾಜಿ ಗಣೇಶನ್ ಅವರ ಚೆನ್ನೈನ ಮನೆಯ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಚೆನ್ನೈ ಹೈಕೋರ್ಟ್ ಆದೇಶ ಕೊಟ್ಟಿದೆ.

ತಮಿಳು ಹಿರಿಯ ನಟ ಶಿವಾಜಿ ಗಣೇಶನ್ ಅವರ ಮೊಮ್ಮಗ, ನಟ ದುಶ್ಯಂತ್ ಮತ್ತು ಅವರ ಪತ್ನಿ ಅಭಿರಾಮಿ ಪಾಲುದಾರರಾಗಿರುವ ಈಸನ್ ಪ್ರೊಡಕ್ಷನ್ಸ್ ಕಂಪನಿಯು ನಟ ವಿಷ್ಣು ವಿಶಾಲ್, ನಟಿ ನಿವೇತಾ ಪೇತುರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜಗಜಾಲ ಕಿಲಾಡಿ ಚಿತ್ರಕ್ಕೆ ಬಂಡವಾಳ ಹಾಕಿತ್ತು. ಈ ಸಿನಿಮಾ ನಿರ್ಮಾಣಕ್ಕಾಗಿ 3.74 ಕೋಟಿ ರೂಪಾಯಿ ಸಾಲ ಮಾಡಿದ್ದರು. ವಾರ್ಷಿಕ 30 ಪ್ರತಿಶತ ಬಡ್ಡಿ ಸಮೇತ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.
ಆದರೆ ಸಾಲದ ಮೊತ್ತವನ್ನು ಮರುಪಾವತಿ ಮಾಡದ ಕಾರಣ, ಸಮಸ್ಯೆಯನ್ನು ಬಗೆಹರಿಸಲು ನಿವೃತ್ತ ಚೆನ್ನೈ ಹೈಕೋರ್ಟ್ ನ್ಯಾಯಮೂರ್ತಿ ಟಿ ರವೀಂದ್ರನ್ ಅವರನ್ನು ಮಧ್ಯವರ್ತಿಯಾಗಿ ನೇಮಕ ಮಾಡಲಾಯಿತು. ಸಾಲದ ಒಪ್ಪಂದವನ್ನು ಪರಿಶೀಲನೆ ಮಾಡಿದ ನ್ಯಾಯಮೂರ್ತಿ ರವೀಂದ್ರನ್ ಮೇ 4, 2024ರಂದು ಜಗಜಾಲ ಕಿಲಾಡಿ ಸಿನಿಮಾದ ಹಕ್ಕುಗಳನ್ನು ಖಾಸಗಿ ಉದ್ಯಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಸ್ತಾಂತರ ಮಾಡಲು ಆದೇಶ ನೀಡಿದ್ದರು.
ಬಡ್ಡಿ ಸೇರಿ ಸಾಲದ ಮೊತ್ತ 9.2 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಸಾಲದ ಮೊತ್ತವನ್ನು ವಸೂಲಿ ಮಾಡಲು ಹಕ್ಕುಗಳನ್ನು ಮಾರಾಟ ಮಾಡಬೇಕು ಮತ್ತು ಉಳಿದ ಮೊತ್ತವನ್ನು ಈಸನ್ ಪ್ರೊಡಕ್ಷನ್ಸ್‌ಗೆ ನೀಡಬೇಕು ಎಂದು ಆದೇಶ ಕೊಟ್ಟಿದ್ದರು.
ಆದರೆ ಸಿನಿಮಾ ಶೂಟಿಂಗ್ ಪೂರ್ಣವಾಗದ ಹಿನ್ನಲೆಯಲ್ಲಿ, ಸಾಲ ಕೊಟ್ಟಿದ್ದ ಸಂಸ್ಥೆ ಶಿವಾಜಿ ಗಣೇಶನ್ ಅವರ ಮನೆಯ ಒಂದು ಭಾಗವನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನು ಹರಾಜು ಹಾಕಲು ಆದೇಶ ನೀಡುವಂತೆ ಕೋಡಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಸಾಲದ ಮೊತ್ತ ಬಡ್ಡಿ ಸಮೇತ 9.39 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಬ್ದುಲ್ ಖುದ್ದೋಸ್, ದಂತಕಥೆ ನಟ ಶಿವಾಜಿ ಗಣೇಶನ್ ಅವರ ಮನೆಯ ಒಂದು ಭಾಗವನ್ನು ವಶಪಡಿಸಿಕೊಳ್ಳಲು ಆದೇಶ ನೀಡಿದ್ದಾರೆ. ಈಸನ್ ಪ್ರೊಡಕ್ಷನ್ಸ್ ಸಮಯ ಕೋರಿದ್ದರೂ ಪ್ರತಿ-ಅರ್ಜಿ ಸಲ್ಲಿಸಿಲ್ಲ, ಆದೇಶದ ಬಗ್ಗೆ ಸಂಬಂಧಿತ ಸಬ್-ರಿಜಿಸ್ಟ್ರಾರ್‌ಗೆ ತಿಳಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದು, ಪ್ರಕರಣವನ್ನು ಮಾರ್ಚ್ 5 ಕ್ಕೆ ಮುಂದೂಡಲಾಗಿದೆ.












Click it and Unblock the Notifications