ಐ ಯ್ಯಾಮ್ ಸೈನಿಂಗ್ ಆಫ್ ಅಂದ ಬ್ರಹ್ಮಗಂಟು ಸೌಂದರ್ಯ, ಅಪ್ಪು ಕೊಟ್ಟ ಜೀವನದ ದೊಡ್ಡ ಗಿಫ್ಟ್!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಸೀರಿಯಲ್ ಒಂದು ಟೈಮಲ್ಲಿ ಸಿಕ್ಕಾಪಟ್ಟೆ ಜನರ ಫೇವರಿಟ್ ಆಗಿತ್ತು. ಆಮೇಲೆ ಕೊಂಚ ಟಿಆರ್‌ಪಿ ಗಿಟ್ಟಿಸುವಲ್ಲಿ ಏರಿಳಿತ ಕಂಡರೂ ಒಂದು ಹಂತದ ವೀಕ್ಷಕರು ಈ ಸೀರಿಯಲ್‌ಗೆ ಇದ್ದೇ ಇದ್ದರು. ಈ ಸೀರಿಯಲ್ ಅನ್ನು ನಿರ್ಮಾಣ ಮಾಡುತ್ತಿದ್ದವರು ಕೆಲವು ಸಮಯದ ಹಿಂದೆ ಗತಿಸಿದ ಕಲಾವಿದ, ನಿರ್ಮಾಪಕ ದಿಲೀಪ್ ರಾಜ್ ಹಾಗೂ ಅವರ ಪತ್ನಿ ಶ್ರೀವಿದ್ಯಾ ರಾಜ್.

ದಿಲೀಪ್ ರಾಜ್ ಪತ್ನಿಯ ಭಾವುಕ ಸಂದೇಶ
ಕೆಲವು ಸಮಯದ ಹಿಂದೆ ಈ ಸೀರಿಯಲ್ ಮುಕ್ತಾಯವಾಗುತ್ತಿರುವುದನ್ನು ಘೋಷಿಸಿದ ಅವರು ʼಜಗತ್ತಿನ ಬಹಳ ಸುಂದರವಾಗಿರುವುದು, ಬಹಳ ಉತ್ತಮ ವ್ಯಕ್ತಿತ್ವಗಳು ಬೇಗ ಮರೆಯಾಗುತ್ತವೆ. ನನ್ನ ಬದುಕಿನ ವಂಡಲ್‌ಫುಲ್ ವ್ಯಕ್ತಿ ದಿಲೀಪ್ ಅವರನ್ನು ಕಳೆದುಕೊಂಡ ಮೇಲೆ ಇದೀಗ ನನ್ನ ಹೃದಯಕ್ಕೆ ಹತ್ತಿರವಾಗಿದ್ದ ನಮ್ಮ ನಿರ್ಮಾಣದ ʼಬ್ರಹ್ಮಗಂಟುʼ ಸೀರಿಯಲ್ ಅನ್ನು ಮುಕ್ತಾಯ ಮಾಡುತ್ತಿದ್ದೇವೆʼ ಎಂದಿದ್ದಾರೆ. ಸದ್ಯಕ್ಕೀಗ ಬ್ರಹ್ಮಗಂಟು ಸುಖಾಂತ್ಯವಾಗಿ ಎಲ್ಲವೂ ಎಲ್ಲರೂ ಸುಖವಾಗಿರುವುದನ್ನು ತೋರಿಸುತ್ತ ಮುಕ್ತಾಯ ಕಂಡಿದೆ.
ಗುಣವೋ ಸೌಂದರ್ಯವೋ..?
ಈ ಇಡೀ ಸೀರಿಯಲ್ ಕಥೆ ನಿಂತಿದ್ದಿದ್ದೇ ಗುಣ ಮೇಲೋ ಸೌಂದರ್ಯ ಮೇಲೋ ಎಂಬ ಕಾನ್ಸೆಪ್ಟ್ ಮೇಲೆ. ಗುಣವೇ ಮುಖ್ಯ ಸೌಂದರ್ಯ ಅಲ್ಲ ಅನ್ನೋ ಕಾನ್ಸೆಪ್ಟ್ ಪರ ನಾಯಕಿ ದೀಪ ಇದ್ದರೆ, ಸೌಂದರ್ಯ, ಶ್ರೀಮಂತಿಕೆ ಮುಂದೆ ಗುಣ ಎಲ್ಲ ಗೌಣ ಅನ್ನೋದನ್ನು ಪ್ರತಿನಿಧಿಸಿದ್ದು ಸೌಂದರ್ಯ. ಇಡೀ ಸೀರಿಯಲ್ ದೀಪ ಮತ್ತು ಸೌಂದರ್ಯ ಎಂಬೆರಡು ಪಾತ್ರಗಳ ನಡುವಿನ ಫೈಟ್ ರೀತಿ ಮೂಡಿಬಂದಿತ್ತು. ಇದರ ಜೊತೆ ಎಲ್ಲೆಲ್ಲೋ ಕಥೆ ಹರಿದು ಸೇಡು, ಕೊಲೆ ಹುನ್ನಾರ ಹೀಗೆ ನಾನಾ ತಿರುವುಗಳಿದ್ದವು. ನಾಯಕಿ ದೀಪಾ ಅನೇಕ ಸವಾಲುಗಳನ್ನು ಜಯಿಸಿ ಗುಣವೇ ಮೇಲು, ಸೌಂದರ್ಯ ಅಲ್ಲ ಅನ್ನೋದನ್ನು ಸಾಧಿಸಿ ತೋರಿಸುವುದರೊಂದಿಗೆ ಈ ಸೀರಿಯಲ್ ದಿ ಎಂಡ್ ಆಗಿದೆ.
ಸೈನಿಂಗ್ ಆಫ್ ಎಂದ ಸೌಂದರ್ಯ
ಈ ಸೀರಿಯಲ್‌ನ ಸೌಂದರ್ಯ ಪಾತ್ರವನ್ನು ನಿರ್ವಹಿಸಿದ್ದು ನಟಿ ಪ್ರೀತಿ ಶ್ರೀನಿವಾಸ್. ವರ್ಷಾನುಗಟ್ಟಲೆ ಸೌಂದರ್ಯ ಪಾತ್ರಕ್ಕಾಗಿ ಮೇಕಪ್ ಹಚ್ಚಿದ್ದ ಈ ನಟಿ ಇದೀಗ ಸೀರಿಯಲ್ ಕೊನೆಯಾದದ್ದಕ್ಕೆ ಭಾವುಕ ವಿದಾಯ ಹೇಳಿದ್ದಾರೆ. ʼ೫೦೦ಕ್ಕೂ ಹೆಚ್ಚು ಸಂಚಿಕೆಗಳ ಕಾಲ ಸೌಂದರ್ಯಾಳನ್ನು ನಿಮ್ಮ ಮನೆ ಮಗಳಂತೆ ಆಶೀರ್ವದಿಸಿದ್ದೀರಿ. ಕೇವಲ ಒಂದು ಪಾತ್ರವಾಗಿ ಆರಂಭವಾದ ಜರ್ನಿ ಇದು. ಇದು ಯಾವ ಮಟ್ಟಕ್ಕೆ ಬೆಳೆದಿದೆ ಅಂದರೆ ಜನ ನನ್ನನ್ನು ಪ್ರೀತಿ ಅಂತ ಗುರುತಿಸುವುದಕ್ಕಿಂತ ಹೆಚ್ಚಾಗಿ ಸೌಂದರ್ಯ ಅಂತ ಗುರುತಿಸುತ್ತಾರೆ. ಪ್ರತೀ ಬಾರಿಯೂ ನಿಮ್ಮ ಪ್ರೀತಿಯನ್ನು ಗೌರವದಿಂದ ಸ್ವೀಕರಿಸಿದ್ದೇನೆʼ ಎಂದಿದ್ದಾರೆ.
ವೈಭವದ ಪಾತ್ರ
ʼಸೌಂದರ್ಯ ಪಾತ್ರ ಕೇವಲ ಪಾತ್ರವಾಗಷ್ಟೇ ಉಳಿಯಲಿಲ್ಲ. ಅಲ್ಲಿ ಸೌಂದರ್ಯದ ನಾನಾ ರೂಪಗಳು ಕಂಡಬಂದವು. ನಾನಾ ಬಗೆಯ ಸೀರೆಗಳ ವೈಭವ, ಸೊಗಸಾದ ಶೈಲಿ, ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸ, ಗಾಂಭೀರ್ಯ ಈ ಪಾತ್ರಕ್ಕೆ ಜೀವ ತುಂಬಿತು. ಎಲ್ಲಿ ಹೋದರೂ ಜನ ʼಸೌಂದರ್ಯ ಮೇಡಂʼ ಅಂತ ಕರೀತಿದ್ರು. ಇದಕ್ಕಿಂತ ದೊಡ್ಡ ಆಶೀರ್ವಾದ ಮತ್ತೊಂದಿಲ್ಲ. ಸೌಂದರ್ಯ ಪಾತ್ರವನ್ನು ದ್ವೇಷಿಸುತ್ತಲೇ ಪ್ರೀತಿಸಿದ ನಿಮಗೆ ಕೃತಜ್ಞತೆಗಳುʼ ಎಂದು ಪ್ರೀತಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಯಾರು ಈ ಸೌಂದರ್ಯ?
ವೃತ್ತಿಯಲ್ಲಿ ಇವರೊಬ್ಬ ಸೈಕಾಲಜಿಸ್ಟ್. ಈಗಾಗಲೇ ಸರಸ್ವತಿ-ಲಕ್ಷ್ಮೀ ಪ್ರಿಯೆ, ಜೀವನ ಚೈತ್ರ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಸೀರಿಯಲ್‌ಗಳಲ್ಲೂ ಮಿಂಚಿರುವ ನಟಿ ಪ್ರೀತಿ ಅವರು ಅನ್ನಪೂರ್ಣ, ರಾಮ ಸೀತಾ ಎಕ್ಕಡ, ಗಂಗಮಂಗ, ಪಡಮಟ್ಟಿ ಸಂಧ್ಯಾರಾಗಂಗಳಿಗೆ ಬಣ್ಣ ಹಚ್ಚಿದ್ದಾರೆ. ʼಗಣೇಶ ಮತ್ತೆ ಬಂದʼ, ʼಚಂದ್ರʼ ಎಂಬ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಮುಖಾಮುಖಿ
ಕಳೆದ ವರ್ಷ ಸಂದರ್ಶನವೊಂದರಲ್ಲಿ ಪ್ರೀತಿ ಅವರು ಒಂದು ಘಟನೆ ಹಂಚಿಕೊಂಡಿದ್ದರು. ಪ್ರೀತಿ ಅವರು ಕಾಲೇಜಿನಲ್ಲಿ ಓದುವಾಗ ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗಿಯಾಗಿ ವಿನ್ನರ್ ಆಗಿದ್ದರಂತೆ. ಪ್ರಶಸ್ತಿ ನೀಡುವುದಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು ಆಹ್ವಾನಿಸಲಾಗಿತ್ತಂತೆ. ವಿನ್ನರ್ ಆಗಿದ್ದ ಪ್ರೀತಿ ಮತ್ತು ಇತರರನ್ನು ಸ್ಟೇಜ್ ಮೇಲೆ ಕೂರಿಸಿದ್ದಾಗ, ಕಾಲೇಜ್ ಹುಡುಗಿಯರೆಲ್ಲಾ -ಫೋಟೋ ಮತ್ತು ಆಟೋಗ್ರಫ್ ಗಾಗಿ ಮುಗಿ ಬಿದ್ದಿದ್ದರಂತೆ. ಆಗ ಬಹಳ ಸಂಕೋಚದ ಹುಡುಗಿಯಾಗಿದ್ದ ಪ್ರೀತಿ ಅವರು ಕೂಡ ಪುನೀತ್ ಅವರ ಬಳಿ ಹೋಗಿ ನಿಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳಬಹುದಾ ಎಂದು ಕೇಳಿದ್ದರಂತೆ.
ನಾನೇ ನಿಮ್ಮತ್ರ ಫೋಟೋ ಕೇಳ್ಬೇಕು ಅಂದಿದ್ದ ಅಪ್ಪು
ನಿಮ್ಮ ಜೊತೆಗೊಂದು ಫೋಟೋ ಬೇಕು ಎಂದ ಪ್ರೀತಿ ಅವರ ಮಾತಿಗೆ ಪುನೀತ್ ಅವರ ಉತ್ತರ ನೆಕ್ಸ್ಟ್ ಲೆವೆಲ್ ಅಲ್ಲಿತ್ತು. ʼನೀವೇನ್ರಿ ನನ್ನ ಕೇಳ್ತಿದ್ದೀರಾ. ನೀವು ಎಷ್ಟು ಸುಂದರವಾಗಿದ್ದೀರಾ, ನಿಮ್ಮ ಜೊತೆಗೆ ನಾನು ಫೋಟೋ ತೆಗೆಸಿಕೊಳ್ಳಬೇಕು ಎಂದು ಹೇಳಿ ಫೋಟೋಗೆ ಪೋಸ್ ಕೊಟ್ಟಿದ್ದರಂತೆ. ಅಪ್ಪು ಅವರು ಎಷ್ಟು ಸಿಂಪಲ್ ವ್ಯಕ್ತಿ ಎಂಬುದನ್ನು ನಾನು ಆಗಲೇ ಅರ್ಥ ಮಾಡಿಕೊಂಡಿದ್ದು, ಅವರು ಇಂದು ನಮ್ಮನ್ನು ಅಗಲಿ ಎಷ್ಟೇ ವರ್ಷಗಳಾದರೂ ನಾನು ಯಾವತ್ತಿಗೂ ಅವರ ಸಿಪ್ಲಿಸಿಟಿ ಅನ್ನು ಮರೆಯಲಾರೆ. ಯುವಕರಿಂದ ಹಿಡಿದು ಮುದುಕರವರೆಗೂ ಅಪ್ಪು ಅವರ ಮೇಲೆ ವಿಶೇಷವಾದ ಅಭಿಮಾನವಿದೆʼ ಎಂದು ಪ್ರೀತಿ, ಅಪ್ಪು ಅವರ ಸರಳತೆಯನ್ನ ಕೊಂಡಾಡಿದ್ದರು.


Click it and Unblock the Notifications
