Karthik Mahesh: ಬಿಗ್‌ಬಾಸ್ ಗೆಲುವನ್ನು ಕನ್ನಡಿಗರ ಪ್ರೀತಿಯ 'ಅಪ್ಪು'ಗೆ ಅರ್ಪಿಸಿದ ಕಾರ್ತಿಕ್
ಬೆಂಗಳೂರು, ಫೆಬ್ರವರಿ 05: ಬಿಗ್ ಬಾಸ್ ಕನ್ನಡ ಸೀಜನ್ 10 ವಿನ್ನರ್ ಕಾರ್ತಿಕ್ ಮಹೇಶ್ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದು, ತಮ್ಮ ಬಿಗ್ ಬಾಸ್ ಕನ್ನಡ ಸೀಜನ್ 10 ಗೆಲುವನ್ನು ಕನ್ನಡಿಗರ ಪ್ರೀತಿಯ ಅಪ್ಪು ಅವರಿಗೆ ಅರ್ಪಿಸಿದ್ದಾರೆ.
ನಟನಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದ ಕಾರ್ತಿಕ್ ಮಹೇಶ್ ಬಿಗ್ ಬಾಸ್ ಮನೆಯಿಂದ ಟ್ರೋಫಿ ಸಮೇತ ಮರಳಿದ್ದಾರೆ. ಇಂದು ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ ಕಾರ್ತಿಕ್ ಮಹೇಶ್ ಪುನೀತ್ ರಾಜ್‌ಕುಮಾರ್ ಸಮಾಧಿ ಮುಂದೆ ಬಿಗ್‌ಬಾಸ್ ಟ್ರೋಫಿ ಇಟ್ಟು ನಮಸ್ಕರಿಸಿದ್ದಾರೆ.

ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭೂಮಿ ಮುಟ್ಟಿ ನಮಸ್ಕರಿಸಿಕೊಂಡ ಕಾರ್ತಿಕ್ ಬಳಿಕ ಅಪ್ಪು ಅವರ ಭಾವಚಿತ್ರಕ್ಕೆ ನಮಿಸಿದ್ದಾರೆ. ಕಾರ್ತಿಕ್, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಈ ಹಿಂದೆ ಕೂಡ ಅಪ್ಪು ಅವರನ್ನು ಸ್ಮರಿಸಿಕೊಂಡಿದ್ದರು.
ಶನಿವಾರ( ಫೆಬ್ರವರಿ 03)ರಂದು ತಮ್ಮ ಹುಟ್ಟೂರು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಕಾರ್ತಿಕ್ ಅಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದರು. ಅಣ್ಣಾವ್ರು ಹುಟ್ಟಿದ್ದು ಇದೇ ಚಾಮರಾಜನಗರ ಜಿಲ್ಲೆ, ಅದೇ ನನಗೆ ಹೆಮ್ಮೆ. ನಾನೂ ಈ ನೆಲದಲ್ಲಿ ಹುಟ್ಟಿದ್ದೇನೆ. ಟ್ರೋಫಿ ಗೆದ್ದರೂ ಒಂದು ಕೊರತೆ ಇದೆ. ಗೆದ್ದ ತಕ್ಷಣ ಅಪ್ಪು ಸರ್ ಅವರ ಆಶೀರ್ವಾದ ಪಡೆಯಬೇಕಿತ್ತು. ಅದು ನನಗೆ ಸಾಧ್ಯವಾಗಲ್ಲಿಲ್ಲ. ಈ ವಿಚಾರ ಬೇಸರ ತಂದಿದೆ ಎಂದು ಕಾರ್ತಿಕ್ ನೆನಪಿಸಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ ಸೀಜನ್ 10 ಟ್ರೋಫಿ ಗೆದ್ದ ಕಾರ್ತಿಕ್
ಬಿಗ್ ಬಾಸ್ ಕನ್ನಡ ಸೀಜನ್ 10 ಗ್ರಾಂಡ್ ಫಿನಾಲೆ ಮುಗಿದು ವಾರ ಕಳೆಯುತ್ತಿದ್ದು, ಈ ಬಾರಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಸದ್ಯ ತಮ್ಮಿಷ್ಟದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾರ್ತಿಕ್ ಸೇರಿದಂತೆ ವಿನಯ್ ಗೌಡ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಫಿನಾಲೆ ತಲುಪಿದ್ದರು.
ಜನರ ವೋಟಿಂಗ್ ಆಧಾರದ ಮೇಲೆ ಒಬ್ಬೊಬ್ಬರೇ ಸ್ಪರ್ಧಿಗಳು ಹೊರಬಂದು ಕೊನೆಯಲ್ಲಿ ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಕೊನೆಯ ಎರಡು ಸ್ಪರ್ಧಿಗಳಾಗಿದ್ದರು. ಡ್ರೋನ್ ಪ್ರತಾಪ್‌ಗೂ ಅಭಿಮಾನಿಗಳ ಬಳಗ ಹೆಚ್ಚಿದ್ದು, ತೀವ್ರ ಪೈಪೋಟಿಯಲ್ಲಿ ಕಾರ್ತಿಕ್ ಮಹೇಶ್ 2,97,39,904 ವೋಟ್ ಪಡೆದು ಬಿಗ್ ಬಾಸ್ ಕನ್ನಡ ಸೀಜನ್ 10 ವಿಜೇತರಾದರು.












Click it and Unblock the Notifications