Gold Suresh: ಲಕ್ಷ ಲಕ್ಷ ಹಣ ವಂಚನೆ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಗೋಲ್ಡ್ ಸುರೇಶ್
Gold Suresh: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ಅವರ ಮೇಲೆ ಹಣ ವಂಚನೆ ಆರೋಪ ಕೇಳಿಬಂದಿತ್ತು. ಸುರೇಶ್ ಅವರು ಕೇಬಲ್ ಚಾನೆಲ್ ಸೆಟಪ್ ಮಾಡಿಕೊಡುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ವಂಚನೆ ಮಾಡಿದ್ದಾರೆ ಎಂದು ರಾಯಚೂರಿನ ಮಾನ್ವಿ ಮೂಲದ ಮೈನುದ್ದಿನ್ ಎಂಬುವವರು ಮಾಧ್ಯಮಗಳ ಮುಂದೆ ಬಂದು ಆರೋಪಿಸಿದ್ದರು. ಈ ಬಗ್ಗೆ ಗೋಲ್ಡ್ ಸುರೇಶ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳಿಗೆ ಅವರೇ ಉತ್ತರ ನೀಡಿದ್ದಾರೆ.
ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಗೋಲ್ಡ್ ಸುರೇಶ್, ನಾನು ನನ್ನ ಪಾಡಿಗೆ ಬಿಸಿನೆಸ್ ಮಾಡಿಕೊಂಡಿದ್ದೆ. ಆ ವ್ಯಕ್ತಿ ಇದ್ದಕ್ಕಿದ್ದಂತೆ ಬಂದು ದುಡ್ಡು ಕೊಡಬೇಕು ಅಂದ್ರು. ಇದು ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವಾದ್ದರಿಂದ ಸಿವಿಲ್ ಕೋರ್ಟ್ನಲ್ಲಿ ಕೇಸ್ ಹಾಕಬಹುದಿತ್ತು. ಒಂದು ವೇಳೆ ಅಗ್ರಿಮೆಂಟ್ ಮುಗಿದಿದ್ದರೆ ಅದರ ಮೇಲೂ ಕೇಸ್ ಹಾಕಲು ಅವಕಾಶವಿದೆ. ಅವರು ಅದನ್ನ ಮಾಡಿಲ್ಲ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.

ಇಂತಹ ಪೆಟ್ಟುಗಳನ್ನ ಹಲವು ಬಾರಿ ತಿಂದಿದ್ದರಿಂದ ಹಣ ಕೊಟ್ಟರೆ ಮಾತ್ರ ಕೆಲಸ ಮುಂದುವರಿಸುತ್ತೇನೆ ಎಂದು ಅವರಿಗೆ ಹೇಳಿದ್ದೆ. ನನಗೆ ಅವರ ವರ್ತನೆ ಇಷ್ಟವಾಗಲಿಲ್ಲ. ಹಾಗಾಗಿ ನಾನು ಆ ಕೆಲಸ ಮಾಡಲ್ಲ ಎಂದು ಹೇಳಿ ಬೆಂಗಳೂರಿಗೆ ಬಂದೆ. ಅವರು ಹಣ ವಾಪಸ್ ಕೇಳಿದ್ರು, ಅಲ್ಲಿಯವರೆಗೆ ಕೆಲಸಕ್ಕೆ ಖರ್ಚಾದ ಹಣ ಬಿಟ್ಟು ಉಳಿದ ಹಣ ವಾಪಸ್ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಇದ್ದಕ್ಕಿದ್ದಂತೆ ಫೋನ್ ಮಾಡಿ 6 ಲಕ್ಷ ಹಣ ಕೊಡದಿದ್ದರೆ ಮಾಧ್ಯಮಗಳ ಮುಂದೆ ಹೋಗ್ತೀನಿ ಎಂದು ಬೆದರಿಸಿದರು. ನಾನು ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಈ ವ್ಯಕ್ತಿ ಫೋನ್ ಮಾಡಿ ಸಹಾಯ ಕೇಳಿದ್ರು. ನಾನು ಮಾನವೀಯತೆಯಿಂದ 50 ಸಾವಿರ ರೂಪಾಯಿ ಕೊಡಿಸಿದ್ದೆ. ಇದನ್ನು ಬಿಟ್ಟು ನಮ್ಮಿಬ್ಬರ ಮಧ್ಯೆ ಯಾವುದೇ ವ್ಯವಹಾರ ಇಲ್ಲ ಎಂದಿದ್ದಾರೆ. ಈಗಾಗಲೇ ನಾನು ಆತನ ವಿರುದ್ಧ ಕ್ರಮ ತೆಗೆದುಕೊಂಡಿದ್ದೀನಿ, ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸುತ್ತೇನೆ. ಆ ವ್ಯಕ್ತಿ ಮೀಡಿಯಾ ಮುಂದೆ ಏನು ಬೇಕಾದರೂ ಹೇಳ್ತಾನೆ. ಆ ವ್ಯಕ್ತಿ ಮೇಲೆ ಕೇಸ್ ಹಾಕಿದ್ದೇನೆ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ. ಈ ಹಿಂದೆಯೂ ಸುರೇಶ್ ವಿರುದ್ಧ ಆರೋಪಗಳು ಕೇಳಿಬಂದಿದ್ದವು.
ಏನಿದು ಆರೋಪ?
ಮೈನುದ್ದೀನ್ ಹಾಗೂ ಗೋಲ್ಡ್ ಸುರೇಶ್ ಅವರ ನಡುವೆ 2017ರಲ್ಲಿ 14 ಲಕ್ಷ ರೂಪಾಯಿಗೆ ಒಪ್ಪಂದ ನಡೆದಿತ್ತು ಎನ್ನಲಾಗಿದೆ. ಒಪ್ಪಂದ ಆಗಿತ್ತು. ಗೋಲ್ಡ್ ಸುರೇಶ್ 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು ಎನ್ನಲಾಗಿದೆ. ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಸುರೇಶ್ ಅವರು ಕೆಲಸ ಪೂರ್ಣಗೊಳಿಸಿರಲಿಲ್ಲ. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂಪಾಯಿ ವಾಪಸ್ ಪಡೆದಿದ್ದರು. ನಂತರ ಸುರೇಶ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಆರೋಪ ಮಾಡಿದ್ದರು.












Click it and Unblock the Notifications