ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರಿಂದ ದೇವರ ಭಜನೆ, ನೃತ್ಯ: ಪರ ವಿರೋಧ ಚರ್ಚೆ ಆರಂಭ
ಬೆಂಗಳೂರು, ಫೆಬ್ರವರಿ. 05: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಇತ್ತೀಚೆಗೆ ಸಂಗಿತ ಮತ್ತು ನೃತ್ಯ ಕಾರ್ಯಕ್ರಮದಿಂದ ಸುದ್ದಿಯಾಗಿದೆ. ಅಯೋಧ್ಯೆಯಲ್ಲಿ ಪ್ರದರ್ಶನ ನೀಡಲು ತೆರಳುತ್ತಿದ್ದ ಮೈಸೂರು ಮೂಲದ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್‌ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪೂರ್ವಸಿದ್ಧತೆಯಿಲ್ಲದ ಏರ್‌ಪೋರ್ಟ್‌ನಲ್ಲಿಯೇ ಹಾಡು, ನೃತ್ಯ ಪ್ರದರ್ಶನ ನೀಡಿದ್ದು, ಪರ- ವಿರೋಧ ಚರ್ಚೆಗೆ ಕಾರಣವಾಗಿದೆ.
ವಿಮಾನ ನಿಲ್ದಾಣದಲ್ಲಿ ಹಾಡು ಹಾಡಿರುವ 1.50 ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ಭಾನುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದನ್ನು ಜನಪ್ರಿಯ ಹ್ಯಾಂಡಲ್ ಏವಿಯೇಟರ್ ಅನಿಲ್ ಚೋಪ್ರಾ ಪೋಸ್ಟ್ ಮಾಡಿದ್ದಾರೆ.

ವೀಡಿಯೊದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ದೇವರ ಭಜನೆ ಮಾಡುತ್ತಿದ್ದಾರೆ. ಕೆಲವರು ನಿಂತುಕೊಂಡು ಹಾಡು ಹಾಡಿದರೆ, ಮತ್ತೆ ಕೆಲವರು ಕುಳಿತುಕೊಂಡಿದ್ದರು. 'ಗೌರಾಂಗ ಅರ್ಧಾಂಗ ಗಂಗಾ ತರಂಗೇ ಯೋಗಿ ಮಹಾಯೋಗಿ' ಹಾಡು ಮತ್ತು ಮಹಾಭಾರತದ ಸಂಸ್ಕೃತ ಶ್ಲೋಕಾ 'ಧರ್ಮೋ ರಕ್ಷತಿ ರಕ್ಷಿತಾ' ಸೇರಿ ಕೆಲವು ಭಜನೆ ಮಾಡಿದ್ದಾರೆ.
ಇನ್ನು, ಹಾಡಿನ ನಂತರ 'ನಮ್ಮನ್ನೆ ಯುವರಾಣಿ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಅಮರ್ ಅವರ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಇದಕ್ಕೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಹಾಡಿಗೆ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದಾರೆ.
Before boarding to Ayodhya at Terminal 2 Bengaluru.#Sankeertane #ayodhyarammandir #Rlsm pic.twitter.com/e1raKhqav0
— Raghuleela School Of Music (@Rlsmmysuru) February 4, 2024
ಮಹಿಳೆಯರಿಗೆ ಹರಿದು ಬಂತು ಮೆಚ್ಚುಗೆ
ಮಹಿಳೆಯರ ಹಾಡಿನ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಾಜಿ ಶಾಸಕ ಸಿ.ಟಿ.ರವಿ ಕೂಡ ವಿಡಿಯೋ ಹಂಚಿಕೊಂಡಿದ್ದು, "ಸನಾತನ ಧರ್ಮ ಮತ್ತು ಅದರ ವೈಭವದ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿದ ನಮ್ಮ ನಾರಿ ಶಕ್ತಿಗೆ ನಮಸ್ಕರಿಸಿ" ಎಂದು ಬರೆದಿದ್ದಾರೆ. ಕೆಲವರು ವಿಡಿಯೋಗಳ ಕೆಳಗಿನ ಥ್ರೆಡ್‌ನಲ್ಲಿ 'ಜೈ ಶ್ರೀ ರಾಮ್' ಎಂದು ಪೋಸ್ಟ್ ಮಾಡಿದ್ದಾರೆ ಮತ್ತು ಕೆಲವರು 'ರಾಮ ರಾಜ್ಯ' ಬಂದಿದೆ ಎಂದು ಹೇಳಿದ್ದಾರೆ.
ಇನ್ನು, ಇದಕ್ಕೆ ಹಲವು ನೆಗೆಟಿವ್ ಕಾಮೆಂಟ್‌ಗಳು ಕೂಡ ಬಂದಿವೆ. ಕೆಲವರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ, "ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಒಂದು 'ಸೈಲೆಂಟ್' ವಿಮಾನ ನಿಲ್ದಾಣವಾಗಿದೆ. ಅಂದರೆ ಪ್ರಯಾಣಿಕರಿಗೆ ಶಬ್ದ-ಮುಕ್ತ ಮತ್ತು ಶಾಂತಿಯುತ ಪ್ರಯಾಣದ ಅನುಭವ ನೀಡುತ್ತದೆ. ಆದರೆ, ಇದು ಡಿಸ್ಟರ್ಬ್ ಮಾಡಿದೆ" ಎಂದಿದ್ದಾರೆ.
ಮತ್ತೊಬ್ಬರು, " ಇದು ಒಳ್ಳೆಯದು..ಆದ್ದರಿಂದ ಮುಂದಿನ ಬಾರಿ ಇದನ್ನು ಅಲ್ಪಸಂಖ್ಯಾತರು ಮಾಡಿದರೆ ಅಳಬೇಡಿ. ಅವರು ಕೂಡ ತಮ್ಮ ಸಂಸ್ಕೃತಿಯನ್ನು ತೋರಿಸಲಿ" ಎಂದಿದ್ದಾರೆ. ಇನ್ನೊಬ್ಬರು, "ನೀವು ವಿಮಾನ ನಿಲ್ದಾಣದಲ್ಲಿ ಗದ್ದಲ ಸೃಷ್ಟಿಸಬೇಕಾಗಿಲ್ಲ. ಇದು ಹೆಮ್ಮೆಪಡುವಂಥದ್ದಲ್ಲ. ನಿಮ್ಮ ಧರ್ಮದ ಹೊರತಾಗಿ ಹೆಮ್ಮೆಪಡುವ ಅನೇಕ ವಿಷಯಗಳಿವೆ ಭಕ್ತರೆ" ಎಂದು ವ್ಯಂಗ್ಯವಾಡಿದ್ದಾರೆ.











Click it and Unblock the Notifications