Anchor Anushree: ಮದುವೆ ಯಾವಾಗ? ಹುಡುಗ ಯಾರು? ಕೊನೆಗೂ ಸತ್ಯ ಬಾಯ್ಬಿಟ್ಟ ಅನುಶ್ರೀ
ಕನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹಿಂದೆಲ್ಲಾ ಮದುವೆ ಸಂಸಾರದ ಬಗ್ಗೆ ನಿರಾಸಕ್ತಿ ಹೊಂದಿದ್ದ ಅನುಶ್ರೀ ತಮ್ಮ ತಂದೆ-ತಾಯಿಯ ದಾಂಪತ್ಯದ ಉದಾಹರಣೆ ಕೊಟ್ಟು ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ ಎನ್ನುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನುಶ್ರೀ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡುತ್ತಿದ್ದು, ದಾಂಪತ್ಯ ಜೀವನದತ್ತ ಒಲವು ತೋರುತ್ತಿದ್ದಾರೆ.
ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಮದುವೆಯಾಗುತ್ತೇನೆ ಎಂದಿದ್ದ ನಿರೂಪಕಿ ಅನುಶ್ರೀ, ಇದೀಗ ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದ ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದು, ಯಾವಾಗ ಮದುವೆಯಾಗುತ್ತೇನೆ ಎನ್ನುವುದನ್ನು ಸಹ ಬಹಿರಂಗ ಪಡಿಸಿದ್ದಾರೆ.

ಅನುಶ್ರೀ ಮದುವೆ ಬಗ್ಗೆ ಪ್ರಶ್ನೆಯೊಂದಕ್ಕೆ ಮೊದಲು ಡಿಕೆಡಿಯಲ್ಲಿ ಮುಖ್ಯ ತೀರ್ಪುಗಾರರಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಉತ್ತರಿಸಿದ್ದಾರೆ. 'ನಾನು ಎರಡು ವರ್ಷದಿಂದ ಟ್ರೈ ಮಾಡುತ್ತಾ ಇದ್ದೇನೆ. ನಾನು ಕೇಳುತ್ತಾ ಇದ್ದೇನೆ. ಯಾರಾದರೂ ಇದ್ದಾರಾ ಅಂತಾ ಹೇಳಮ್ಮ ಬೇಕಾದರೆ ಅವರ ಜೊತೆನೂ ಮಾತನಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಹೇಳುತ್ತಿಲ್ಲ. ಸರಿಯಾಗಿ ಹೇಳಿದರೆ ನಾವು ಕೂಡ ಫಾಲೋ ಅಪ್ ಮಾಡಬಹುದು. ಇವರ ಜೀವನ ಶೈಲಿಗೆ ಸರಿಯಾದ ಹುಡುಗನನ್ನು ನಾವು ನೋಡಬೇಕು' ಎಂದರು.
ಶಿವಣ್ಣನ ಬಳಿಕ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಸ್ವತಃ ಅನುಶ್ರೀ ಉತ್ತರಿಸಿದ್ದಾರೆ. 'ಮದುವೆ ಬಗ್ಗೆ ಪ್ರಶ್ನೆಗೆ ನನಗೆ ಖುಷಿ ಇದೆ. ಬಹುಶಃ ನನ್ನ ಮದುವೆಯಾದರೆ ಮಳೆ-ಬೆಳೆ ಎಲ್ಲಾ ಚೆನ್ನಾಗಿ ಆಗುತ್ತದೆ ಅಂದುಕೊಳ್ಳುತ್ತೇನೆ. ಯಾಕೆಂದರೆ ಅನುಶ್ರೀ ಮದುವೆ ಯಾವಾಗ ಎನ್ನುವುದು ಎಲ್ಲರ ಚಿಂತೆ. ಖಂಡಿತಾ ಆಗುತ್ತೇನೆ. ಮುಂದಿನ ವರ್ಷ ಆಗಲಿ ಅಂತಾ ನಾನೇ ಆಶಿಸುತ್ತೇನೆ. ಮಹಾನಟಿ ವೇದಿಕೆಯಲ್ಲಿ ಈ ವರ್ಷ ಅಂದಿದ್ದೆ. ಆದರೆ ಖಂಡಿತಾ ಮುಂದಿನ ವರ್ಷ ಆಗಿಯೇ ಆಗುತ್ತೇನೆ. ಪಕ್ಕಾ ಆಗುತ್ತೇನೆ. ಹುಡುಗ ಸಿಕ್ಕಿದರೆ' ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಇನ್ನು ಜೀ ಕನ್ನಡದ ಜೊತೆಗಿನ ನಂಟಿನ ಬಗ್ಗೆ ಮಾತನಾಡಿದ ಅನುಶ್ರೀ, ನಮ್ಮ ಸಂಪೂರ್ಣ ಜೀ ಕುಟುಂಬಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಪ್ರತಿ ಬಾರಿ ಅನುಶ್ರೀ ಕೈಯಲ್ಲಿ ಈ ಕೆಲಸ ಆಗುತ್ತದೆ ಅಂತಾ ನಂಬಿ ಕೆಲಸ ಕೊಡುತ್ತಿದ್ದಾರೆ. ಅವರ ನಂಬಿಕೆಗೆ ನಾನು ಮೋಸ ಮಾಡುತ್ತಿಲ್ಲ ಅಂತಾ ಅಂದುಕೊಂಡಿದ್ದೇನೆ. ಎಲ್ಲಾಕ್ಕಿಂತ ಹೆಚ್ಚಾಗಿ ನನ್ನನ್ನು ಟಿವಿಯಲ್ಲಿ ನೋಡಬೇಕು ಅಂತಾ ಆಸೆ ಪಟ್ಟು ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಬೆಳೆಸುತ್ತಿರುವ ಕನ್ನಡಿಗರಿಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ಅನುಶ್ರೀ ಸಮಸ್ತ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications