ಜೈಲಲ್ಲಿರುವ ದರ್ಶನ್ 'ಡೆವಿಲ್' ಸಿನಿಮಾ ಪ್ರಚಾರಕ್ಕೆ ರಾಜಕಾರಣಿಗಳ ಸಾಥ್...! Video Viral
ಬೆಂಗಳೂರು, ಡಿಸೆಂಬರ್ 03: ಜೈಲಲ್ಲಿರುವ ನಟ ದರ್ಶನ್ ತೂಗುದೀಪ ಅವರು ಹೊರಗೆ ಬರಬೇಕೆಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ನಟನೆಯ 'ಡೆವಿಲ್' (Darshan Devil Movie) ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡದಿಂದ ಪ್ರಚಾರ ಆರಂಭವಾಗಿದೆ. ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಪ್ರಚಾರಕ್ಕೆ ಸಾಥ್ ನೀಡಿದ್ದಾರೆ. ಇದೀಗ ಇದೇ ಸಿನಿಮಾ ಪ್ರಚಾರವನ್ನು ರಾಜಕಾರಣಿಗಳು ಪ್ರಚಾರ ಮಾಡಿದರೆ ಹೇಗಿರುತ್ತದೆ? ಎಂಬ ಪರಿಕಲ್ಪನೆ ಬಹುಶಃ ಯಾರಿಗೂ ಬಂದಿರಲಿಕ್ಕಿಲ್ಲ. ಹೀಗಾಗಿಯೇ ಇಂದು ಹೆಚ್ಚು ಪ್ರಚಲಿತಲ್ಲಿರುವ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಸಹಾಯದಿಂದ ಅದೇ ಕಲ್ಪನೆಯಡಿ ವಿಡಿಯೋವೊಂದನ್ನು ರಚಿಸಲಾಗಿದೆ. ಅದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾಜಕಾರಣಿಗಳು ಜೈಲಿನಲ್ಲಿ ದರ್ಶನ್ ಭೇಟಿ ಆಗಿ, ಅವರ 'ಡೆವಿಲ್' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಡೆವಿಲ್ ದರ್ಶನ್ ಅವರ ಪೋಸ್ಟರ್ ಹಿಡಿದು ಅಭಿಮಾನಿಗಳತ್ತ ಪ್ರದರ್ಶಿಸುವ ದೃಶ್ಯಗಳು ಈ ವೈರಲ್ ವಿಡಿಯೋದಲ್ಲಿವೆ. ಈ ವಿಡಿಯೋವನ್ನು ಅನ್ನು 'ಕರ್ನಾಟಕ ನಮ್ಮದು ಮತ್ತು ಟ್ರೂ ಕನ್ನಡ ಮೀಡಿಯಾ' ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ. ಎಐ ಟೆಕ್ ಬಳಿಕ ವಿಶೇಷ ಪರಿಕಲ್ಪನೆಯಡಿ ಮಾಡಿದ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆಯು ಇಂತಹ ಹಲವು ವಿಡಿಯೋಗಳು ವೈರಲ್ ಆಗಿದ್ದವು.

ತಂತ್ರಜ್ಞಾನ ಬೆಳೆದಂತೆಲ್ಲ ಮನುಷ್ಯ ಅದಕ್ಕೆ ಬೇಗ ಹೊಂದಿಕೊಂಡು ಬಿಡುತ್ತಾನೆ. ಇಂದಿನ ಟೆಕ್ ಯುಗದಲ್ಲಿ ಮನುಷ್ಯನ ಬದುಕಿನಲ್ಲಿ ತಂತ್ರಜ್ಞಾನ, ಅದರಲ್ಲೂ ಎಐ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೆಲವರು ತಮ್ಮದೇ ಆದ ರೀತಿಯಲ್ಲಿ ದೈನಂದಿನ ಸಂಗತಿಗಳನ್ನು ಈ ರೀತಿ ಎಐ ಸಹಾಯದಿಂದ ವಿಡಿಯೋ ಮಾಡಿ ಹರಿಬಿಡುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ. ಇದನ್ನು ನೋಡುವ ಜನರು ಎಂಜಾಯ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ದರ್ಶನ್ ಅವರ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ರಂದು ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು, ಸ್ವಾಗತಿಸಲು ಅಪಾರ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ಸಿನಿಮಾ ಪ್ರಚಾರವನ್ನು 'ಒಂದು ವೇಳೆ ರಾಜ್ಯ ಸರ್ಕಾರವೇ ಬೆಂಬಲದಲ್ಲಿ ಪ್ರಚಾರ ನಡೆದರೆ' ಹೇಗೆ ಎಂಬುದನ್ನು AI ಪರಿಕಲ್ಪನೆಯಡಿ ವಿಡಿಯೋದಲ್ಲಿ ಕಟ್ಟಿಕೊಡಲಾಗಿದೆ.
ವಿಡಿಯೋದಲ್ಲಿ ಕಾಣುವಂತೆ 'ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡುತ್ತಾರೆ. ಅಲ್ಲಿ ಹಣುಗಳನ್ನು ನೀಡಿ ಅವರ ಬಗ್ಗೆ ವಿಚಾರಿಸುತ್ತಾರೆ. ಬಳಿಕ ಡೆವಿಲ್ ಪೋಸ್ಟರ್ ಅನ್ನು ದರ್ಶನ್ ಜೊತೆಗೆ ಸಿಎಂ, ಡಿಸಿಎಂ ಹಿಡಿದುಕೊಂಡು ಪ್ರಚಾರ ನಡೆಸಿದ್ದಾರೆ. ಜೈಲಿನಿಂದಲೇ ಸರ್ಕಾರ ಪ್ರಚಾರವನ್ನು ಬೆಂಬಲಿಸಿದಂತೆ' ವಿಡಿಯೋದಲ್ಲಿ ತೋರಿಸಲಾಗಿದೆ.
ಬಳಿಕ ವಿಧಾನಸೌಧ ಮುಂಭಾಗ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸಿನಿಮಾದ ಭರ್ಜರಿ ಪ್ರಚಾರ ನಡೆಸಲಾಗಿದೆ. ಇದಕ್ಕೆ ಫ್ಯಾನ್ಸ್ ಜೈಕಾರದ ಘೋಷಣೆಗಳು ಹಾಕುವಂತೆ, ಪೋಸ್ಟರ್ ಹಿಡಿದು ರಾರಾಜಿಸುವಂತೆ ಎಐ ಮೂಲಕ ಚಿತ್ರಕರೀಸಲಾಗಿದೆ. ಇದೆಲ್ಲವೇ ನಿಜವಾದರೆ ಹೇಗೆ? ಎಂಬ ಒಂದು ಕಲ್ಪನೆಯನ್ನು ಅಭಿಮಾನಿಗಳಿಗೆ ವಿಡಿಯೋ ಮೂಲಕ ನೀಡಲಾಗಿದೆ.
ಹಲವು AI ವಿಡಿಯೋಗಳು ವೈರಲ್
ಜಗತ್ತು ಆಳುತ್ತಿರುವ ಎಐ ಮೂಲಕ ಕೇವಲ ಮನರಂಜನೆಗಾಗಿ, ಟೆಕ್‌ನಲ್ಲಿನ ತಮ್ಮ ನೈಪುಣ್ಯತೆ ತೋರ್ಪಡಿಕೆಗೆ ತಮ್ಮ ನೆಚ್ಚಿನ ನಟ, ನಟಿಯರು, ರಾಜಕಾರಣಿಗಳು, ಇಷ್ಟದ ದೇವಾಲಯ, ಪ್ರದೇಶಗಳನ್ನು ರಚಿಸಲಾಗುತ್ತಿದೆ. ಇದನ್ನು ಕಂಡ ಅನೇಕ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಂತಹ ವಿಡಿಯೋಗಳ ಸಂಖ್ಯೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಟ ದರ್ಶನ್ ಇರುವ ಜೈಲಿಗೆ ಯಶ್, ಶಿವಣ್ಣ, ಸುದೀಪ್ ಅವರು ಭೇಟಿ ನೀಡಿದಂತೆ, ಅಪ್ಪು ಹೃದಯಾಘಾತ, ಮಳೆಯಲ್ಲಿ ಸೆಲೆಬ್ರೆಟಿಗಳು ಆಟವಾಡಿದಂತೆ, ಹೀಗೆ ಅನೇಕ ಬಗೆಯ ವಿಡಿಯೋ ರಚಿಸಿದ್ದು, ಅವುಗಳ ಜನರ ಮನ ಗೆದ್ದಿವೆ. ಸದರಿ ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಸುರಿಸಿದ್ದಾರೆ.
ವಿಶೇಷ ಸೂಚನೆ: ಎಐ ಬಂದ ಮೇಲೆ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂದು ತಂತ್ರಜ್ಞಾನವನ್ನು ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ಎರಡು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವದೇ ವಿಡಿಯೋ, ವಿಷಯ, ಫೋಟೋ ನೋಡಿ ನಂಬುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿಜವೆಂಬಂತೆ ಸುಳ್ಳನ್ನು ಹಬ್ಬಿಸುವ ಕೆಲಸ ಆನ್‌ಲೈನ್‌ನಲ್ಲಿ ಕೆಲವರು ಮಾಡುತ್ತಿದ್ದಾರೆ.












Click it and Unblock the Notifications