ಎಆರ್ ರೆಹಮಾನ್ ವಿಚ್ಛೇದನದ ಬೆನ್ನಲ್ಲೇ ಗಂಡನಿಂದ ಡಿವೋರ್ಸ್ ಪಡೆದ ಮೋಹಿನಿ
ತಮಿಳು ಚಿತ್ರರಂಗದ ಅಗ್ರ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮ್ಮ 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಎಆರ್ ರೆಹಮಾನ್ ಮತ್ತು ನಾನು ಬೇರೆಯಾಗುತ್ತಿದ್ದೇವೆ ಎಂದು ಪತ್ನಿ ಸಾಯಿರಾ ಬಾನು ಮಂಗಳವಾರ ಘೋಷಣೆ ಮಾಡಿದ್ದರು. ಹೊಂದಾಣಿಕೆ ಕೊರತೆಯಿಂದ ಇಬ್ಬರ ನಡುವೆ ಅಂತರ ಹೆಚ್ಚಾಗಿದ್ದು ಪರಸ್ಪರ ಗೌರವದಿಂದಲೇ ದೂರವಾಗುತ್ತಿದ್ದೇವೆ ಎಂದು ಹೇಳಿದ್ದರು. ರೆಹಮಾನ್ ವಿಚ್ಛೇದನ ಪಡೆದ ಕೆಲವು ಗಂಟೆಗಳ ಬಳಿಕ ಅವರ ತಂಡದಲ್ಲಿ ಬಾಸಿಸ್ಟ್ ಆಗಿ ಕೆಲಸ ಮಾಡುವ ಮೋಹಿನಿ ಡೇ ಕೂಡ ಗಂಡನಿಂದ ಬೇರೆಯಾಗುತ್ತಿರುವುದಾಗಿ ಹೇಳಿದ್ದಾರೆ.
ಎಆರ್ ರೆಹಮಾನ್ ಸಂಗೀತ ತಂಡದದ ಭಾಗವಾಗಿರುವ ಬಾಸಿಸ್ಟ್ ಮೋಹಿನಿ ತಮ್ಮ ಪತಿಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಸಂಗೀತ ಸಂಯೋಜಕ ಮಾರ್ಕ್ ಜೊತೆ ಮೋಹಿನಿ ವಿವಾಹವಾಗಿದ್ದರು, ಇದೀಗ ಭಾರವಾದ ಹೃದಯದಿಂದಲೇ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವಾಡುತ್ತಿರುವುದಾಗಿ ಹೇಳಿದ್ದಾರೆ. ಜಂಟಿ ಇನ್‌ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮಂಗಳವಾರ ಸಂಜೆ ಇನ್‌ಸ್ಟಾಗ್ರಾಂನಲ್ಲಿ ಮೋಹಿನಿ ಡೇ ಮತ್ತು ಮಾರ್ಕ್ ಜೊತೆಯಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಭಾರವಾದ ಹೃದಯದಿಂದ, ನಾನು ಮತ್ತು ಮಾರ್ಕ್ ಬೇರೆಯಾಗುತ್ತಿದ್ದೇವೆ ಎಂದು ಘೋಷಿಸುತ್ತಿದ್ದೇವೆ. ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆಯಾಗಿ, ಪರಸ್ಪರ ತಿಳುವಳಿಕೆಯಿಂದ ಈ ನಿರ್ಧಾರ ಮಾಡಿದ್ದೇವೆ. ನಾವು ಉತ್ತಮ ಸ್ನೇಹಿತರಾಗಿದ್ದೇವೆ, ಇಬ್ಬರು ಜೀವನದಲ್ಲಿ ಬೇರೆ ಬೇರೆ ಆಸಕ್ತಿ ಹೊಂದಿದ್ದೇವೆ, ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗುವುದು ಮತ್ತು ಮುಂದುವರೆಯುವುದು ಉತ್ತಮ ಮಾರ್ಗವಾಗಿದೆ ಎಂದು ನಿರ್ಧಾರ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಒಟ್ಟಿಗೆ ಕೆಲಸ ಮಾಡುತ್ತೇವೆ
ನಾವಿಬ್ಬರೂ ವಿಚ್ಛೇದನ ಪಡೆದರೂ, ಜೊತೆಯಾಗಿ ಕೆಲಸ ಮುಂದುವರೆಸುತ್ತೇವೆ. ಮಾಮೋಗಿ ಮತ್ತು ಮೋಹಿನಿ ಡೇ ಗ್ರೂಪ್ ಸೇರಿದಂತೆ ಹಲವು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಜೊತೆಯಲ್ಲಿ ಕೆಲಸ ಮಾಡಲು ನಮಗೆ ಯಾವಾಗಲೂ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಅಭಿಮಾನಿಗಳಿಗೆ ಮನವಿ
"ಜಗತ್ತಿನಲ್ಲಿರುವ ಎಲ್ಲರಿಂದಲೂ ನಾವು ಪ್ರೀತಿಯನ್ನು ಬಯಸುತ್ತೇವೆ. ನೀವು ಅದನ್ನು ನಮಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿದ್ದೀರಾ, ಅದರ ಬಗ್ಗೆ ನಮಗೆ ಹೆಮ್ಮೆಯಿದೆ. ಈ ಕಷ್ಟದ ಸಮಯದಲ್ಲಿ ಧನಾತ್ಮಕವಾಗಿ ನಾವು ಮಾಡಿದ ನಿರ್ಧಾರವನ್ನು ಗೌರವಿಸಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿ." ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಮೋಹಿನಿ ಡೇ ಅವರಿಗೆ 29 ವರ್ಷ ವಯಸ್ಸಾಗಿದ್ದು ಕೋಲ್ಕತ್ತಾ ಮೂಲದವರಾಗಿದ್ದಾರೆ. ಅವರು ಗಾನ್ ಬಾಂಗ್ಲಾ ವಿಂಡ್ ಆಫ್ ಚೇಂಜ್‌ನ ಭಾಗವಾಗಿದ್ದಾರೆ. ಎಆರ್ ರೆಹಮಾನ್ ಜೊತೆ ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಆಗಸ್ಟ್ 2023 ರಲ್ಲಿ ತಮ್ಮ ಮೊದಲ ಆಲ್ಬಂ ಕೂಡ ಬಿಡುಗಡೆ ಮಾಡಿದ್ದಾರೆ.












Click it and Unblock the Notifications