ಮುನ್ನ ಮಾಡಿದ ಪಾಪ, ಸುಖವನ್ನೇ ಬೇಡಲ್ಲ: ಪವಿತ್ರಾ ಗೌಡ ಹೀಗಂದಿದ್ದೇಕೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಪವಿತ್ರಾ ಗೌಡ ಈಗ ತಮ್ಮ ಬಿಸಿನೆಸ್ ಕಡೆಗೆ ಹೆಚ್ಚು ಗಮನಹರಿಸಿದ್ದಾರೆ. ರೇಣುಕಾಸ್ವಾಮಿ ಮಾಡಿದ್ದರು ಎನ್ನಲಾದ ಮೆಸೇಜ್‌ನಿಂದಲೇ ಪವಿತ್ರಾ ಗೌಡ, ನಟ ದರ್ಶನ್ ತೂಗುದೀಪ ಸೇರಿ ಹಲವರು ಕೊಲೆ ಕೇಸ್‌ನಲ್ಲಿ ಜೈಲುವಾಸ ಅನುಭವಿಸಬೇಕಾಯಿತು. ಇನ್ನು ದರ್ಶನ್ ಅವರಿಗೆ ಆಪ್ತೆಯೂ ಆಗಿದ್ದ ಪವಿತ್ರಾ ಗೌಡ ಜೈಲಿನಿಂದ ಹೊರಬಂದ ಮೇಲೆ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಪವಿತ್ರಾಗೌಡ ಅವರು ಮುನ್ನ ಮಾಡಿದ ಪಾಪ.....ಸುಖವನ್ನೇ ಬೇಡಲ್ಲ...ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ರೆಡ್‌ಕಾರ್ಪೆಟ್ ಸ್ಟುಡಿಯೋ ಮೂಲಕ ಬಿಸಿನೆಸ್‌ನಲ್ಲಿ ಫುಲ್ ಬ್ಯುಸಿಯಾಗಿರುವ ಪವಿತ್ರಾ ಗೌಡ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಅವರು ಟೆಂಪಲ್ ರನ್ ಮಾಡಿದ್ದರು. ರಾಜ್ಯದ ಪ್ರಮುಖ ದೇವಾಲಯಗಳು, ಶಿರಡಿ, ಪ್ರಯಾಗ್‌ರಾಜ್ ಸೇರಿದಂತೆ ಹೊರರಾಜ್ಯದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಸದ್ಯ ಅವರು ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ರಾಯರ ದರ್ಶನ ಪಡೆದು, ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ..ಮುನ್ನ ಮಾಡಿದ ಪಾಡಿದ ಪಾಪ ಯಾರ ತಾತನ ಗಂಟು? ನೀನೇ ಹೇಳು ರಾಘವೇಂದ್ರ, ಎಲ್ಲಿದ್ದರೇನು ನಾ? ಹೇಗಿದ್ದರೇನು ನಾ? ರಾಘವೇಂದ್ರ... ಎಂದು ಹಾಡಿನೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟು ಪವಿತ್ರಾಗೌಡ ಮಂತ್ರಾಲಯದಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಕಳೆದ ವರ್ಷದ ಚಿತ್ರದುರ್ಗದ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಹಲವನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಸಿಟ್ಟಾಗಿ ಬೆಂಗಳೂರಿಗೆ ಕಿಡ್ನ್ಯಾಪ್ ಮಾಡಿಸಿ, ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿರುವ ಆರೋಪ ಇವರ ಮೇಲಿತ್ತು. ಇದೇ ಕೇಸ್‌ನಲ್ಲಿ ಹಲವು ತಿಂಗಳ ಕಾಲ ಪವಿತ್ರಾ ಹಾಗೂ ದರ್ಶನ್ ಜೈಲುವಾಸ ಅನುಭವಿಸಿದರು. ಬಳಿಕ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು.

ಜೈಲಿನಿಂದ ಹೊರಬಂದ ನಂತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುವ ಪವಿತ್ರಾ ಗೌಡ ಕೊಲೆ ಕೇಸ್‌ನಿಂದ ತಮ್ಮನ್ನು ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈಗ ದರ್ಶನ್ ಮತ್ತು ಪವಿತ್ರಾ ಗೌಡಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಪೊಲೀಸರು ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಮೇ 21ರಂದು ಸುಪ್ರೀಂಕೋರ್ಟ್ ಇದರ ವಿಚಾರಣೆ ನಡೆಸಲಿದೆ.
ಇನ್ನು ದರ್ಶನ್ ತೂಗುದೀಪ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಇತ್ತ ಪವಿತ್ರಾಗೌಡ ಅವರು ತಮ್ಮ ರೆಡ್‌ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿ ಬಿಸಿನೆಸ್ ಮುಂದುವರಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲೂ ಇವರಿಗೆ ರಿಲೀಫ್ ಸಿಗಲಿದೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications