ಬಿಜೆಪಿ ಸೇರಲಿರುವ 'ಮೈ ಆಟೋಗ್ರಾಫ್' ನಟಿಗೆ ಕೇಂದ್ರ ಸಚಿವೆ ಸ್ಥಾನ? ಅಭಿನಂದನೆಗಳ ಸುರಿಮಳೆ, ಇಲ್ಲಿದೆ ಮಹತ್ವದ ಮಾಹಿತಿ
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಅವರು ಇಂದು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಾಕಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾದಾಗ ತೆಗೆದ ಫೋಟೋವನ್ನು ಮೀನಾ ಹಂಚಿಕೊಂಡಿದ್ದಾರೆ. ಈಗಾಗಲೇ ನಟಿ ಮೀನಾ ಅವರು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎನ್ನುವ ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಇದಕ್ಕೆ ಪುಷ್ಟಿ ನೀಡುವಂತೆ ಮೀನಾ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೀನಾ ಅವರಿಗೆ ಅಭಿನಂದನೆಗಳ ಸುರಿಮಳೆ ಸುರಿಸುತ್ತಿದ್ದಾರೆ.
ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಳಿಕ ಕನ್ನಡ, ತಮಿಳು, ತೆಲುಗು ಬಹುಭಾಷೆಗಳಲ್ಲಿ ಟಾಪ್ ನಟಿಯಾಗಿ ಮಿಂಚಿದ್ದರು. ನಾಯಕಿಯಾಗಿ ನಟಿಸುತ್ತಾ ಇಂದಿಗೂ ನಿರಂತರವಾಗಿ ನಟಿಸುತ್ತಿರುವ ನಟಿ ಮೀನಾ ತಮ್ಮ ಗಂಡನ ನಿಧನದ ನಂತರ ಕೆಲವು ವರ್ಷಗಳಿಂದ ಚಿತ್ರಗಳಲ್ಲಿ ಹೆಚ್ಚು ನಟಿಸಿಲ್ಲ. ಆದರೆ ಮೀನಾ ಅವರು ಮತ್ತೆ ನಟಿಸಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ.

ನಟಿ ಮೀನಾ ಅವರ ಸಮಕಾಲೀನ ನಟಿಯರು ಹಾಗೂ ಗೆಳತಿಯರೂ ಆದ ನಟಿ ರಾಧಿಕಾ, ಖುಷ್ಬೂ, ಕಲಾ ಮಾಸ್ಟರ್ ಮುಂತಾದವರು ಈಗಾಗಲೇ ಬಿಜೆಪಿ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕೆಲದಿನಗಳಿಂದ ನಟಿ ಮೀನಾ ಅವರು ಕೂಡ ಬಿಜೆಪಿ ಪಕ್ಷ ಸೇರಲಿದ್ದಾರೆ ಎನ್ನುವ ಸುದ್ದಿ ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇದೆ. ಇದೀಗ ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕೆಲವು ಕಾರ್ಯಕ್ರಮಗಳಲ್ಲೂ ನಟಿ ಮೀನಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೀನಾ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲೇನಿದೆ?
ರಾಜಕೀಯ ಪ್ರವೇಶದ ಮಾತುಗಳು ಜೋರಾಗಿರುವ ಹೊತ್ತಲ್ಲೇ ನಟಿ ಮೀನಾ ಅವರು ದೆಹಲಿಗೆ ತೆರಳಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿರುವುದಲ್ಲದೆ, ಅವರೊಂದಿಗೆ ತೆಗೆದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ, ಮಾನ್ಯ ಉಪಾಧ್ಯಕ್ಷರಾದ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿದ್ದು ನಿಜಕ್ಕೂ ಗೌರವ. ನಿಮ್ಮಿಂದ ಬಹಳಷ್ಟು ಕಲಿತಿರುವೆ. ಅದು ನನ್ನ ಭವಿಷ್ಯವನ್ನು ವಿಶ್ವಾಸದಿಂದ ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ನಂಬಿದ್ದೇನೆ. ನಿಮ್ಮ ಸಮಯಕ್ಕೆ ಧನ್ಯವಾದಗಳುʼ ಎಂದು ಮೀನಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಅನೇಕ ಅಭಿಮಾನಿಗಳು ಅಭಿನಂದನೆಗಳು ಮೇಡಂ ಎಂದು ವಿಶ್ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ನಟಿ ರಾಧಿಕಾ, ಖುಷ್ಬೂ ಸುಂದರ್ ಅವರಿಗೆ ಪ್ರಮುಖ ಹುದ್ದೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸಾಲಿನಲ್ಲಿ ನಟಿ ಮೀನಾ ಅವರಿಗೂ ಸಚಿವ ಸ್ಥಾನಮಾನ ಸಿಗುವ ಅವಕಾಶವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಮೀನಾ ಹಾಕಿರುವ ಪೋಸ್ಟ್ ಅದನ್ನು ದೃಢೀಕರಿಸುವಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನಟನೆಯನ್ನ ಬಿಡಬೇಡಿ
ನಟಿ ಪೋಸ್ಟ್‌ನಲ್ಲಿ ನಿಮ್ಮ ಭೇಟಿಯು ನನ್ನ ಭವಿಷ್ಯವನ್ನು ವಿಶ್ವಾಸದಿಂದ ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ಉಲ್ಲೇಖಿಸಿರುವುದರಿಂದ ಇದು ರಾಜಕೀಯ ಪ್ರವೇಶದ ಸುಳಿವು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳು ನೀವು ರಾಜಕಾರಣಕ್ಕೆ ಹೋದರೂ ನಟನೆಯನ್ನ ಬಿಡಬೇಡಿ, ನಾವು ನಿಮ್ಮನ್ನು ಸಿನಿಮಾಗಳಲ್ಲಿ ತುಂಬಾ ಮಿಸ್ ಮಾಡ್ತಿದ್ದೀವಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications