Shivrajkumar Campaign: ಶಿವರಾಜಕುಮಾರ್‌ಗೆ ಮೀನೂಟಾ ಅಂದ್ರ ತುಂಬಾ ಇಷ್ಟ ಅಂತೆ...
ಕಾಂಗ್ರೆಸ್ ಪರ ಸ್ಯಾಂಡಲ್‌ವುಡ್ ನಟ ಶಿವರಾಜಕುಮಾರ್ ಪ್ರಚಾರ ಆರಂಭಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ತಮಗೆ ಇಷ್ಟವಾಗುವ ಮೀನೂಟದ ಬಗ್ಗೆ ಹೇಳಿಕೊಂಡಿದ್ದಾರೆ.
ಪತ್ನಿ ಪರ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಪ್ರಚಾರಕ್ಕೆ ಬರುವುದಾಗಿ ಕಾಂಗ್ರೆಸ್ ಶಿವರಾಜ್ ಕುಮಾರ್ ಅಭಯ ನೀಡಿದ್ದರು. ಅದರಂತೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ ಅವರು, ಕರಾವಳಿ ಭಾಗದ ಮೀನೂಟ ಅಂದರೆ ತಮಗೆ ತುಂಬಾನೇ ಇಷ್ಟ ಎಂದಿದ್ದಾರೆ.

ಅಂಜಲ್, ಕಾಣೆ, ಭೂತಾಯಿ ಮೀನು ಅಂದರೆ ತಮಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕರಾವಳಿ ಜನರ ಬಗ್ಗೆ ಪ್ರೀತಿ-ಅಭಿಮಾನದ ಮಾತುಗಳನ್ನಾಡಿದ್ದಾರೆ. ಅಪ್ಪಾಜಿ ಬಿಟ್ಟರೆ ನಾನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಶೂಟಿಂಗ್ ಮಾಡಿದ್ದೇನೆ. ಈಗ ಎರಡನೇ ಸಲ ಬೈಂದೂರಿಗೆ ಬರುತ್ತಿದ್ದೇವೆ.
ಖಂಡಿತಾ ಒಳ್ಳೆ ಕೆಲಸ ಮಾಡುತ್ತೇವೆ ನಮಗೆ ಒಂದು ಅವಕಾಶ ಕೊಡಿ ಎಂದು ಶಿವರಾಜಕುಮಾರ್ ಕೇಳಿಕೊಂಡರು. 'ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಇದಕ್ಕೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗಿಂತ ಬೇರೆ ಉದಾಹರಣೆ ಬೇಕಾ? ನನ್ನ ಪತ್ನಿ ಗೀತಾ ಶಕ್ತಿಧಾಮ ನಿರ್ವಹಣೆ ಮಾಡುತ್ತಿದ್ದಾರೆ. ಆಕೆಗೆ ಸೇವಾ ಅನುಭವ ಇದೆ. ಚುನಾವಣೆಯಲ್ಲಿ ಜನರ ಆಶೀರ್ವಾದಕ್ಕಾಗಿ ಬಂದಿದ್ದೇವೆ' ಎಂದು ಶಿವರಾಜಕುಮಾರ್ ಹೇಳಿದರು.

ಕೊಲ್ಲೂರಿನ ತಾಯಿ ಮೂಕಾಂಬಿಕಾ ಆಶೀರ್ವಾದ ನಾವು ಬೇಡಿದ್ದೇವೆ. ಬಂಗಾರಪ್ಪ ಆಶೀರ್ವಾದ, ಮಧು ಬಂಗಾರಪ್ಪ ಸಾಥ್ ನೀಡಿದ್ದಾರೆ. ಈಗ ನಾವು ಜನರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಪ್ರೊಡ್ಯೂಸರ್, ಫಿಲಂ ಚೇಂಬರ್ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ ನಾನು ಶೇಕಡ ಎಂಬತ್ತರಷ್ಟು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಇರುತ್ತೇನೆ. ಎಲ್ಲಾ ಊರಿಗೂ ಹೋಗುತ್ತೇನೆ ಎಂದು ಅವರು ಹೇಳಿದರು.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಕಣಕ್ಕಿಳಿಸಿದೆ.












Click it and Unblock the Notifications