ಸುದೀಪ್ ಹೆಸರಲ್ಲಿ ದೋಖಾ: ಸ್ಟಾರ್ ನಿರ್ದೇಶಕ ನಂದ ಕಿಶೋರ್ ಬಗ್ಗೆ ಏನಿದು ಆರೋಪ?
ಸ್ಯಾಂಡಲ್ವುಡ್‌ನ ಸ್ಟಾರ್ ನಿರ್ದೇಶಕ ಹಾಗೂ ಹಿರಿಯ ನಟ ಸುಧೀರ್ ಅವರ ಪುತ್ರ ನಂದ ಕಿಶೋರ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರನ್ನ, ಮುಕುಂದ ಮುರಾರಿ, ವಿಕ್ಟರಿ, ಅಧ್ಯಕ್ಷ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಂದ ಕಿಶೋರ್ ಅವರ ಮೇಲೆ ಹಣ ವಂಚನೆ ಆರೋಪ ಮಾಡಲಾಗಿದೆ. ನಟ ಕಿಚ್ಚ ಸುದೀಪ್ ಅವರ ಹೆಸರು ಹೇಳಿಕೊಂಡು ನಂದ ಕಿಶೋರ್ ವಂಚನೆ ಮಾಡಿದ್ದಾರೆ ಎಂದು ನಟರೊಬ್ಬರು ಶಾಕಿಂಗ್ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಇದು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಯುವನಟ ಶಬರೀಶ್ ಶೆಟ್ಟಿ ಎಂಬುವವರು ನಂದ ಕಿಶೋರ್ ವಿರುದ್ಧ ಈ ಆರೋಪಗಳನ್ನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಶಬರೀಶ್, ನಂದ ಕಿಶೋರ್ ಅವರು ನನಗೆ ಕೆಲ ವರ್ಷಗಳ ಹಿಂದೆ ಜಿಮ್ನಲ್ಲಿ ಪರಿಚಯವಾಗಿದ್ದರು. ಆಗ ನಾನು ನನ್ನ ಚಿನ್ನ ಅಡವಿಟ್ಟು ನಂದ ಕಿಶೋರ್ ಅವರಿಗೆ 22 ಲಕ್ಷ ರೂಪಾಯಿ ಹಣ ನೀಡಿದ್ದೆ. ಬರೋಬ್ಬರಿ 9 ವರ್ಷಗಳಿಂದಲೂ ನಂದ ಕಿಶೋರ್ ಹಣ ವಾಪಸ್ ನೀಡಲಿಲ್ಲ. ಹಣ ವಾಪಸ್ ಕೇಳಿದಾಗ ಸುದೀಪ್ ಅವರ ಹೆಸರು ಹೇಳುತ್ತಿದ್ದರು ಎಂದು ನಟ ಶಬರೀಶ್ ಶೆಟ್ಟಿ ಅಳಲು ತೋಡಿಕೊಂಡಿದ್ದಾರೆ.

ಹಣ ವಾಪಸ್ ಕೇಳಿದರೆ ನನಗೆ ಧಮ್ಕಿ ಹಾಕುತ್ತಾರೆ. ನನಗೂ ಆರ್ಥಿಕ ಸಮಸ್ಯೆ ಇದೆ. ನನ್ನ ಹಣ ವಾಪಸ್ ಕೊಡಿ ಎಂದರೆ ನಟ ಕಿಚ್ಚ ಸುದೀಪ್ ಅವರ ಹೆಸರು ಹೇಳಿ ಯಾಮಾರಿಸುತ್ತಾರೆ. ಅಲ್ಲದೆ ಸಿನಿಮಾಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿ ನನಗೆ ವಂಚನೆ ಮಾಡಿದ್ದಾರೆ. ನನಗೆ ಅವಕಾಶವೂ ಕೊಡಲಿಲ್ಲ, ನನ್ನ ಹಣವನ್ನೂ ಹಿಂತಿರುಗಿಸಲಿಲ್ಲ ಎಂದು ಶಬರೀಶ್ ಆರೋಪ ಮಾಡಿದ್ದಾರೆ.
ಫಿಲ್ಮ್ ಚೇಂಬರ್‌ಗೆ ದೂರು ಕೊಡ್ತೀನಿ
ಸದ್ಯ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ರಿಲೀಸ್ ಮಾಡಲು ನನ್ನ ಹತ್ತಿರ ಹಣ ಕೂಡ ಇಲ್ಲ. ಹೀಗಾಗಿ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ, ನೀನು ಏನು ಮಾಡಿಕೊಳ್ತಿಯೋ ಮಾಡ್ಕೋ ಎಂದು ಹೇಳುತ್ತಾರೆ. ನಾನಿನ್ನೂ ಸಣ್ಣಪುಟ್ಟ ಕಲಾವಿದ, ಇಂತವರೊಂದಿಗೆ ಹೇಗೆ ಬದುಕಬೇಕು ಎಂಬುದೇ ತಿಳಿಯುತ್ತಿಲ್ಲ. ಇದೇ ವಿಚಾರವನ್ನ ನಾನು ಈ ಹಿಂದೆ ಸುದೀಪ್ ಅವರ ಗಮನಕ್ಕೆ ತರಲು ಮುಂದಾದಾಗಲೂ ನನ್ನನ್ನ ನಂದಕಿಶೋರ್ ತಡೆದಿದ್ದರು. ಹಣಕ್ಕಾಗಿ ಕಾದು ವರ್ಷಗಳೇ ಉರುಳಿವೆ. ಹೀಗಾಗಿ ನನ್ನ ಹಣ ಅವರು ವಾಪಸ್ ಕೊಡಿದೇ ಇದ್ದರೆ ಕಾನೂನು ಮೂಲಕ ಹೋರಾಡುತ್ತೇನೆ. ನಂದ ಕಿಶೋರ್ ಅವರ ವಿರುದ್ಧ ಶಿವಣ್ಣ ಹಾಗು ಸುದೀಪ್ ಸರ್‌ಗೆ ದೂರು ಕೊಡ್ತೀನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ (ಫಿಲ್ಮ್ ಚೇಂಬರ್) ದೂರು ಕೊಡುತ್ತೇನೆ ಎಂದು ಶಬರೀಶ್ ಹೇಳಿದ್ದಾರೆ.
ಸಿಸಿಎಲ್‌ನಲ್ಲಿ ಆಟವಾಡುವುದು ನನ್ನ ಕನಸಾಗಿತ್ತು. ಈಗಾಗಲೇ ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್‌ನಲ್ಲಿ ಆಟವಾಡಿದ್ದೇನೆ. ಈಗ ಹಣ ಕೇಳಿದರೆ ನನನ್ನ ಕೆಸಿಸಿಯಿಂದಲೂ ಹೊರಗೆ ಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಮೊದಲಿನಿಂದಲೂ ಕಿಚ್ಚ ಸುದೀಪ್ ಅವರ ಜೊತೆ ಕ್ರಿಕೆಟ್ ಆಡಬೇಕು ಎನ್ನುವ ಆಸೆ ಇದ್ದ ಕಾರಣಕ್ಕೆ ನಂದ ಕಿಶೋರ್ ಮಾತಿಗೆ ಸುಮ್ಮನಾಗುತ್ತಿದ್ದೆ. ಈಗ ಅವರು ಮಾಡಿರುವ ವಂಚನೆಗೆ ನ್ಯಾಯ ಕೇಳುತ್ತಿದ್ದೇನೆ. ಹಣ ಕೊಡದಿದ್ದರೆ ಅವರ ಮೇಲೆ ದೂರು ಕೊಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.












Click it and Unblock the Notifications