ಮುಖ್ಯಮಂತ್ರಿ ಬೊಮ್ಮಾಯಿ ಹೆಸರಿನಲ್ಲಿಯೇ ಲಂಚ ಪೀಕುತ್ತಿರುವ ಹಿರಿಯ ಅಧಿಕಾರಿ?
ಬೆಂಗಳೂರು, ಅ. 12: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ ಹಿರಿಯ ಅಧಿಕಾರಿಯೊಬ್ಬರು ಲಂಚದ ಬೇಡಿಕೆ ಇಟ್ಟಿರುವ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಸಲ್ಲಿಸಲಾಗಿದೆ. ಜೊತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರುವ ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ, ಬಳಸಿಕೊಂಡಿರುವ ಕುರಿತು ದೂರು ಸಲ್ಲಿಕೆಯಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪ್ರಭಾಕರ ಚಿಣಿ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಾಮಗಾರಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರಿಗೆ ಶೇಕಡಾ 4ರಷ್ಟು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಅದರಲ್ಲಿ ಶೇಕಡಾ 2ರಷ್ಟನ್ನು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಕೊಡಬೇಕು ಎಂದು ಸಿಎಂ ಬೊಮ್ಮಾಯಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿ ಬಿಲ್ ಬಿಡುಗಡೆ ಮಾಡಲೂ ಪ್ರಭಾಕರ ಚಿಣಿ, ಶೇಕಡಾ 4ರಷ್ಟು ಹಣವನ್ನು ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾಗಿ ತಿಳಿದು ಬಂದಿದೆ.
ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ ಮತ್ತೊಂದು ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಸಲ್ಲಿಕೆಯಾಗಿದೆ.

ಮುಖ್ಯಮಂತ್ರಿಗಳ ಕಚೇರಿಗೆ ಲಂಚ ತಲುಪಿಸಬೇಕು!
ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ (ಕೆಬಿಜಿಎನ್‌ಎಲ್) ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ (ಎಸ್‌ಸಿಪಿ, ಟಿಎಸ್‌ಪಿ) ಮೀಸಲಿರಿಸಿದ್ದ ಹಣವನ್ನು ನಿಯಮ ಬಾಹಿರವಾಗಿ ಬೇರೆ ಕೆಲಸಕ್ಕೆ ಬಳಸಿಕೊಂಡಿದ್ದಾರೆಂದು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಿಖಿತ ದೂರು ಸಲ್ಲಿಸಿರುವ ಭವಾನಿಮಠ ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ವಿವರಿಸಿರುವ ಅವರು, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಯ ಬಿಲ್ ಬಿಡುಗಡೆ ಮಾಡುವಂತೆ ಕೆಬಿಜಿಎನ್‌ಎಲ್ ಎಂಡಿ ಚಿಣಿ ಅವರಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಉತ್ತರಿಸಿದ ಚಿಣಿ, ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಮೊತ್ತದ ಶೇಕಡಾ 4ರಷ್ಟು ಹಣವನ್ನು ಲಂಚ ಕೊಡುವಂತೆ ತಿಳಿಸುವಂತೆ ಹೇಳಿದ್ದಾರೆ ಎಂದು ಮುಕುಂದರಾವ್ ಭವಾನಿಮಠ ದೂರಿನಲ್ಲಿ ದಾಖಲಿಸಿದ್ದಾರೆ.

ಅಷ್ಟಾಗದಿದ್ದರೆ ಇಷ್ಟಾದರೂ ಕೊಡಿಸಿ ಎಂದ ಚಿಣಿ!
"ಆಗ ನಾನು ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿಗೆ ಲಂಚ ತೆಗೆದುಕೊಳ್ಳಬಾರದು ಎಂದು ಚಿಣಿ ಅವರಿಗೆ ತಿಳಿಸಿದ್ದೆ. ಆದರೆ ಲಂಚದ ಹಣದಲ್ಲಿ ಶೇಕಡಾ 2ರಷ್ಟನ್ನು ಮುಖ್ಯಮಂತ್ರಿಗಳ ಕಚೇರಿಗೆ ಮುಟ್ಟಿಸಬೇಕು. ಹೀಗಾಗಿ ಶೇಕಡಾ 4ರ ಬದಲಿಗೆ ಶೇ. 2ರಷ್ಟು ಹಣವನ್ನಾದರೂ ಕೊಡಲು ತಿಳಿಸಿ ಎಂದು ಹೇಳಿದ್ದರು. ಅದಾದ ಬಳಿಕ ಅನುದಾನವನ್ನು ಎಂಡಿ ಚಿಣಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಮತ್ತೊಂದು ನೋವಿನ ಸಂಗತಿಯಿದೆ" ಎಂದು ದೂರಿನಲ್ಲಿ ಮುಕುಂದರಾವ್ ಭವಾನಿಮಠ ವಿವರಸಿದ್ದಾರೆ. ಆ ಸಂಗತಿ ಮತ್ತಷ್ಟು ಭಯಾನಕವಾಗಿದೆ.

ಶಾಸಕರಿಂದಲೂ ಲಂಚ ವಸೂಲಿ ಮಾಡುವ ಚಿಣಿ!
"ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಕ್ಷೇತ್ರಗಳ ಕೆಲ ಪ್ರಭಾವಿ ಶಾಸಕರು ಕೂಡ ಈ ಅಧಿಕಾರಿ ಪ್ರಭಾಕರ ಚಿಣಿಗೆ ಲಂಚ ಕೊಟ್ಟು ಕಾಮಗಾರಿಗಳನ್ನು ಮಂಜೂರು ಮಾಡಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಬಗ್ಗೆ ತಾವು (ಸಿಎಂ ಬೊಮ್ಮಾಯಿ) ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಶಾಸಕರನ್ನು ಪಕ್ಷಾತೀತವಾಗಿ ಕರೆದು ವಿಚಾರಿಸಿದರೆ ನಾನು ಮಾಡಿರುವುದು ಆರೋಪ ಖಚಿತವಾಗುತ್ತದೆ" ಎಂದು ಮುಕುಂದರಾವ್ ಭವಾನಿಮಠ ಉಲ್ಲೇಖಿಸಿದ್ದಾರೆ.
ಜೊತೆಗೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಉಪಯೋಗವಾಗದ ಕಾಮಗಾರಿಗಳನ್ನು ಮಾಡಿರುವ ಉಪ್ಪಾರ್ ಒಡೆತನದ ADU Infra ಕಂಪನಿಗೆ ಎಸ್‌ಸಿಪಿ, ಟಿಎಸ್‌ಪಿ ಕಾನೂನು ಉಲ್ಲಂಘಿಸಿ ಕೆಬಿಜಿಎನ್‌ಎಲ್ ಎಂಡಿ ಚಿಣಿ ಅವರು 1,141 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ದೂರಿನಲ್ಲಿ ಭವಾನಿಮಠ ದಾಖಲಿಸಿದ್ದಾರೆ.

ತನಿಖೆ ನಡೆಸುವಂತೆ ನಿರ್ದೇಶನ ಕೊಟ್ಟ ಸಿಎಂ ಬೊಮ್ಮಾಯಿ?
ಇದೇ ಅಕ್ಟೋಬರ್ 30ಕ್ಕೆ ಕೆಬಿಜಿಎನ್‌ಎಲ್ ಎಂಡಿ ಚಿಣಿ ನಿವೃತ್ತರಾಗುತ್ತಿದ್ದಾರೆ. ಪ್ರಭಾಕರ್ ಚಿಣಿ ಅವರು ಕೆಬಿಜಿಎನ್‌ಎಲ್ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿಗಮವನ್ನು 'ಮುಂಬೈ ಮಹಾನಗರದ ಚೋರ್ ಬಜಾರ' ಆಗಿ ಪರಿವರ್ತಿಸಿದ್ದಾರೆ. ನಿಗಮದ ಎಲ್ಲಾ ಜನಪರ ಕಾಮಗಾರಿಗಳನ್ನು ಭ್ರಷ್ಟಗೊಳಿಸಿದ್ದಾರೆ. ಹೀಗಾಗಿ ಅವರ ವಿರದ್ಧ ಮಾಡಿರುವ ಆರೋಪಗಳನ್ನು ತನಿಖೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾವನಿಮಂಠ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಂದಿದೆ.












Click it and Unblock the Notifications