ಕೈಕೈ ಸೇರಿ ‘ತಲೆದಂಡ’ ದಡ ಮುಟ್ಟಿತು!
ಕೈಕೈ ಸೇರಿ ‘ತಲೆದಂಡ’ ದಡ ಮುಟ್ಟಿತು!
‘ತಲೆದಂಡ’ ನಾಟಕದ ಯಶಸ್ಸು ಮತ್ತು ಅದರಿಂದಿನ ಕಸರತ್ತು ಮತ್ತು ಶ್ರಮ ಕಡಿಮೆಯೇನಲ್ಲ. ಈ ನಾಟಕದಲ್ಲಿ ನನ್ನದೂ ಒಂದು ಸಣ್ಣ ಪಾತ್ರವಿತ್ತು. ಇದು ನಾನು ಅಭಿನಯಿಸಿದ ಮೊದಲ ನಾಟಕ. ಆ ಕುರಿತಾದ ನನ್ನ ಅನುಭವ ಇಲ್ಲಿದೆ.
![]() | ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್, ಅಮೆರಿಕಾ ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ [email protected] |
ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡರ ‘‘ತಲೆದಂಡ’’ ನಾಟಕವನ್ನು ಈಗಾಗಲೇ ಅನೇಕ ತಂಡಗಳು ಯಶಸ್ವಿಯಾಗಿ ಆಡಿ ಮುಗಿಸಿವೆ. ಆದರೆ ಇಂತಹ ನಾಟಕವನ್ನು ಕರ್ನಾಟಕದಲ್ಲಿದ್ದುಕೊಂಡು ಆಡುವುದಕ್ಕೂ, ಅಮೆರಿಕಾದಲ್ಲಿ ಆಡುವುದಕ್ಕೂ ಬಹಳ ವ್ಯತ್ಯಾಸಗಳಿವೆ.
ಗಿರೀಶ್ ಕಾರ್ನಾಡರು ಬರೆದ ಅಷ್ಟೂ ಪಾತ್ರಗಳನ್ನೂ ರಂಗದ ಮೇಲೆ ತರುವುದೆಂದರೆ ಅದಕ್ಕೆ ಮೂವತ್ತು-ನಲವತ್ತು ಪಾತ್ರಧಾರಿಗಳೇ ಬೇಕಾಗುತ್ತಿದ್ದರೇನೋ. ಆದರೆ ಇಲ್ಲಿ ಅಷ್ಟೊಂದು ಕಲಾವಿದರನ್ನು ಹುಡುಕಿ ತರುವುದಂತೂ ಕಠಿಣವೇ. ಕಲಾವಿದರು ಸಿಕ್ಕರೂ ಅವರಿಗೆ ಕನ್ನಡ ಬರಬೇಕು, ನಾಟಕದ ಅಭ್ಯಾಸಕ್ಕೆ ತಮ್ಮ ಕೆಲಸ-ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಬರುವ ಮನಸ್ಸಿರಬೇಕು. ಅಮೆರಿಕನ್ನಡಿಗರ ವಾರಾಂತ್ಯದ ವರಸೆ ಬಲ್ಲವರಿಗೆ, ಸುಮಾರು ಮೂರು ತಿಂಗಳು ಪ್ರತಿ ವಾರಾಂತ್ಯವನ್ನೂ ನಾಟಕದ ಅಭ್ಯಾಸಕ್ಕೆಂದು ಮೀಸಲಿಡುವುದು ಎಂತಹ ಕಷ್ಟದ ಕೆಲಸವೆಂದು ಸುಲಭವಾಗಿ ಅರ್ಥವಾಗುತ್ತದೆ.
ಈ ಎಲ್ಲ ಸಮಸ್ಯೆಗಳನ್ನು ಅರಿತು ನಿರ್ದೇಶಕ ಪ್ರಕಾಶ್ ಹೇಮಾವತಿಯವರು ನಾಟಕದಲ್ಲಿಯೇ ಕೆಲವು ಬದಲಾವಣೆ ಮಾಡಿಕೊಂಡರು. ನಾಟಕದ ಆಶಯಕ್ಕೆ ಕಿಂಚಿತ್ತೂ ಧಕ್ಕೆ ಉಂಟಾಗದಂತೆ, ಅಲ್ಪಸ್ವಲ್ಪ ಮಾರ್ಪಾಟುಗಳನ್ನು ಮಾಡಿಕೊಂಡು, ಪಾತ್ರಧಾರಿಗಳ ಸಂಖ್ಯೆಯ ಜೊತೆಗೆ ನಾಟಕದ ಸಮಯವನ್ನೂ ಕಡಿತಗೊಳಿಸಿದರು. ಇಷ್ಟೆಲ್ಲಾ ಹೊಂದಾಣಿಕೆಯ ನಂತರವೂ, ಸುಮಾರು ಎರಡು ಕಾಲು ಘಂಟೆಯ ನಾಟಕಕ್ಕೆ ಇಪ್ಪತ್ತಾರು ಕಲಾವಿದರನ್ನು ಹೊಂದಿಸಿಕೊಳ್ಳಬೇಕಾಯಿತು.
ಆಗಲೇ ಶುರುವಾಗಿದ್ದು ಪ್ರಕಾಶ್ ಹೇಮಾವತಿಯವರ ಪ್ರತಿಭಾ ಶೋಧ! ನಾಟಕದಲ್ಲಿ ಅಭಿನಯಿಸಲು ಆಸಕ್ತಿಯಿದ್ದು, ಕನ್ನಡ ಸ್ಪಷ್ಟವಾಗಿ ಮಾತನಾಡಬಲ್ಲೆವೆಂಬ ಆತ್ಮವಿಶ್ವಾಸವಿದ್ದವರಿಗೆಲ್ಲಾ ‘ತಲೆದಂಡ’ ತೆರೆದ ಬಾಗಿಲ ಸ್ವಾಗತವನ್ನೇ ಕೋರಿತು. ಈ ರೀತಿ ನಾಟಕಕ್ಕೆಂದು ಒಟ್ಟಾದವರಲ್ಲಿ ಎರಡು ವಿಧದ ಜನರಿದ್ದೆವು. ಮೊದಲನೆಯ ಗುಂಪು ಈಗಾಗಲೇ ನಾಟಕಗಳಲ್ಲಿ ಅಭಿನಯಿಸಿದ ಅನುಭವಿ ಕಲಾವಿದರದ್ದು. ಎರಡನೆಯದರಲ್ಲಿ ಇದೇ ಮೊದಲ ಬಾರಿಗೆ ಅಭಿನಯದ ಸಾಹಸಕ್ಕೆ ಹೊರಟ ಹೊಚ್ಚ ಹೊಸಬರು. ನಾನು ಈ ಎರಡನೆಯ ಗುಂಪಿಗೆ ಸೇರಿದವಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನಗೆ ಅಂದು ಪ್ರಕಾಶ್ ಹೇಮಾವತಿಯವರು ಕರೆ ಮಾಡಿ - ‘‘ತಲೆದಂಡ ನಾಟಕದಲ್ಲಿ ಒಂದು ಪಾತ್ರ ವಹಿಸುವಿರಾ?’’ ಎಂದು ಕೇಳಿದಾಗ ನಾನಂತೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಏಕೆಂದರೆ ನನಗೆ ನಾಟಕ ಆಡುವುದಿರಲಿ, ಕೊನೆಪಕ್ಷ ನೋಡಿದ ಅನುಭವ ಕೂಡ ಇರಲಿಲ್ಲ.
ನನ್ನ ವಯಸ್ಸಿನವರಿಗೆ ತಿಳಿವಳಿಕೆ ಮೂಡುವ ಹೊತ್ತಿಗಾಗಲೇ ನಾಟಕ ಕಂಪನಿಗಳು ಮರೆಯಾಗತೊಡಗಿದ್ದವು. ಸಿನಿಮಾ ನಮ್ಮ ಬದುಕನ್ನು ಗಾಢವಾಗಿ ಆವರಿಸಿದಂತೆ ನಾಟಕಗಳು ನಮಗೆಂದೂ ಹತ್ತಿರವಾಗಲೇ ಇಲ್ಲ. ಜನರಿಗೆ ನಾಟಕಕ್ಕಿಂತ ಸಿನಿಮಾಗಳೇ ಆಪ್ಯಾಯಮಾನವೆನಿಸಲು ಶುರುವಾಗಿದ್ದ ಕಾಲವದು. ಆಗಾಗ ನಮ್ಮೂರಿಗೆ ಬಂದು ಟೆಂಟು ಹಾಕುತ್ತಿದ್ದ ನಾಟಕ ಕಂಪೆನಿಗಳು ಕಲೆಕ್ಷನ್ ಇಲ್ಲದೆ ವಾಪಸಾಗುತ್ತಿದ್ದುದು ಚೆನ್ನಾಗಿ ನೆನಪಿದೆ. ತಮ್ಮ ತಂಡದೊಂದಿಗೆ ಆಗಮಿಸಿದ್ದ ಮಾಸ್ಟರ್ ಹಿರಣ್ಣಯ್ಯನವರ ಒಂದೆರಡು ನಾಟಕಗಳನ್ನು ನಾನು ನೋಡಿರಬಹುದು ಅಷ್ಟೆ. ಮುಂದೆ ಬೆಂಗಳೂರಿನಲ್ಲಿ ಹಲವಾರು ವರ್ಷಗಳು ನೆಲೆಸಿದ್ದಾಗ, ಅಲ್ಲಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ನಾಟಕಗಳ ಮಾಹಿತಿ ಪತ್ರಿಕೆಗಳಲ್ಲಿ ದೊರಕುತ್ತಿತ್ತು. ಅದೇಕೋ ಏನೋ, ಆಗ ನಮ್ಮಂತಹ ಮಧ್ಯಮವರ್ಗದ ಜನರಿಗೆ ಅಲ್ಲಿಗೆ ಹೋಗಿ ನಾಟಕಗಳನ್ನು ನೋಡಿ, ಆನಂದಿಸುವ ಅಭ್ಯಾಸವಿರಲೇ ಇಲ್ಲ ಎಂದು ಹೇಳಬಹುದು. ಈಗಲೂ ಆ ಪರಿಸ್ಥಿತಿ ಅಷ್ಟೇನು ಬದಲಾಗಿರಲಾರದು.
ಈ ಕಾರಣಗಳಿಂದ ಪ್ರಕಾಶ್ ಅವರ ಆಹ್ವಾನವನ್ನು ತಟ್ಟನೆ ಸ್ವೀಕರಿಸಲು ಹಿಂಜರಿದೆ. ಆದರೆ ಅವರೇ ನೀಡಿದ ಪ್ರೋತ್ಸಾಹ ನನ್ನನ್ನು ಮುಂದಡಿ ಇಡುವಂತೆ ಮಾಡಿತು. ಕೊನೆಗೂ ಭಾರೀ ಪ್ರಮಾಣದ ಪಾತ್ರಧಾರಿಗಳನ್ನು ಹೊತ್ತ ತಲೆದಂಡ ನಾಟಕದ ತಾಲೀಮು ಪ್ರಾರಂಭವಾಗಿಯೇ ಬಿಟ್ಟಿತು. ಮೊದಮೊದಲು ಭಾನುವಾರವೂ ಎಂದಿನಂತೆಯೇ ಹೊತ್ತಿಗೆ ಸರಿಯಾಗಿ ಎದ್ದು, ವಾರಾಂತ್ಯದ ಎಲ್ಲಾ ಆರಾಮಗಳನ್ನು ತ್ಯಾಗಮಾಡಿ ನಾಟಕದ ಅಭ್ಯಾಸಕ್ಕೆ ಹಾಜರಾಗುವುದು ಕೆಲವರಿಗಾದರೂ ಪ್ರಯಾಸವೆನ್ನಿಸದಿರಲಾರದು. ಆದರೆ ಅಭ್ಯಾಸಕ್ಕೆ ಸಮಯದ ಕಟ್ಟುನಿಟ್ಟು ಇರಲಿಲ್ಲ. ಮೊದಲನೆಯ ಅಂಕದವರು ಬರುವುದು ತಡವಾದರೆ, ಆಗಲೇ ಹಾಜರಿದ್ದ ಮುಂದಿನ ಅಂಕದವರು ತಮ್ಮ ಪಾಲಿನ ಅಭ್ಯಾಸ ಮುಗಿಸಿ ಹೊರಡಬಹುದಿತ್ತು. ಯಾರಿಗೂ ಹೊರೆ ಅನಿಸದಂತೆ ಸುಗಮವಾಗಿ ಸಾಗುತ್ತಿದ್ದ ತಾಲೀಮು, ಬರುಬರುತ್ತಾ ನಮ್ಮಲ್ಲಿ ಒಂದು ಉಲ್ಲಾಸದ ಪಿಕ್ನಿಕ್ ಅನುಭವ ಮೂಡಿಸತೊಡಗಿತು. ಇನ್ನು ನಾಟಕದ ಅಭ್ಯಾಸದ ನೆಪದಲ್ಲಿ ಪ್ರತಿವಾರ ಒಬ್ಬೊಬ್ಬರ ಮನೆಯಲ್ಲಿ ನಡೆದ ರಸಗವಳದ ವಿವರಗಳನ್ನೆಲ್ಲ ಬರೆದರೆ, ಅದೇ ಒಂದು ರಸಭರಿತ ಅಧ್ಯಾಯವಾಗಬಹುದು.
‘‘ಶಿಕರ’’ ತಂಡದವರು ‘‘ತಲೆದಂಡ’’ ಬಿಟ್ಟು ಬೇರಾವ ನಾಟಕ ಆರಿಸಿಕೊಂಡಿದ್ದರೂ ಇಷ್ಟೊಂದು ಜನ ಕಲಾವಿದರಿಗೆ ಅವಕಾಶ ದೊರೆಯುತ್ತಿರಲಿಲ್ಲವೇನೊ. ಏಕೆಂದರೆ, ಸಾಧಾರಣವಾಗಿ ನಾಟಕದಲ್ಲಿ ಐದಾರು, ತೀರಾ ಹೆಚ್ಚೆಂದರೆ ಹತ್ತು ಪಾತ್ರಗಳಿರಬಹುದು. ಜೊತೆಗೆ ಈ ನಾಟಕದಿಂದ ನಮಗೆ ದೊರೆತ ಇನ್ನೊಂದು ಅನುಕೂಲತೆಯೆಂದರೆ, ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದ್ದರೂ, ಕೆಲವೊಂದು ಮುಖ್ಯ ಪಾತ್ರಗಳನ್ನು ಬಿಟ್ಟು ಬೇರಾವುದಕ್ಕೂ ಹೆಚ್ಚು ಸಂಭಾಷಣೆಗಳಿಲ್ಲ. ಹಾಗಾಗಿ ಹೊಸಬರಿಗೂ ಕೂಡ ಸಂಭಾಷಣೆಗಳ ನಿರ್ವಹಣೆ ಸಮಸ್ಯೆ ಎನ್ನಿಸಲಿಲ್ಲ. ಅಷ್ಟೊಂದು ಜನ ಒಟ್ಟುಗೂಡಿ ಒಂದು ನಾಟಕ ಅಭ್ಯಾಸ ಮಾಡುವುದೇ ಅಹ್ಲಾದಮಯ ಅನುಭವ. ಅದನ್ನು ನಾಟಕದ ಅಭ್ಯಾಸ ಎನ್ನುವುದಕ್ಕಿಂತ ನಾಟಕದ ಕಾರ್ಯಗಾರ ಎಂದರೆ ಸರಿಹೊಂದೀತು. ಅದೊಂದು ಕಲಿಯುತ್ತಾ ಕಲಿಸುವ ಕಲೆಯ ಸಹಯೋಗ.
ಬರೀ ಅನುಕೂಲತೆಗಳನ್ನೇ ಹೇಳಿದಿರಿ. ಅನಾನುಕೂಲತೆಗಳು ಇರಲೇ ಇಲ್ಲವೇ? ಎಂದು ಕೇಳುತ್ತೀರೇನೋ. ಸಮಸ್ಯೆಗಳು ನಮಗಂತೂ ಇರಲಿಲ್ಲ. ನಿರ್ದೇಶಕರಿಗೆ ಇದ್ದರೂ ಇದ್ದಿರಬಹುದು. ಇಷ್ಟೊಂದು ಜನ ಒಂದೆಡೆ ಸೇರಿದ ಮೇಲೆ ಮಾತುಕತೆ, ಹರಟೆಯೂ ಇರಲೇಬೇಕು ತಾನೇ? ಅಲ್ಲಿಗೆ ಬಂದ ಉದ್ದೇಶವನ್ನೇ ಮರೆತು ಬೇರಾವುದೋ ವಿಷಯದ ಚರ್ಚೆಗಳು ಶುರುವಾಗುತ್ತಿದ್ದ ಪ್ರಸಂಗಗಳಿದ್ದವು. ತಲೆದಂಡ ನಾಟಕದಲ್ಲಿ ಗಂಗಾಂಬಿಕೆ ಬಸವಣ್ಣನವರನ್ನು ಕುರಿತು - ‘‘ನಾವಿಲ್ಲಿ ಬರೀ ಸಂತೆ ಮಾಡೋದಕ್ಕೆ ಬಂದ ಹಾಗಾಯಿತು’’ - ಎಂದು ಹೇಳುವ ಮಾತೊಂದಿದೆ. ಅದೇ ರೀತಿ, ಅಲ್ಲಿಗೆ ಬಂದ ಉದ್ದೇಶವನ್ನೇ ಮರೆತು ಬೇರಾವುದೋ ವಿಷಯದ ಚರ್ಚೆಯಲ್ಲಿ ತೊಡಗುತ್ತಿದ್ದ ನಟವರ್ಗವನ್ನು, ನಿರ್ದೇಶಕರು ಆಗಾಗ ಬ್ರೇಕ್ ಹಾಕಿ ಮತ್ತೆ ನಾಟಕದ ಹಳಿ ಮೇಲೆ ತರಬೇಕಿತ್ತು. ಗಂಭೀರ ನಾಟಕದ ರಿಹರ್ಸಲ್, ನಮ್ಮೆಲ್ಲರ ಹುಡುಗಾಟದ ಮನಸ್ಥಿತಿಯಿಂದಾಗಿ ಕೆಲವೊಮ್ಮೆ ‘‘ಕಾಮಿಡಿ ಟೈಮ್’’ ಆಗಿದ್ದೂ ಇದೆ. ಸೌಮ್ಯ ಸ್ವಭಾವದ, ಮೆಲು ಮಾತಿನ ಪ್ರಕಾಶ್ ಹೇಮಾವತಿಯವರು ನಾಟಕದ ನಿರ್ದೇಶಕರಾಗಿದ್ದರಿಂದ ನಾವು ಬಚಾವ್!
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ‘‘ತಲೆದಂಡ’’ ನಾಟಕ, ಕ್ರಾಂತಿಯೋಗಿ ಬಸವಣ್ಣನವರ ಕಾಲದಲ್ಲಿ ನಡೆಯಿತೆನ್ನಲಾದ ರಕ್ತಸಿಕ್ತ ಅಧ್ಯಾಯವೊಂದನ್ನು ಆಧಾರವಾಗಿಟ್ಟು ರಚಿಸಲಾಗಿರುವ ನಾಟಕ. ಹನ್ನೆರಡನೆಯ ಶತಮಾನದ ಸಾಮಾಜಿಕ ಜನಜೀವನವನ್ನು ಮನದಲ್ಲಿಟ್ಟುಕೊಂಡು ಅಂದಿನ ಪರಿಸರಕ್ಕೆ ಒಪ್ಪುವಂತೆ ರಂಗಸಜ್ಜಿಕೆ ನಿರ್ಮಿಸುವುದು ಯಾವುದೇ ನಿರ್ದೇಶಕನಿಗಾದರೂ ಸವಾಲಿನ ಕೆಲಸವೇ. ಅದು ತಾನೇ ಕಾಣದ್ದನ್ನು ಪ್ರೇಕ್ಷಕನ ಕಣ್ಮುಂದೆ ಕಡೆದಿಡುವ ಪ್ರಯತ್ನ. ನಾಟಕದ ಯಶಸ್ಸಿನಲ್ಲಿ ರಂಗ ನಿರ್ವಹಣೆಯೂ ಪ್ರಮುಖ ಪಾತ್ರವಹಿಸುತ್ತದೆ. ತಲೆದಂಡ ನಾಟಕಕ್ಕೆ ಬೇಕಾದ ಹಿನ್ನಲೆ ಪರದೆಗಳು, ಮುಖ್ಯಪಾತ್ರಗಳ ವೇಷಭೂಷಣಗಳನ್ನು, ಭಾರತದಲ್ಲಿ ತಯಾರು ಮಾಡಿಸಿ ತರಿಸಿಕೊಳ್ಳಲಾಗಿತ್ತು. ಇವುಗಳನ್ನೆಲ್ಲ, ಅಲ್ಲಿಂದ ಇಲ್ಲಿಯವರೆಗೆ ತಲುಪಿಸುವಲ್ಲಿ ಸಹಾಯಕ್ಕೆ ಒದಗಿಬಂದ ಸ್ನೇಹಹಸ್ತಗಳಿಗೆಲ್ಲ ನನ್ನ ವಂದನೆಗಳು. ಇತರ ಪಾತ್ರಗಳಿಗೂ ಹೊಂದಿಸಿಕೊಳ್ಳಬೇಕಾದ ವಸ್ತ್ರಾಭರಣಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿ ಕೊಡಲಾಗಿತ್ತು.
ನಾಟಕ ಹೇಗಾದೀತೋ ಎಂಬ ಅಳುಕಿನಿಂದಲೇ ವೇದಿಕೆಯೇರಿದ ‘‘ತಲೆದಂಡ’’ ತಂಡವನ್ನು ಶಿಕಾಗೋ ಸಹೃದಯರು ತುಂಬು ಹೃದಯದಿಂದ ಹರಸಿದರು. ನಮ್ಮೆಲ್ಲಾ ಲೋಪದೋಷಗಳನ್ನು ಮನ್ನಿಸಿ ಮೆಚ್ಚಿಗೆಯ ಮಳೆಯನ್ನೇ ನಮ್ಮ ಮೇಲೆ ಕರೆದರು. ಸಮಾಜ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲೆಂದು ಆಡಿದ ಈ ನಾಟಕಕ್ಕೆ ಹೃತ್ಪೂರ್ವಕವಾಗಿ ಸ್ಪಂದಿಸಿದರು. ಕೇವಲ ಕನ್ನಡಿಗರು ಮಾತ್ರವಲ್ಲದೆ, ಇತರ ಭಾಷಿಕರೂ ಉದಾರವಾಗಿ ಧನ ಸಹಾಯ ನೀಡಿದ್ದರಿಂದ ಗಣನೀಯ ಪ್ರಮಾಣದ ಮೊತ್ತ ಸಂಗ್ರಹವಾಯಿತು. ಉದ್ದೇಶ ಒಳ್ಳೆಯದಾಗಿದ್ದರೆ, ಅಂತಹ ಪ್ರಯತ್ನಕ್ಕೆ ಪ್ರತಿಫಲವಿದ್ದೇ ಇದೆ ಎಂಬ ಮಾತಿಗೆ ‘‘ತಲೆದಂಡ’’ ನಾಟಕ ಮತ್ತೊಮ್ಮೆ ಭರ್ಜರಿ ಸಾಕ್ಷಿ ನುಡಿಯಿತು!
ಪೂರಕ ಲೇಖನಗಳು -
‘ತಲೆದಂಡ ’ ನಾಟಕಕ್ಕೆ ಬಂದವರು, ಅಶಕ್ತರ ನಿಧಿಗೆ ತಲೆಗಿಷ್ಟು ಕೊಟ್ಟರು!
ಶಿಕಾಗೋದಲ್ಲಿ ಕಾರ್ನಾಡರ ‘ತಲೆದಂಡ’ ಮತ್ತು ಸಮಾಜಸೇವೆ













Click it and Unblock the Notifications