ಉಡುಗೊರೆ ಏನ್ ಕೊಡೋದು, ಅದೇ ಒಂದು ದೊಡ್ಡ ತಲೆಬಿಸಿ

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಮದುವೆ ಸೀಸನ್ ಬಂತು ಅಂದ್ರೆ ಸಾಕು ಎಲ್ಲರ ಮನದಲ್ಲಿ ಎದ್ದು ನಿಂತು ನರ್ತಿಸೋ ಪ್ರಶ್ನೆ 'ಏನು ಉಡುಗೊರೆ ಕೊಡೋದು?' ಮುಂಜಿ, ಗೃಹಪ್ರವೇಶ ಇತ್ಯಾದಿ ಯಾವುದೇ ಆದರೂ ಇದೇ ಪ್ರಶ್ನೆ ಉದ್ಭವ ಆಗುತ್ತದೆ, ಆದರೆ ಮದುವೆ ವಿಷಯ ಬೇರೆ.

ಮುಂಜಿ ಹುಡುಗ ಅಂದ್ರೆ ಸಾಮಾನ್ಯವಾಗಿ ಚಿಕ್ಕವನಿರುತ್ತಾನೆ, ಹಾಗಾಗಿ ಥಳಗುಟ್ಟೋ ಪೆನ್ ಕೊಟ್ಟು ಕೈ ತೊಳೆದುಕೊಳ್ಳೋ ಮಂದಿ ಬಹಳ. ನನ್ನದೇ ಮುಂಜಿಗೆ ಒಂದೈದು ಹೀರೋ ಪೆನ್ ಬಂದಿದ್ದವು! ಈಗ ಹೇಗೋ ಗೊತ್ತಿಲ್ಲ. ಎಲ್ಲರೂ ಮೊಬೈಲ್ ಕೊಡ್ತಾರೇನೋ?

ಸಿದ್ದರಾಮಯ್ಯನವರಿಗೆ ಅಭಿಮಾನಿಯಿಂದ ಕುರಿ, ಕಂಬಳಿ ಗಿಫ್ಟ್

'ನಿಮ್ಮ ಮಗನ ಮುಂಜಿ ಆಯ್ತಲ್ಲಾ ಏನು ಕೊಟ್ಟರು'? ಇದು ಅದ್ಭುತವಾದ ಪ್ರಶ್ನೆ! ಈ ಮುಂಜಿ ಉಡುಗೊರೆ ಪ್ರಶ್ನೆ ಬಂದಾಗ ವಟು ದೇಸಿಯೋ ಪರದೇಶಿಯೋ ಎಂಬ ಪ್ರಶ್ನೆ ಬರುತ್ತೆ. ನನ್ನ ಮಗ ಪರದೇಶಿ ಅಂತ ತಲೆಯ ಮೇಲೆ ಕೋಡಿಲ್ಲ. ಆದರೆ ಪ್ರಶ್ನೆ ಯಾಕೆ ಬರುತ್ತೆ ಅಂದ್ರೆ, "ಅಯ್ಯೋ ಪಾಪ, ದೊಡ್ಡ ಐಟಂ ಕೊಟ್ಟರೆ ಅದೇ ದೊಡ್ಡ ಲಗ್ಗೇಜ್ ಆಗೋಲ್ವೇ' ಅನ್ನೋದು! ಹೋಗ್ಲಿ ಬಿಡಿ!

Gifting in a function is biggest headache

ಇನ್ನು ಗೃಹಪ್ರವೇಶ ಎಂದಲ್ಲಿ ಮನೆಗೆ ಬೇಕಾದ ಸಾಮಾನು ಸರಂಜಾಮು ಕೊಟ್ಟರೆ ಅನುಕೂಲ ಎಂದೇ ಉಡುಗೊರೆ ನೀಡುವವರೆಲ್ಲ ಸ್ಟೀಲ್ ಪಾತ್ರೆಗಳನ್ನೇ ಕೊಡುತ್ತಾರೆ. ಹೊಸ ಮನೆ ಡೈನಿಂಗ್ ಟೇಬಲ್ ಇಟ್ಟುಕೊಂಡಿರುತ್ತಾರೆ ಎಂದು ಪಿಂಗಾಣಿ ಪಾತ್ರೆಯನ್ನೋ ಅಥವಾ ಪ್ಲಾಸ್ಟಿಕ್ ತಟ್ಟೆ/ಲೋಟ ಅಂತೆಲ್ಲಾ ಕೊಡುವವರು ಕಡಿಮೆ ಏನಿಲ್ಲ.

ಇರಲಿ ಬಿಡಿ, ವಿಶ್ವಾಸ ಮುಖ್ಯ. ಕೊಟ್ಟಿದ್ದನ್ನೆಲ್ಲಾ ಹೋಗ್ತಾ ಹೊತ್ಕೊಂಡ್ ಹೋಗ್ತೀವೇನು? ಈಗ ಒಂದಿಷ್ಟು ಅನುಭವಗಳು . . .

ನಾನು ಮತ್ತು ಅಮ್ಮ ಒಂದು ಮುಂಜಿ ಮನೆಗೆ ಹೋಗಿದ್ದೆವು. ಹೊರಡೋ ಮುನ್ನ ಒಂದಷ್ಟು ಹಣ ಕೊಟ್ಟು ಜೋಪಾನ ಎಂದರು. ಮನೆಯಲ್ಲಿ ಕವರ್ ಇರಲಿಲ್ಲ, ಹಾಗಾಗಿ ಹಾದಿಯಲ್ಲಿ ಶೆಟ್ಟರಂಗಡಿಯಲ್ಲಿ ಕವರ್ ಕೊಂಡ ಮೇಲೆ ನೆನಪಾಯ್ತು, ಬರೆಯೋದಕ್ಕೆ ಪೆನ್ನು ಇರಲಿಲ್ಲ. ಅಂಗಡಿ ಶೆಟ್ಟರನ್ನೇ ಕೇಳಿದಾಗ ಸಿಡುಕು ಮೋರೆ ಮಾಡಿಕೊಂಡು ಮುರುಕಲು ಪೆನ್ಸಿಲ್ ನೀಡೋದೇ? ಏನೀಗ ಅಂತ ಲಕ್ಷಣವಾಗಿ ನಮ್ಮ ಹೆಸರು ಬರೆದ ಮೇಲೆ 'ಜೇಬಿನಲ್ಲಿ ಇಟ್ಕೋ, ಹುಡುಗನ ಕೈಲಿ ಕವರ್ ಕೊಡೋದು ಮರೀಬೇಡ' ಅಂತ ಅಮ್ಮ ಉವಾಚ.

ಮಾತೃವಾಕ್ಯ ಪರಿಪಾಲನೆ ಮಾಡಿದೆ. ಊಟ ಮುಗಿಸಿ ಮನೆಗೆ ಬಂದ ಮೇಲೆ ಜೋಪಾನವಾಗಿ ಇಟ್ಟುಕೊಂಡಿದ್ದ ಹಣವನ್ನು ಅಮ್ಮನ ಕೈಲಿಟ್ಟೆ. "ಯಾವ ಘಳಿಗೆಯಲ್ಲಿ ಹೆತ್ತೆ ನಿನ್ನ" ಅನ್ನೋ ರೀತಿಯಲ್ಲಿ ನೋಡಿದ್ದು ನಿಜ! ಮುಂಜಿ ಹುಡುಗನಿಗೆ ಖಾಲಿ ಕವರ್ ಕೊಟ್ಟಿದ್ದೆ. ಅಮ್ಮ ಹೇಳಿದ್ದು ಎರಡು ವಿಷಯ "ಹಣ ಜೋಪಾನ, ಹುಡುಗನಿಗೆ ಕವರ್ ಕೊಡು" ಅಂತ. ನಾನು ಹೇಳಿದ ಮಾತು ಪಾಲಿಸಿದ್ದರೂ ಬೈಸ್ಕೊಂಡಿದ್ದೆ.

ಅಪ್ಪನಿಗೆ ಪ್ರೀತಿಯ ಉಡುಗೊರೆ ಕೊಟ್ಟ ಹಾರ್ದಿಕ್ ಪಾಂಡ್ಯ

ಕಾಲೇಜಿನಲ್ಲಿ ಇದ್ದಾಗ ನಾವೊಂದಿಷ್ಟು ಜನ ಸ್ನೇಹಿತರು ಭಾಳಾ ಕ್ಲೋಸು! ನಮ್ಮಲ್ಲಿ ಯಾರದೇ ಮದುವೆಯಾದರೂ ಬೆಳ್ಳಿ ಸಾಮಾನು ಉಡುಗೊರೆ ಕೊಡಬೇಕು ಎಂಬುದು ಕರಾರು! ಮೊದಲು ಹಳ್ಳಕ್ಕೆ ಬಿದ್ದ ಕುರಿಗೆ ಬೆಳ್ಳಿ ದೀಪದ ಕಂಬಗಳೆರಡು. ಮುಂದ? ಮುಂದಿನ ಕುರಿಗಳಿಗೆ ಒಂದು ದೀಪದ ಕಂಬ, ಪುಟ್ಟ ದೀಪದ ಬಟ್ಟಲು, ಚಮಚ, ಹಣತೆ, ಒಳಲಿ ಹೀಗೆ! ಎಲ್ಲವೂ ಬೆಳ್ಳಿಯದೇ! ಯಾಕೆ ಹೀಗೆ ಅಂದ್ರೆ ಒಬ್ಬೊಬ್ಬರೇ ಮದುವೆಯಾಗುತ್ತಾ ಹೋದಂತೆ, ಹಣದ ಮುಗ್ಗಟ್ಟು ಅಂತ ಡ್ರಾಪ್ ಆಗ್ತಿದ್ರು. ಈಗ ನಿಮ್ಮ ಅನಿಸಿಕೆ ಹೇಳಿ . . . ಕೊನೆಯಲ್ಲಿ ಮದುವೆಯಾದವನಿಗೆ ಏನು ಕೊಟ್ಟೆವು ಅಂತ. ಹಿತ್ತಾಳೆ ತಂಬಿಗೆ ಅಂದ್ರಾ? ಇಲ್ರೀ, ಏನೇನೋ ಕಾರಣಕ್ಕೆ ಅವನ ಮದುವೆಗೆ ನಾವ್ಯಾರೂ ಹೋಗಲೇ ಇಲ್ಲ!

Gifting in a function is biggest headache

ನನ್ನ ಒಬ್ಬ ಸ್ನೇಹಿತ ಸಿಕ್ಕಾಪಟ್ಟೆ ತರಲೆ! ಅವನ ಸ್ನೇಹಿತನ ಮದುವೆಗೆ ಹೋದವ ಉಡುಗೊರೆ ನೀಡುವಾಗ "ಕಳೆದ ಬಾರಿ ಒಳ್ಳೇ ಪ್ರೆಸೆಂಟ್ ಕೊಟ್ಟಿದ್ದೀನಿ. ಈಗ ಸ್ವಲ್ಪ ಚಿಕ್ಕ ಪ್ರೆಸೆಂಟ್. ಅಡ್ಜಸ್ಟ್ ಮಾಡ್ಕೋ" ಅಂದ! ಅವನ ಮುಖ ನೋಡಬೇಕಿತ್ತು. ಅದು ಬಿಡಿ, ಆ ಹುಡುಗಿ ಮುಖ ನೋಡಬೇಕಿತ್ತು. ಆಮೇಲೆ ನಿಧಾನಕ್ಕೆ "ಹೋದ ಸಾರಿ ಅಂದ್ರೆ ಹೋದ ವರ್ಷ ಮನೆ ಗೃಹಪ್ರವೇಶಕ್ಕೆ ದೊಡ್ಡ ಪ್ರೆಸೆಂಟ್ ಕೊಟ್ಟಿದ್ದೆ, ಅದಕ್ಕೇ ಈಗ ಚಿಕ್ಕ ಪ್ರೆಸೆಂಟ್ ಅಂತ ನಾನು ಹೇಳಿದ್ದು" ಅಂತ ಹೇಳಿ ಸೈಲೆಂಟಾಗಿ ಊಟಕ್ಕೆ ಹೋದ ಪುಣ್ಯಾತ್ಮ!

ಕೊಲೀಗ್ ಮದುವೆಗಳಿಗೆ ಯಾರು ತಾನೇ ಹೋಗಿಲ್ಲ?

ಹೆಣ್ಣು ಕೊಲೀಗ್ ಮದುವೆಗೆ ಹೋಗಿದ್ದೆ. ಭಾನುವಾರದ ಮದುವೆ ಎಂದರೆ ಕೇಳಬೇಕೇ? ಸಿಕ್ಕಾಪಟ್ಟೆ ಜನ. ಕೈಲೊಂದು ಉಡುಗೊರೆ ಹಿಡ್ಕೊಂಡು ಮದುವೆಯಾದ ಗಂಡು-ಹೆಣ್ಣನ್ನು ಭೇಟಿ ಮಾಡಿ ವಿಶ್ ಮಾಡಲು ಸಾಲಿನಲ್ಲಿ ನಿಂತೆ. ಸ್ಟೇಜ್ ನಾಲ್ಕು ಹೆಜ್ಜೆ ದೂರದಲ್ಲಿ ಇದೆ ಎಂದಾಗ ಅಲ್ಲೊಬ್ಬಾತ ನಿಂತಿದ್ದ. 'ಉಡುಗೊರೆ ಆ ಡಬ್ಬದಲ್ಲಿ ಹಾಕಿ, ನೀವು ಮೇಲೆ ಹೋಗಿ' ಎಂದು ಗಡುಸು ದನಿಯಲ್ಲೇ ನುಡಿದಿದ್ದ ಆತ. ಒಂದು ವೇಳೆ ಉಡುಗೊರೆ ತರದೇ ಹೋಗಿದ್ದರೇ?

ಉಡುಗೊರೆ ಅಂದ ಮೇಲೆ ಒಂದು ಚಂದಮಾಮ ಕಥೆಯೂ ಆಗಲಿ ಅಲ್ಲವೇ?

ಒಬ್ಬಾನೊಬ್ಬ ಮಹಾಜಿಪುಣ ಇದ್ದ. ಈತನನ್ನು ಯಾರಾದರೂ ಮದುವೆ, ಮುಂಜಿ ಎಂದು ಕರೆದಾಗ ಎಲ್ಲಿ ಉಡುಗೊರೆ ಕೊಡಬೇಕೋ ಎಂದು ಹೆಂಡತಿ ಮತ್ತು ಮಕ್ಕಳನ್ನು ಮಾತ್ರ ಕಳಿಸುತ್ತಿದ್ದ. ಯಾರಾದರೂ ಈತ ಎಲ್ಲಿ ಎಂದು ಕೇಳಿದರೆ "ಉಡುಗೊರೆ ತರಲು ಅಂಗಡಿಗೆ ಹೋಗಿದ್ದಾರೆ" ಎಂದು ಹೇಳುತ್ತಿದ್ದಳು. ಸಮಾರಂಭದಲ್ಲಿ ಪಾಲ್ಗೊಂಡು, ಊಟವನ್ನೂ ಮಾಡಿ ಕೊನೆಗೆ ಇವನಿಗೆ ಊಟ ಕಟ್ಟಿಸಿಕೊಂಡು ಬರುತ್ತಿದ್ದಳು. ಎಷ್ಟು ದಿನ ನಡೆದೀತು? ಎಲ್ಲರಿಗೂ ಇವನ ಆಟ ಗೊತ್ತಾಗಿ ಉಪೇಕ್ಷೆ ಮಾಡಲು ಆರಂಭಿಸಿದರು. ಇವನ ಸ್ನೇಹಿತನ ಮಗಳಿಗೆ ಮದುವೆ ಗೊತ್ತಾಗಿ, ಆ ಸ್ನೇಹಿತ ಇವನಿಗೆ ನೇರವಾಗೇ ಹೇಳಿದ "ನೀನು ಉಡುಗೊರೆ ತರ್ತೀನಿ ಅಂತೆಲ್ಲ ಕಥೆ ಹೊಡೆದು ತಪ್ಪಿಸಿಕೊಳ್ಳಬೇಡಾ. ಮೂರು ದಿನ ಮುಂಚೇನೇ ಬಂದು ಕೆಲಸ ಮಾಡು. ಜೊತೆಗೆ ಉಡುಗೊರೆ ಮರೆತೀಯಾ, ಹುಷಾರು!" ಅಂತ.

ಮಾಯಾನಗರಿ 'ನ್ಯೂಯಾರ್ಕ್'ನಲ್ಲೊಂದು ವಾರಾಂತ್ಯ

ಮದುವೆಯ ದಿನ ಒಂದು ದೊಡ್ಡ ಡಬ್ಬ ತಂದು, ಅದರಲ್ಲಿ ಕಾಗದ ತುಂಬಿ, ಮೇಲೆ ಚೆಂದದ ಕಾಗದದಿಂದ ಅಲಂಕಾರ ಮಾಡಿ ಮದುವೆ ಹೆಣ್ಣಿಗೆ ಕೊಟ್ಟೀಬಿಟ್ಟ. ಇಷ್ಟು ಜನರ ಮಧ್ಯೆ ಯಾರು ಏನು ಕೊಟ್ಟಿದ್ದಾರೆ ಅಂತ ಹೇಗೆ ಗೊತ್ತಾಗುತ್ತೆ ಎಂಬ ಭಂಡ ಧೈರ್ಯದಿಂದ ನೆಮ್ಮದಿಯಾಗಿ ಊಟಕ್ಕೆ ಕೂತ. ಈತನ ಸ್ನೇಹಿತ ಇವನು ಕೊಟ್ಟ ಉಡುಗೊರೆಯ ಡಬ್ಬದ ಸಮೇತ ಬಂದು "ನೀನು ಇಂಥಾ ಉಡುಗೊರೆ ಕೊಡ್ತೀಯಾ ಅಂತ ಗೊತ್ತಿರಲಿಲ್ಲಾ ಕಣಯ್ಯಾ" ಅನ್ನೋದೇ? ಇವನ ಜಂಘಾಬಲವೇ ಉಡುಗಿ ಹೋಯ್ತು. ಎಲ್ಲರ ಮುಂದೆ ಮರ್ಯಾದೆ ಹೋಗೋದು ಖಂಡಿತ ಎಂದು ತಲೆ ಬಗ್ಗಿಸಿ ಕೂತುಬಿಟ್ಟ. ಎಲ್ಲರ ಕುತೂಹಲ ಮತ್ತು ಬಲವಂತಕ್ಕೆ ಆ ಸ್ನೇಹಿತ, ಕಾಗದ ತುಂಬಿದ ಡಬ್ಬದಿಂದ ವಜ್ರದ ಉಂಗುರ ತೆಗೆದು ಎಲ್ಲರಿಗೂ ತೋರಿಸಿದ. ಜಿಪುಣಾತ್ಮ ಕಾಗದ ತುಂಬುವ ಭರದಲ್ಲಿ ತನ್ನ ಉಂಗುರ ಕಳಚಿ ಡಬ್ಬದಲ್ಲಿ ಬಿದ್ದುದನ್ನು ಗಮನಿಸಿರಲಿಲ್ಲ.

Gifting in a function is biggest headache

ಈಗ ಪುನಃ ಯಾವ ಸಂದರ್ಭಕ್ಕೆ ಯಾವ ಉಡುಗೊರೆ ಕೊಡಬೇಕು ಎಂಬ ಮಹಾಪೀಕಲಾಟಕ್ಕೆ ಬರೋಣ.

ನನ್ನ ಮದುವೆಯಲ್ಲಿ, ಹುಡುಗ 'ಐಟಿಯಲ್ಲಂತೆ ಕೆಲಸ ಮಾಡೋದು ಅಂತಂದು ತುಂಬಾ ಜನ ಪ್ಲಾಸ್ಟಿಕ್ ಕೊಟ್ಟಿದ್ದರು. ನಿಮಗೇನಾದರೂ ಈ ಲಾಜಿಕ್ ಅರ್ಥ ಆಯ್ತಾ? ಇಷ್ಟು ವರ್ಷವಾದರೂ ನನಗೆ ಅರ್ಥವಾಗಿಲ್ಲ. Plasticನಲ್ಲಿ ಜನಕ್ಕೆ IT ಎಲ್ಲಿದೇ? I ಮತ್ತು T ಇದೆ ಅಷ್ಟೇ!

ಮಗನ/ಮಗಳ ಮದುವೆಗೆ ಅಂತ ಸರೀಕರು ಮದುವೆಗೆ ಕರೆಯುತ್ತಾರೆ. ಮದುವೆ ಮಾಡುವ ಹಿರಿಯರು ಅವರಿಗೆ ಗೊತ್ತಿರುತ್ತದೆಯೇ ವಿನಃ ಅವರ ಮಗ/ಮಗಳು ಗೊತ್ತೇ ಇರುವುದಿಲ್ಲ. ಹಾಗಾಗಿ ಆ ತಾಯಿಗೆ ಒಳ್ಳೇ ಸೀರೆ, ಇರಲಿ ಅಂತ ಕುಪ್ಪುಸದ ಬಟ್ಟೆ, ತಂದೆಗೆ ಪಂಚೆ-ಶಲ್ಯ, ಹುಡುಗ/ಹುಡುಗಿಗೆ ಕೈಲಿ ಕವರ್ ತುರುಕಿದರೆ ಅಲ್ಲಿಗೆ ಊಟಕ್ಕೆ ಪಾಸ್ ಸಿಕ್ಕಂತೆ. ಇಷ್ಟೆಲ್ಲಾ ಕೊಟ್ಟಿದ್ದೇವಲ್ಲ ಅಂತ ಮದುವೆ ಮುಗಿಸಿಕೊಂಡು ಮನೆಗೆ ಬಂದು, ಸಂಜೆ ಕೆಲಸದಿಂದ ಬಂದ ತಮ್ಮ ಮಗ/ಸೊಸೆಯನ್ನೂ ರಿಸೆಪ್ಷನ್ ಊಟಕ್ಕೆ ಕಳಿಸುವವರು ಇದ್ದಾರೆ.

ಉಡುಗೊರೆ ಎಂಬುದು ಗಿಫ್ಟ್ ಹಾಗಾಗಿ ಮರು-ಉಡುಗೊರೆ ಅನ್ನೋದನ್ನ ರಿಟರ್ನ್-ಗಿಫ್ಟ್ ಅನ್ನಬಹುದಲ್ಲವೇ?

ಒಂದು ಲಾಟ್'ನಲ್ಲಿ ಒಂದೇ ರೀತಿಯ ವಸ್ತುಗಳನ್ನು (ತಟ್ಟೆ/ಡಬರಿ/ಡಬ್ಬಿ) ತಂದು ಎಲ್ಲರಿಗೂ ಒಂದೇ ರೀತಿ ಮರು-ಉಡುಗೊರೆ ಕೊಟ್ಟು ಮುಗಿಸುವ ಪದ್ಧತಿ ಒಂಥರಾ ಒಳ್ಳೆಯದೇ! ಕೊಡಲೇಬೇಕು ಎಂಬ ಕಟ್ಟಳೆ ಇಲ್ಲ ಬಿಡಿ. ಒಂದು ಕಾಲಕ್ಕೆ ಈ ಮರು-ಉಡುಗೊರೆ ಅಂತ ಸೀರೆಗಳನ್ನು ಕೊಡುತ್ತಿದ್ದ ಸಂಪ್ರದಾಯಸ್ಥರು ಇದ್ದರು. ತಮ್ಮ ಮೈಬಣ್ಣ ನೋಡಿಯೇ ಈ ಸೀರೆ ಕೊಟ್ಟಿದ್ದಾರೆ (ಅರ್ಥಾತ್ ಅವಮಾನ ಮಾಡಿದ್ದಾರೆ) ಅಂತ ಒಬ್ಬರೆಂದರೆ, ಅವರಿಗೆ costly ಸೀರೆ ಕೊಟ್ಟರು ನಮಗೆ ಈ ಕಳಪೆ ಕೊಟ್ಟಿದ್ದಾರೆ ಅನ್ನೋದು ಮತ್ತೊಬ್ಬರು ಅಳಲು. ತಮಗೆ ಕೊಟ್ಟ ಕುಪ್ಪುಸದ ಬಟ್ಟೆ ಕಾಟನ್ ಎಂದರೆ ನಮ್ಮೆಜಮಾನ್ರ ಪಂಚೆ ಅಂಚು ಕೇವಲ ಅರ್ಧ ಇಂಚು ಅಂತ ಮತ್ತೊಬ್ಬರು. ಜಗವ ಮೆಚ್ಚಿಸಲು ಜನಾರ್ಧನನಿಗೂ ಸಾಧ್ಯವಿಲ್ಲ ಬಿಡಿ!

ನವರಸಾಯನ ಅಂಕಣ: ರಿಯಾಲಿಟಿ ಷೋ ಪಿಡುಗೋ, ಪರಿಹಾರವೋ?

Recycling ಎಂಬ ಪದದ ಹುಟ್ಟು ಇತ್ತೀಚೆಗಿನ ದಿನಗಳಲ್ಲಿ ಹುಟ್ಟಿದ್ದಲ್ಲಾ! ಯಾವ ದಿನ ಉಡುಗೊರೆ ನೀಡುವ ಪದ್ಧತಿ ಶುರುವಾಯ್ತೋ ಅಂದೇ ಈ Recycling ಪರಿಕಲ್ಪನೆಯೂ ಆರಂಭವಾಯ್ತು. ಒಬ್ಬರ ಸಮಾರಂಭದಲ್ಲಿ ನೀವು ಕೊಟ್ಟ ಉಡುಗೊರೆ ಅವರಿಗೆ ಇಷ್ಟವಾಗದೇ ಹೋದರೆ, ಆ ಉಡುಗೊರೆ, ಆ ನಂತರ ನಡೆವ ಇನ್ಯಾವುದೋ ಔತಣ ಕೂಟ ನಡೆಸುವವರ ಹೆಗಲೇರುತ್ತದೆ. ಹೀಗೆ ಹೆಗಲು ಬದಲಿಸಿ ಬದಲಿಸಿ ನಿಮ್ಮ ತಲೆಗೆ 'surprise' ಉಡುಗೊರೆಯಾಗಿ ಬಂದು ಕೂತಾಗ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ವ್ಯಾಲಂಟೈನ್ ದಿನದ ವಿಶೇಷತೆ ಏನಾದರೂ ಇರಲಿ ಆದರೆ 'ಉಡುಗೊರೆ' ಮಾತ್ರ ಮಹತ್ತರ ಪಾತ್ರವಹಿಸುತ್ತದೆ. ಇನ್ನೂ ಲವ್ ಮಾಡ್ತಿರೋ ದಿನಗಳಲ್ಲೇ ಇಂಥಾ ಕಳಪೆ ಉಡುಗೊರೆ ಕೊಡ್ತೀಯಲ್ಲ, ಇನ್ನು ನಿನ್ನ ಮದುವೆ ಅಂತ ಆದರೆ ನನ್ನ ಗತಿ ಅಷ್ಟೇ ಎಂಬ ಅನವಶ್ಯಕ ದೂರಾಲೋಚನೆಯಿಂದ ಬ್ರೇಕ್-ಅಪ್ ಮಾಡಿಕೊಳ್ಳುವವರು ಸಿಕ್ಕಾಪಟ್ಟೆ ಜನ ಇದ್ದಾರೆ.

ಹುಟ್ಟುಹಬ್ಬದ ಉಡುಗೊರೆ ಅಥವಾ ವಿವಾಹ ವಾರ್ಷಿಕ ಮಹೋತ್ಸವದ ಉಡುಗೊರೆಗಳನ್ನು ಕೊಡುವುದ ಮರೆತು ಪತ್ನಿಯ ಸೀಳುನೋಟಕ್ಕೆ ಗುರಿಯಾಗಿ ಗಂಗಾ-ಭವಾನಿ ಹರಿಸಿದ ಪ್ರಸಂಗಗಳನ್ನು ಹಂಚಿಕೊಳ್ಳುವ ಸರದಿ ನಿಮಗೆ ಬಿಟ್ಟು, ನಾನು ಹೊರಡುತ್ತೇನೆ. Baby Shower'ಗೆ ಉಡುಗೊರೆ ತರಬೇಕಂತೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To gift or not to gift? This is big question many people face when they have to attend any marriage or any religious function. Status of the people will be guaged based on the gift they gift. Humorous write up by Srinath Bhalle, Richmond, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X