ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರಿನಲ್ಲಿನ ನಕ್ಷತ್ರದಾಮೆ ಮತ್ತು ಹುಡುಗರ ಪಾಲಿನ ಮೊಸರನ್ನ

By ಸ ರಘುನಾಥ, ಕೋಲಾರ
|
Google Oneindia Kannada News

ಗೋಪಾಲಪ್ಪ ಆತಂಕದಿಂದ ಶಾಲೆಗೆ ಬಂದ. ಏಕೆಂದು ಕೇಳಿದೆ. ಆತ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಆಮೆಯೊಂದು ಎದ್ದಿತಂತೆ. ಹೀಗೆ ನೇಗಿಲಿಗೆ ಸಿಕ್ಕುವುದು ಅನಿಷ್ಟವಂತೆ. ಆದುದರಿಂದ ಈ ಸಾಲು ಅದರಲ್ಲಿ ಆರಂಬ ಮಾಡಬಾರದಂತೆ. ಇದು ನಿಜವಾ? ಎಂದು ಕೇಳಿದ.

ಹೀಗೆ ಹೊಲವನ್ನು ಆ ವರ್ಷ ಬೀಡು ಬಿಟ್ಟ ಕೆಲವರನ್ನು ನಾನು ಕಂಡಿದ್ದೆ. ಇದನ್ನೇ ಹೇಳಿದರೆ ಅವನೂ ಹಾಗೆಯೇ ಮಾಡುತ್ತಿದ್ದ. ಇದರಿಂದ ಅವನು ಕಷ್ಟದ ಪಾಲಾಗುತ್ತಿದ್ದ. ಏಕೆಂದರೆ, ಅವನಿಗಿದ್ದದ್ದು ಅದೊಂದೇ ತುಂಡು ಭೂಮಿ. ಅದನ್ನೂ ಬೀಡು ಬಿಟ್ಟರೆ ಬದುಕು ದುಸ್ತರವಾಗುತ್ತಿತ್ತು.

ಗೌನಿಪಲ್ಲಿ ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತಗೌನಿಪಲ್ಲಿ ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತ

ಅವನಿಗಿದ್ದ ಕೆಡುಕಿನ ಭಯ ಹೋಗುವಂತೆ ಮಾಡಬೇಕೆಂದುಕೊಂಡೆ. ಅವನಿಗೂ ತಿಳಿದಿದ್ದ ಸೀತೆ ಸಿಕ್ಕಿದ ಕಥೆ ಹೇಳಿ, ಹಾಗೆ ಆಮೆ ಸಿಕ್ಕಿದೆ. ಅದು ವಿಷ್ಣುವಿನ ಅವತಾರವಾದ್ದರಿಂದ ಅನಿಷ್ಟವಲ್ಲ. ಅಷ್ಟಕ್ಕೂ ಬೇಕಿದ್ದರೆ ಒಂದು ಶಾಂತಿ ಮಾಡು ಎಂದು ಬುಡಬುಡಿಕೆಯವನಂತೆ ಹೇಳಿದೆ.

Superstitious belief and Star Tortoise, memories of Sa Raghunatha

ಯಾರಾದರೂ ಮಾಡಿದ್ದಾರಾ ಎಂದ. ಹೌದು ನಾನು ಹುಡುಗನಾಗಿದ್ದಾಗ ನಮ್ಮ ಹೊಲದಲ್ಲಿ ಹೀಗೇ ಆಮೆ ಎದ್ದಿತ್ತು. ಆಗ ನನ್ನ ತಾತ ಶಾಂತಿ ಮಾಡಿಸಿದ್ದ. ಏನೂ ತೊಂದರೆಯಾಗಲಿಲ್ಲ ಎಂದು ಬುರುಡೆ ಬಿಟ್ಟೆ. ಮೂಢನಂಬಿಕೆಯಿಂದ ಅನನುಕೂಲ ಆಗುವುದಕ್ಕಿಂತ ಇಂಥ ಸುಳ್ಳಿನಿಂದ ಅನುಕೂಲವಾಗುವುದು ಉತ್ತಮ ಅನ್ನಿಸಿತ್ತು. ಹಾಗಾಗಿ ಬುರುಡೆ ಬಿಟ್ಟೆ.

ಏನದು ಶಾಂತಿ ಎಂದು ಕೇಳಿದ. ಏನಿಲ್ಲ, ಆಮೆ ಎದ್ದಿತಲ್ಲ ಆ ಜಾಗದಲ್ಲಿ ಮೂರು ಸೇರು ಅಕ್ಕಿ ಅನ್ನದ 'ತಣುವುಮುದ್ದೆ' (ಎಡೆ) ಇಡು. ಆಮೇಲದನ್ನು ಮಕ್ಕಳಿಗೆ ಕೊಡು ಎಂದೆ. ನಿನ್ನ ತಾತ ಹೀಗೇನೆ ಮಾಡಿದ್ನ ಅಂದ. ಹೌದೆಂದೆ. ಸತ್ಯಾನ ಅಂದ ಅಪನಂಬಿಕೆಯಿಂದ. ದೇವರಾಣೆ ಸತ್ಯ ಎಂದು ಇನ್ನೊಂದು ಸುಳ್ಳು ಹೇಳಿದೆ.

ಬಿಳಿ ಇಲಿಯನ್ನು ಸಾಕಿದ ಸಂತಸ ಹಾಗೂ ಸಂಕಟಗಳುಬಿಳಿ ಇಲಿಯನ್ನು ಸಾಕಿದ ಸಂತಸ ಹಾಗೂ ಸಂಕಟಗಳು

ಈಗ ಅವನಿಗೆ ನನ್ನ ಮಾತಿನಲ್ಲಿ ನಂಬಿಕೆ ಹುಟ್ಟಿತು. ಇದಕ್ಕೆ ಯಾವುದು ಒಳ್ಳೇ ದಿನ ಅಂದ. ಇವತ್ತು ಗುರುವಾರ ಬೇಡ. ನಾಳೆ ಶುಕ್ರವಾರ. ಸರಿಯಾದ ದಿನ ಅಂದೆ. ಎಂಟರಿಂದ ಒಂಬತ್ತರೊಳಗೆ ಸಮಯ ಪ್ರಶಸ್ತವಾಗಿದೆ. ಆಗ ಮಾಡು. ಸ್ಕೂಲಿಗೆ ಹುಡುಗರು ಬಂದಿರುತ್ತಾರೆ. ತಂದು ಅವರಿಗೆ ಹಂಚು. ದೋಷ ಪರಿಹಾರ ಆಗುತ್ತೆ ಅಂದೆ. ಇದು ಅವನಿಗೆ ಒಪ್ಪಿಗೆ ಆಯಿತು. ಮಾರನೇ ದಿನ ನಮ್ಮ ಶಾಲೆಯ ಮಕ್ಕಳಿಗೆ ಒಳ್ಳೆ ದೊಡ್ಡಬೈರ್ನೆಲ್ಲಕ್ಕಿಯ ಮೊಸರನ್ನ ಸಿಕ್ಕಿತು.

Superstitious belief and Star Tortoise, memories of Sa Raghunatha

ಇದನ್ನು ವಿಚಾರವಾದಿಗಳು ಖಂಡಿಸಬಹುದು. ನಾನು ವಿಚಾರವಾದಿಯಂತೆ ಮಾತಾಡಿದ್ದರೆ ಅವನು ನಂಬದೆ, ಶಾಸ್ತ್ರವನ್ನೋ ಕಣಿಯನ್ನೋ ಕೇಳಲು ಹೋಗುತ್ತಿದ್ದ. ಅವರು ಹೊಲದಲ್ಲಿ ಆಮೆ ಏಳುವುದು ಅನಿಷ್ಟ ಅಂದರೆ ಅವನು ಹೊಲವನ್ನು ಬೀಡು ಬಿಟ್ಟು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಿದ್ದ. ಅದನ್ನು ತಪ್ಪಿಸಲು ಹೀಗೆ ಶಾಸ್ತ್ರದವರಂತೆ ಹೇಳಲೇಬೇಕಿತ್ತು.

ಆ ವರ್ಷ ನನ್ನ ಪುಣ್ಯಕ್ಕೆ ಸರಿಯಾಗಿ ಮಳೆಯೂ ಆಗಿ ಅವನು ಹೊಲದಲ್ಲಿ ಒಳ್ಳೆಯ ಬೆಳೆ ಕಂಡ. ಸುಗ್ಗಿ ಮುಗಿಯುತ್ತಲೇ ಹತ್ತು ಸೇರಿನಷ್ಟು ರಾಗಿ ತಂದು ಶಾಲೆಗೆ ನೀಡಿದ. ಈ ವರ್ಷ ಆಮೆಗಳಲ್ಲಿ ಸಂತಾನಾಭಿವೃದ್ಧಿ ಹೆಚ್ಚಿರಬೇಕು. ಮೂರು- ನಾಲ್ಕು ಹೊಲಗಳಲ್ಲಿ ಆಮೆಗಳು ಕಾಣಿಸಿಕೊಂಡಿದ್ದವು. ಅವರೂ ಎಡೆ ಇಟ್ಟು ತಂದು ಮಕ್ಕಳಿಗೆ ನೀಡಿದರು. ಆಮೆಯ ಹೆಸರಿನಲ್ಲಿ ಮಕ್ಕಳು ಮೊಸರನ್ನ ಉಂಡು ಸಂತಸಪಟ್ಟವು.

ಹೀಗೆ ಸಿಕ್ಕಿದ ಆಮೆಗಳಲ್ಲಿ ಎರಡು ನೇಗಿಲ ಕಾರಿಗೆ ಸಿಕ್ಕಿ ಗಾಯಗೊಂಡಿದ್ದವು. ಅವನ್ನು ಶಾಲೆಗೆ ತರಿಸಿಕೊಂಡು ಮಕ್ಕಳೊಂದಿಗೆ ಆರೈಕೆ ಮಾಡಿ, ಗುಣಮುಖವಾದ ನಂತರ ಕಾಡಿಗೆ ಬಿಟ್ಟೆ. ಹೀಗೆ ಶಾಲೆಯಲ್ಲಿ ಗಾಯಗೊಂಡು ಬಂದು ಆರೈಕೆ ಪಡೆಯುತ್ತ ಗುಣಮುಖವಾದ ಮೂತ್ತು ನಕ್ಷತ್ರದಾಮೆಗಳು ಮಕ್ಕಳಿಂದ ಅಕ್ಕರೆಯ ಆರೈಕೆ ಮಾಡಿಸಿಕೊಂಡು ಹತ್ತಿರದ ಸುಣ್ಣಕಲ್ಲು ಕಾಡಿನ ವಾಸಿಗಳಾದವು.

English summary
Superstitious beliefs of people about Star Tortoise and how it was resolved? Here Oneindia columnist Sa Raghunatha writes beautiful write up about it in his column Hittu Gojju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X