Ugadi Horoscope 2025: ವೃಶ್ಚಿಕ ರಾಶಿಯ ಯುಗಾದಿ ಜಾತಕ- ಸಂಕಷ್ಟವೋ? ಸಮಸ್ಯೆಗಳಿಂದ ಮುಕ್ತಿಯೋ?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಇದೇ ಮಾರ್ಚ್ 30ರಂದು ಭಾರತೀಯರ ಹೊಸ ವರ್ಷ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹೊಸ ಜೀವನ ಆರಂಭಿಸುವ ಹಬ್ಬ. ಕ್ರೋಧಿ ನಾಮ ಸಂವತ್ಸರ ಕಳೆದು ವಿಶ್ವಾವಸು ಸಂವತ್ಸರ ಶುರುವಾಗುವ ಈ ಸಮಯದಲ್ಲಿ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
2025-26 ಯುಗಾದಿ ಭವಿಷ್ಯದಲ್ಲಿ ಈಗಾಗಲೇ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ಹಾಗೂ ತುಲಾ ರಾಶಿಯ ಭವಿಷ್ಯವನ್ನು ತಿಳಿದುಕೊಂಡಿದ್ದೇವೆ. ಇದೀಗ ವೃಶ್ಚಿಕ ರಾಶಿಯ ಭವಿಷ್ಯವನ್ನು ತಿಳಿಯೋಣ. ಅದಕ್ಕೂ ಮೊದಲು ಹಿಂದೂಗಳ ಹೊಸ ವರ್ಷ ಯುಗಾದಿಯ ನಂತರ ಗ್ರಹಗಳ ಸ್ಥಾನ ಹೇಗಿದೆ ಎಂದು ತಿಳಿಯೋಣ.

ಗ್ರಹಗಳ ಸ್ಥಾನಪಲ್ಲಟ
ನವಗ್ರಹಗಳಲ್ಲಿ ಅತ್ಯಂತ ಕೆಟ್ಟ ಗ್ರಹವೆಂದು ಪರಿಗಣಿಸಲಾದ ಶನಿ ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಜೊತೆಗೆ ಶುಭ ಗ್ರಹ ಗುರು ಮೇ ತಿಂಗಳಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಾಗುತ್ತದೆ. ರಾಹು-ಕೇತುಗಳು ಕೂಡ ಮೇ ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ಗ್ರಹಗಳ ಸ್ಥಾನ ವೃಶ್ಚಿಕ ರಾಶಿಯವರಿಗೆ ಯಾವ ಫಲ ನೀಡಲಿವೆ ಎಂದು ತಿಳಿಯೋಣ.
ವೃಶ್ಚಿಕ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ
ವೃಶ್ಚಿಕ ರಾಶಿಯವರ ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿಲ್ಲ. ವೃಶ್ಚಿಕ ರಾಶಿಯವರ 6ನೇ ಮನೆಯಲ್ಲಿ ಗುರುವಿನ ಸಂಚಾರ, 4ನೇ ಮನೆಯಲ್ಲಿ ಶನಿಯ ಸಂಚಾರ, 6ನೇ ಮನೆಯಲ್ಲಿ ಶತ್ರು ರಾಹುವಿನ ಸಂಚಾರ ಮತ್ತು 12ನೇ ಮನೆಯಲ್ಲಿ ಕೇತುವಿನ ಸಂಚಾರ ಇದೆ. ಹೀಗಾಗಿ ಈ ಗ್ರಹಗಳು ಈ ವರ್ಷ ವೃಶ್ಚಿಕ ರಾಶಿಯ ಜನರಿಗೆ ಮಧ್ಯಮ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡಬಹುದು. ಆರ್ಥಿಕ ಸ್ಥಿತಿ ಕಳಪೆಯಾಗಿರುತ್ತದೆ. ಅಂದುಕೊಂಡ ಆದಾಯ ಸಿಗುವುದಿಲ್ಲ. ಆರ್ಥಿಕವಾಗಿ ವೃಶ್ಚಿಕ ರಾಶಿಯವರು ಈ ವರ್ಷ ಹಿಂದುಳಿಯುತ್ತಾರೆ.
ನಿಮಗೆ ಗುರುವಿನ ಪ್ರಭಾವ, ಗುರುವಿನ ಅನುಗ್ರಹ ತುಂಬಾ ಚೆನ್ನಾಗಿ ಇದೆ. ಆದರೆ ಮೇ ತಿಂಗಳ ನಂತರ ಗುರುವಿನ ಸ್ಥಾನ ನಿಮ್ಮ ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟು ಮಾಡುತ್ತದೆ. ಹೀಗಾಗಿ ಹಣ, ಜನ, ಮಾಡುವ ಕೆಲಸದ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ವೃಶ್ಚಿಕ ರಾಶಿಯ ಯುಗಾದಿ ಕೌಟುಂಬಿಕ ಜಾತಕ
ವೃಶ್ಚಿಕ ರಾಶಿಯವರಿಗೆ ಈ ವರ್ಷದಲ್ಲಿ ಅರ್ಧಾಷ್ಟಮ ಶನಿಯ ಪ್ರಭಾವದಿಂದಾಗಿ ಕುಟುಂಬ ವಿಷಯಗಳಲ್ಲಿ ತೊಂದರೆಗಳು ಹೆಚ್ಚಾಗಬಹುದು. ಮನೆಯಲ್ಲಿ ಕಿರಿಕಿರಿ, ವಿನಾಕಾರಣ ಜಗಳ, ಮನಸ್ತಾಪ, ಕೋಪ, ಮುನಿಸು, ಮನಸ್ಸಿನಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಯಾವುದೇ ತೊಂದರೆ ಬಂದರೂ ಕೂಡ ಅದನ್ನು ಶಾಂತ ರೀತಿಯಲ್ಲಿ ಎದುರಿಸಿ.
ವೃಶ್ಚಿಕ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ
ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಇದು ಕಠಿಣ ಸಮಯ. ವಿದ್ಯಾರ್ಥಿಗಳು ಎಷ್ಟೇ ಶ್ರಮ ಪಟ್ಟರು ಇದಕ್ಕೆ ತಕ್ಕ ಫಲ ಸಿಗುವುದಿಲ್ಲ. ವಿದೇಶದಲ್ಲಿ ವಿದ್ಯಾಭ್ಯಾಸದ ಕನಸು ಸದ್ಯಕ್ಕೆ ಈಡೇರುವ ಸಾಧ್ಯತೆ ಇಲ್ಲ. ಯಾವುದೇ ಕೋರ್ಸ್ ಅಥವಾ ತರಬೇತಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕಷ್ಟವಾಗುತ್ತದೆ. ಇದರಿಂದಾಗಿ ಮಕ್ಕಳು ಮಾನಸಿಕವಾಗಿ ಕುಗ್ಗಬಹುದು. ಹೀಗಾಗಿ ಪೋಷಕರು ಮಕ್ಕಳಿಗೆ ಧೈರ್ಯ ನೀಡಬೇಕು. ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುವುದು ಮುಖ್ಯ.
ವೃಶ್ಚಿಕ ರಾಶಿಯ ಯುಗಾದಿ ವೃತ್ತಿ ಭವಿಷ್ಯ
ವೃಶ್ಚಿಕ ರಾಶಿಯವರಿಗೆ ವೃತ್ತಿ ಸಂಬಂಧಿತ ವಿಷಯಗಳಲ್ಲಿ ತೊಂದರೆಗಳು ಹೆಚ್ಚಾಗಬಹುದು. ಶತ್ರು ಸ್ಥಾನದಲ್ಲಿ ಗುರುವಿನ ಪ್ರಭಾವದಿಂದಾಗಿ ಕೆಲಸದಲ್ಲಿ ಕಿರಿಕಿರಿ, ಅಡಚಣೆ, ಜಗಳಗಳು ಮತ್ತು ದ್ವೇಷ ಉಂಟಾಗಬಹುದು. ರಾಹು ಮತ್ತು ಆರನೇ ಮನೆಯಲ್ಲಿ ಕೇತುವಿನ ಪ್ರಭಾವದಿಂದ ಎಷ್ಟೇ ಸಮಸ್ಯೆಗಳು ಉದ್ಭವಿಸಿದರೂ, ನೀವು ನಿಮ್ಮ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಯಶಸ್ಸಿನತ್ತ ಸಾಗಬೇಕು.

ವೃಶ್ಚಿಕ ರಾಶಿಯವರಿಗೆ ಚಲನಚಿತ್ರೋದ್ಯಮವು ಹೆಚ್ಚು ಅನುಕೂಲಕರವಾಗಿಲ್ಲ. ವರ್ಷದ ಮಧ್ಯದಲ್ಲಿ ವೃಶ್ಚಿಕ ರಾಶಿಯ ಜನರು ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಾರೆ.
ವೃಶ್ಚಿಕ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ
ಯುಗಾದಿ ನಂತರ ವೃಶ್ಚಿಕ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅನುವಂಶಿಕ ಕಾಯಿಲೆ, ವಾತಾವರಣ ಬದಲಾವಣೆಯಿಂದಲೂ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ನಿತ್ಯ ವ್ಯಾಯಾಮ, ಯೋಗ, ಧ್ಯಾನವನ್ನು ರೂಢಿಸಿಕೊಳ್ಳಿ. ಹೊರಗಿನ ಆಹಾರವನ್ನು ತ್ಯಜಿಸಿ.
ವೃಶ್ಚಿಕ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ
ಯುಗಾದಿ ನಂತರದ ದಿನಗಳು ವೃಶ್ಚಿಕ ರಾಶಿಯವರ ದಾಂಪತ್ಯದಲ್ಲಿ ಕೆಲ ಸಮಸ್ಯೆಗಳನ್ನು ತರಬಹುದು. ವಿವಾಹಿತರು ಯಾವುದೇ ಸಮಯವನ್ನು ಒಟ್ಟಾಗಿ ಎದುರಿಸಬೇಕು. ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳನ್ನು ದೀರ್ಘಕಾಲದವರೆಗೆ ಮುಂದೂಡಬೇಡಿ.

ಇನ್ನೂ ಪ್ರೇಮಿಗಳ ನಡುವೆಯೂ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಜಗಳ ಮನಸ್ತಾಪ ಹೆಚ್ಚಾಗಬಹುದು. ಮನೆಯಲ್ಲಿ ಮದುವೆಗೆ ಒಪ್ಪದೇ ದಿನಾಂಕ ಮುಂದೂಡಬಹುದು. ಏಕಾಂಗಿಯಾಗಿರುವವರು ಮದುವೆ ವಿಚಾರದಲ್ಲಿ ಮೋಸ ಹೋಗಬಹುದು. ಹೀಗಾಗಿ ಯೋಚಿಸಿ ತಿಳಿದು ಮದುವೆ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ
ವೃಶ್ಚಿಕ ರಾಶಿಯವರಿಗೆ ಇದು ಸರಾಸರಿ ಸಮಯ. ವ್ಯವಹಾರದಲ್ಲಿ ವೆಚ್ಚ, ಸಾಲ ಹೆಚ್ಚಾಗಬಹುದು. ಹೀಗಾಗಿ ಯಾವುದೇ ದುಬಾರಿ ವಸ್ತು ಖರೀದಿ ಮಾಡುವುದು ಈ ಸಮಯದಲ್ಲಿ ಸೂಕ್ತವಲ್ಲ. ಅಲ್ಲದೆ ಈ ಸಮಯದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ವರ್ಷ ಮನೆ, ಆಸ್ತಿ, ಭೂಮಿ, ವಾಹನ ಖರೀದಿ ವಿಚಾರಗಳನ್ನು ಮುಂದೂಡುವುದು ಒಳ್ಳೆಯದು.












Click it and Unblock the Notifications