ಸಾಡೇಸಾತಿ : ಶನಿದೇವನ ವಕ್ರಗತಿ ಆರಂಭ!

ಇನ್ನು ಶನಿದೇವನು ಕೆಲ ತಿಂಗಳುಗಳಲ್ಲಿ ತನ್ನ ಉಚ್ಚಾಂಶ ತಲುಪಲಿದ್ದಾನೆ. ಅತೀ ನಿಧಾನವಾಗಿ ಚಲಿಸುವ ಶನಿದೇವನು ವೃಶ್ಚಿಕ ರಾಶಿಯವರಿಗೆ ಈಗಾಗಲೇ ಅವರ ಸ್ಥಾನ ಮತ್ತು ಸ್ಥಿತಿಯಲ್ಲಿ ಬದಲಾವಣೆ ತಂದಿದ್ದಾನೆ. ಅವರನ್ನು ಹೊಸ ಕೆಲಸ, ಜೀವನಶೈಲಿ ಮತ್ತು ಬೇರೆ ಸ್ಥಳಗಳಲ್ಲಿ ಹೊಂದಿಕೊಳ್ಳುವಂತೆ ಮಾಡಿದ್ದಾನೆ. ಅಲ್ಲದೇ ನಿದ್ರೆ ಭಂಗ, ಸುಮ್‌ಸುಮ್ನೆ ದುಡ್ಡು ಖರ್ಚು ಮಾಡುವಂತಾಗುವುದು, ಅನಾರೋಗ್ಯ ಮತ್ತು ಮಾನಸಿಕ ಒತ್ತಡ, ಆಯಾಸ ಹಾಗೂ ವೈದ್ಯಕೀಯ ಚಿಕಿತ್ಸೆ, ಕುಟುಂಬದಲ್ಲಿ ಹೊಂದಾಣಿಕೆ ಇಲ್ಲದಂತಾಗುವುದು ಇವೆಲ್ಲ ಶನಿದೇವನ ಏಳರಾಟದಲ್ಲಿ ತಪ್ಪಿದ್ದಲ್ಲ ವೃಶ್ಚಿಕ ರಾಶಿಯವರಿಗೆ.
ತುಲಾ ರಾಶಿಯವರು ಕೂಡ ಶನಿದೇವನ ಏಳರಾಟದಲ್ಲಿ ಸಿಕ್ಕಿಕೊಂಡಿದ್ದಾರೆ. ಇವರಿಗೆ ಮಾನಸಿಕ ನೆಮ್ಮದಿ ಮರೀಚಿಕೆಯಾಗಿ, ದೈಹಿಕ ತೊಂದರೆಗಳು ಒಂದೊಂದಾಗಿ ತಲೆದೋರುತ್ತಿವೆ. ವಿವಿಧ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದೇ ಇರುವುದು, ಮನೆಯಿಂದ ಅಥವಾ ಪ್ರೀತಿಸಿದವರಿಂದ ದೂರವಾಗುವಂತಾಗಿದೆ, ಯಾರೋ ಮಾಡಿದ ತಪ್ಪಿಗೆ ಹೊಣೆಗಾರಿಕೆ ವಹಿಸಿಕೊಳ್ಳುವಂತಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ.
ಇನ್ನು ಶನಿದೇವನ ಪ್ರಭಾವದಿಂದ ಜೀವನದ ಪಾಠ ಕಲಿತಿರುವ ಕನ್ಯಾ ರಾಶಿಯವರು, ಸಾಡೇಸಾತಿಯಿಂದ ಮುಕ್ತಿ ಹೊಂದಲು ಇನ್ನೊಂದು ವರ್ಷ ಕಾಯಬೇಕಾಗಿದೆ. ಈಗಾಗಲೇ ಯಾರೊಂದಿಗೂ ಬೆರೆಯದೇ ಒಂಟಿಯಾಗಿ ಜೀವನದಲ್ಲಿ ಸಾಕಷ್ಟು ಪಾಠ ಕಲಿತು ಸುಖಾಸುಮ್ಮನೆ ಅಲೆದಾಟ, ಬೇಡವಲ್ಲದ ಸ್ಥಳಗಳಲ್ಲಿ ಜೀವನ ಮಾಡಬೇಕಾದಂತಹ ಪರಿಸ್ಥಿತಿ ಕನ್ಯಾ ರಾಶಿಯವರದಾಗಿದೆ. ಆದರೆ, ಏನೂ ಮಾಡೋಕಾಗಲ್ಲ, ಶನಿದೇವನ ಪ್ರಭಾವವನ್ನು ಎದುರಿಸಲೇಬೇಕು. ಕನ್ಯಾ ರಾಶಿಯವರು ಒಂದು ವರ್ಷ ಕಾಯ್ದ ನಂತರ, ಮುಂದಿನ ಎರಡೂವರೆ ವರ್ಷಗಳವರೆಗೆ ಶನಿದೇವನೇ ಅಪಾರವಾಗಿ ಬೆಂಬಲವಾಗಿ ನಿಂತು ಅವರ ಯಶಸ್ಸಿಗೆ ಕಾರಣನಾಗುತ್ತಾನೆ ಧೈರ್ಯದಿಂದಿರಿ.
ಸಾಮಾನ್ಯವಾಗಿ ಎಲ್ಲರೂ ಶನಿದೇವನು ಸಾಡೇಸಾತಿಯಲ್ಲಿ ಮಾತ್ರ ಕಷ್ಟ ಕೊಡುತ್ತಾನೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಶನಿದೇವನು ರಾಶಿಯಿಂದ ಪಂಚಮ ಮತ್ತು ಅಷ್ಟಮ ಸ್ಥಾನಗಳಲ್ಲಿದ್ದಾಗ ಸಾಡೇಸಾತಿಗಿಂತ ಹೆಚ್ಚಿನ ಕಷ್ಟ ನೀಡುತ್ತಾನೆ. ಶನಿದೇವನು ಪಂಚಮ ಸ್ಥಾನಕ್ಕೆ ಬಂದನೆಂದರೆ ಶುರುವಾಗುತ್ತವೆ, ಮಾನಸಿಕ ಒತ್ತಡ, ಮಕ್ಕಳಿಂದ ನೋವು, ಸಂಬಂಧಗಳಲ್ಲಿ ಒಡಕು, ಗಾಯ, ನೋವು, ಗಂಡ- ಹೆಂಡತಿ ಕಲಹ, ಬರುವ ಉತ್ಪನ್ನ ಕಡಿಮೆಯಾಗುವುದು. ಕಷ್ಟಪಟ್ಟು ಗಳಿಸಿದ್ದ ಹಣವೆಲ್ಲ ಯಾವುದೋ ರೂಪದಲ್ಲಿ ಖಾಲಿಯಾಗುತ್ತದೆ. ಮಿಥುನ ರಾಶಿಯವರಿಗೆ ಈಗ ಪಂಚಮ ಶನಿ ಇದೆ. ಅದಕ್ಕೆಂದೇ "ಪಂಚಮ ಶನಿ ಹಂಚಿನ್ಯಾಗ ಊಟಾ ಮಾಡಸ್ತಾನ" ಎಂಬ ಗಾದೆ ಮಾತು ಹುಟ್ಟಿಕೊಂಡಿದೆ.
ಇನ್ನು ಶನಿದೇವನು ಜನ್ಮರಾಶಿಯಿಂದ ಅಷ್ಟಮ ಸ್ಥಾನಕ್ಕೆ ಬಂದರಂತೂ ರೋಗ-ರುಜಿನಗಳು ಕಟ್ಟಿಟ್ಟ ಬುತ್ತಿ. ಕೆಲಸದಲ್ಲಿ ನಿರುತ್ಸಾಹ, ಮನೆಯಲ್ಲಿಯೂ ಕೂಡ ನೆಮ್ಮದಿಯಿರುವುದಿಲ್ಲ. ಅಲ್ಲದೇ ಪ್ರೀತಿಯಿಂದ ಸಾಕು ಸಲುಹಿ ಬೆಳೆಸಿದ ಮಕ್ಕಳಿಂದಲೇ ನೋವು ಸಿಗುತ್ತದೆ. ಹಣವಂತು ಇದ್ದೂ ಇಲ್ಲದಂತಾಗಿ ಕೈಗೇನೇ ಸಿಗುವುದಿಲ್ಲ. ಮೀನ ರಾಶಿಯವರಿಗೆ ಈಗ ಅಷ್ಟಮ ಶನಿ ನಡೀತಾ ಇದೆ. "ಶಿಕಂಟಕ ಶನಿಷಿ" ಎಂಬುದಾಗಿಯೂ ಅಷ್ಟಮ ಶನಿದೇವನ ಕಾಡಾಟವನ್ನು ಕರೆಯುತ್ತಾರೆ.
ಇನ್ನು ಶನಿದೇವನು ಯಾವ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂಬುದನ್ನು ಮುಂದಿನ ಲೇಖನಗಳಲ್ಲಿ ನೋಡೋಣ. ಏಕೆಂದರೆ ಎಷ್ಟೋ ಜನರಿಗೆ ಶನಿದೇವನು ತಮ್ಮ ರಾಶಿಗೆ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂಬುದರ ಅರಿವೆಯೇ ಇರುವುದಿಲ್ಲ. ಶನಿದೇವನ ಶುಭಪ್ರಭಾವ ಗೊತ್ತಾದಲ್ಲಿ ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಲು ಸಾಧ್ಯ. (ಲೇಖಕರ ಮೊಬೈಲ್ : 94815 22011).
ಶನಿದೇವನ ಕೃಪೆಗೆ : ಶನಿಪ್ರದೋಷ ಕಾಲದಲ್ಲಿ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೃತ್ಯುಂಜಯ ಮಂತ್ರ ಜಪ ಮಾಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರನ್ನು ನೇರವಾಗಿ ಫೋನಾಯಿಸಿ ತಿಳಿದುಕೊಳ್ಳಬಹುದು. [ಸಾಡೇ ಸಾತಿ ಹಿಂದಿನ ಸರಣಿ]












Click it and Unblock the Notifications