Artificial intelligence: ಪೊಲೀಸರ ಕೆಲಸವೂ ಮಾಡಲಿದೆ ಎಐ; ಎಲ್ಲಿ ಹೇಗೆ?
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಇಂದು ಎಲ್ಲ ಕೆಲಸಗಳನ್ನು ಮಾಡಲು ಆರಂಭಿಸಿದೆ. ಈಗಾಗಲೇ ಟೆಕ್ ಜಗತ್ತಿನಲ್ಲಿ ಎಐ ಮಾಡಿರುವ ಕ್ರಾಂತಿ ಅಷ್ಟಿಷ್ಟಲ್ಲ. ಇದರೊಟ್ಟಿಗೆ ಮನುಷ್ಯರ ಕೆಲಸಗಳನ್ನು ಕಸಿಯುತ್ತಾ ನಿರುದ್ಯೋವನ್ನು ಸಹ ಸೃಷ್ಟಿಸುತ್ತಿದೆ ಎನ್ನುವ ಆರೋಪ ಹೊತ್ತಿದೆ. ಇದೀಗ ಎಐ ಪೊಲೀಸರ ಕೆಲಸ ಮಾಡಲು ಸಹ ಮುಂದಾಗಿದೆ. ಅಪರಾಧ ಪತ್ತೆ ಕಾರ್ಯದಕ್ಷತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಪೊಲೀಸರು ಪ್ರತ್ಯೇಕ ಕೃತಕ ಬುದ್ಧಿಮತ್ತೆ ಕೋಶವನ್ನೇ ಸ್ಥಾಪಿಸಿದ್ದಾರೆ.
ಪಶ್ಚಿಮ ಬಂಗಾಳ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವತ್ತ ಪ್ರಮುಖ ಹೆಜ್ಜೆಯಾಗಿ ಕೋಲ್ಕತ್ತಾದ ಭವಾನಿ ಭವನದಲ್ಲಿರುವ ಪೊಲೀಸ್ ನಿರ್ದೇಶನಾಲಯದಲ್ಲಿ ಎಐ ಕೋಶವನ್ನು ಸ್ಥಾಪಿಸಿದ್ದಾರೆ. ಇತ್ತೀಚೆಗೆ ಹೊರಡಿಸಲಾದ ಅಧಿಕೃತ ಆದೇಶದ ಪ್ರಕಾರ ಪೊಲೀಸರ ದಕ್ಷತೆ, ಪಾರದರ್ಶಕತೆ ಮತ್ತು ಸೇವಾ ವಿತರಣೆಯನ್ನು ಹೆಚ್ಚಿಸಲು ಎಐ ಮತ್ತು ಇತರ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಏನೆಲ್ಲ ಕೆಲಸ ಮಾಡಲಿದೆ?
ಈ ಹೊಸದಾಗಿ ರಚಿಸಲಾದ ಎಐ ಕೋಶವು ಪೊಲೀಸ್ ಸಂಸ್ಥೆಯೊಳಗೆ ನೀತಿ ನಿರೂಪಣೆ, ಕಾರ್ಯತಂತ್ರ ಅಭಿವೃದ್ಧಿ ಮತ್ತು ಎಐ-ಆಧಾರಿತ ವ್ಯವಸ್ಥೆಗಳ ನೈತಿಕ ಅನುಷ್ಠಾನದ ಮೇಲೆ ಕೇಂದ್ರೀಕರಿಸುತ್ತದೆ. ಈ ಕೋಶವು ಸಂಸ್ಥೆಯ ಎಐ ಕಾರ್ಯತಂತ್ರ ಮತ್ತು ಅನುಷ್ಠಾನ ಚೌಕಟ್ಟನ್ನು ರೂಪಿಸುತ್ತದೆ. ತಂತ್ರಜ್ಞಾನಗಳ ನೈತಿಕ, ಪಾರದರ್ಶಕ ಮತ್ತು ಜವಾಬ್ದಾರಿಯುತ ಬಳಕೆಗೆ ನೀತಿಗಳನ್ನು ಶಿಫಾರಸು ಮಾಡುತ್ತದೆ. ಪೊಲೀಸ್ ನಿರ್ದೇಶನಾಲಯದ ವಿವಿಧ ಶಾಖೆಗಳೊಂದಿಗೆ ಸಮನ್ವಯದೊಂದಿಗೆ ಪೈಲಟ್ ಯೋಜನೆಗಳ ವಿನ್ಯಾಸ ಮಾಡುವುದು, ಅಭಿವೃದ್ಧಿ ಮತ್ತು ನಿಯೋಜನೆಯನ್ನು ಸಹ ಸುಗಮಗೊಳಿಸಲಿದೆ.
ಪೊಲೀಸ್ ಪಡೆಯೊಳಗಿನ ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಲು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಎಐ ಸಾಕ್ಷರತೆಯನ್ನು ಸುಧಾರಿಸಲು ಈ ಘಟಕವು ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಿದೆ. ಎಐ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಪಾಲುದಾರರು, ನವೋದ್ಯಮಗಳು ಮತ್ತು AI ಕ್ಷೇತ್ರದಲ್ಲಿ ಕೆಲಸ ಮಾಡುವ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿರುತ್ತದೆ.
ಪೊಲೀಸರಿಗೆ ಭದ್ರತಾ ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿ, ದತ್ತಾಂಶ ಗೌಪ್ಯತೆ ಮತ್ತು ಸೈಬರ್ ಸುರಕ್ಷತೆಯ ಕುರಿತು ಸರ್ಕಾರಿ ಮಾನದಂಡಗಳ ಅನುಸರಣೆ ಮಾಡುವುದು, ಖಚಿತಪಡಿಸುತ್ತದೆ.ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವುದು, ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿ ವರದಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಲಿದೆ.
ಈ ಎಐ ಸೆಲ್ ಅನ್ನು ಎಡಿಜಿ ಶ್ರೇಣಿಯ ಅಧಿಕಾರಿಯೊಬ್ಬರು ನಿರ್ವಹಿಸಲಿದ್ದಾರೆ. ಇವರೇ ಈ ಕೋಶದ ಮುಖ್ಯಸ್ಥರಾಗುತ್ತಾರೆ. ಆದರೆ ಡಿಐಜಿ ಅಥವಾ ಎಸ್‌ಪಿ ಶ್ರೇಣಿಯ ಮತ್ತೊಬ್ಬ ಅಧಿಕಾರಿ ಇದರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೆಚ್ಚುವರಿಯಾಗಿ, ಎಐ ಮತ್ತು ಡೇಟಾ ತಂತ್ರಜ್ಞಾನಗಳಲ್ಲಿ ಇಬ್ಬರು ತಜ್ಞರು ಈ ಸೆಲ್‌ಗೆ ಸಹಾಯ ಮಾಡುತ್ತಾರೆ. ಅಗತ್ಯವಿದ್ದರೆ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಸಹ ಆಯ್ಕೆ ಮಾಡಿಕೊಳ್ಳುವ ಚಿಂತನೆಯಲ್ಲಿದೆ.












Click it and Unblock the Notifications