IPL 2026 Final: ಬೆಂಗಳೂರಿನ ಫೈನಲ್ ಪಂದ್ಯ ಶಿಫ್ಟ್ ಆಗಲು ಕಾರಣ 10,000 ಉಚಿತ ಟಿಕೆಟ್ ಬೇಡಿಕೆ: ಬಿಸಿಸಿಐ
IPL 2026 Final: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಗುರುವಾರ (ಮೇ 7) ಐಪಿಎಲ್ ಫೈನಲ್ ಪಂದ್ಯದ ಸ್ಥಳಾಂತರದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್ 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಲು ಕೆಎಸ್‌ಸಿಎ ಕೇಳಿದ ಉಚಿತ ಟಿಕೆಟ್‌ಗಳ ಬೇಡಿಕೆಯೇ ಕಾರಣ ಎಂದು ತಿಳಿಸಿದ್ದಾರೆ.
ನಿಗದಿತ ಕೋಟಾಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಕೆಎಸ್‌ಸಿಎ ಪಟ್ಟು ಹಿಡಿದಿತ್ತು. ನಿಯಮ ಉಲ್ಲಂಘಿಸಿ ಹೆಚ್ಚಿನ ಟಿಕೆಟ್ ನೀಡಲು ಸಾಧ್ಯವಿಲ್ಲದ ಕಾರಣ ಬಿಸಿಸಿಐ ಅಂತಿಮವಾಗಿ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬದಲಾಯಿಸಲು ನಿರ್ಧರಿಸಲಾಯಿತು ಎಂದು ದೇವಜಿತ್ ಸೈಕಿಯಾ ತಿಳಿಸಿದ್ಧಾರೆ.

ಐಪಿಎಲ್ ಫೈನಲ್ ಪಂದ್ಯ ಶಿಫ್ಟ್‌ಗೆ ಕಾರಣವೇನು?
ಐಪಿಎಲ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಟಿಕೆಟ್ ಹಂಚಿಕೆ ಕುರಿತು ಕಟ್ಟುನಿಟ್ಟಾದ ನಿಯಮಗಳಿದ್ದು, ಆತಿಥೇಯ ಸಂಸ್ಥೆಗಳು ಮಿತಿ ಮೀರಿ ಟಿಕೆಟ್ ಪಡೆಯುವುದು ಪಾರದರ್ಶಕತೆಗೆ ಧಕ್ಕೆ ತರುತ್ತದೆ. ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಇದು ನಿರಾಶಾದಾಯಕ ಸುದ್ದಿಯಾಗಿದ್ದರೂ, ಆಡಳಿತಾತ್ಮಕ ಕಾರಣಗಳಿಂದಾಗಿ ಈ ಬದಲಾವಣೆ ಅನಿವಾರ್ಯವಾಗಿತ್ತು ಎಂದು ಬಿಸಿಐ ಸ್ಪಷ್ಟಪಡಿಸಿದೆ.
ಐಪಿಎಲ್ ಪ್ರೋಟೋಕಾಲ್ ಅಡಿಯಲ್ಲಿ ಹಾಲಿ ಚಾಂಪಿಯನ್ ತಂಡವು ಫೈನಲ್ ಮತ್ತು ಒಂದು ಪ್ಲೇ ಆಫ್ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಯೋಜಿಸುವ ಹಕ್ಕನ್ನು ಹೊಂದಿರುತ್ತದೆ. ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರಿಂದ ಸಹಜವಾಗಿಯೇ ಈ ಬಾರಿಯ ಫೈನಲ್ ಆತಿಥ್ಯಕ್ಕೆ ಬೆಂಗಳೂರು ಮೊದಲ ಆಯ್ಕೆಯಾಗಿತ್ತು.
"ನಿನ್ನೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯು ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳಿಗಾಗಿ ನಾವು ಒಟ್ಟು ಮೂರು ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಮೊದಲ ಪ್ಲೇ ಆಫ್ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದೆ. ನಂತರದ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯಗಳು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಇನ್ನು ಮಹತ್ವದ ಫೈನಲ್ ಪಂದ್ಯವು ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ," ಎಂದು ಸೈಕಿಯಾ ಅವರು ತಿಳಿಸಿದರು.
"ಸಾಮಾನ್ಯವಾಗಿ ಪ್ರೋಟೋಕಾಲ್ ಪ್ರಕಾರ ಹಾಲಿ ಚಾಂಪಿಯನ್ ತಂಡವು ಫೈನಲ್ ಮತ್ತು ಒಂದು ಪ್ಲೇ ಆಫ್ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಯೋಜಿಸಲು ಅರ್ಹವಾಗಿರುತ್ತದೆ. ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್ ಆಗಿದ್ದರಿಂದ ಈ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಬೇಕಿತ್ತು. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸುವುದು ಅನಿವಾರ್ಯವಾಯಿತು," ಎಂದು ಹೇಳಿದರು.
ಹೆಚ್ಚು ಟಿಕೆಟ್‌ಗಳಿಗೆ ಬೇಡಿಕೆ
"ಐಪಿಎಲ್ ನಿಯಮಾವಳಿಗಳ ಪ್ರಕಾರ ನಾವು ಆತಿಥೇಯ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ ಶೇಕಡ 15ರಷ್ಟು ಟಿಕೆಟ್‌ಗಳನ್ನು ಮಾತ್ರ ಉಚಿತವಾಗಿ ನೀಡಲು ಸಾಧ್ಯ. ಇದು ಎಲ್ಲಾ ರಾಜ್ಯಗಳಿಗೂ ಅನ್ವಯಿಸುವ ಸಾಮಾನ್ಯ ನಿಯಮ. ಆದರೆ ಬೆಂಗಳೂರಿನಲ್ಲಿ ನಡೆದ ಲೀಗ್ ಹಂತದ ಪಂದ್ಯಗಳ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಈ ಮಿತಿಗಿಂತ ಹೆಚ್ಚಿನ ಟಿಕೆಟ್‌ಗಳನ್ನು ಪಡೆಯುತ್ತಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿತ್ತು," ಎಂದು ಸೈಕಿಯಾ ವಿವರಿಸಿದರು.
ಸರ್ಕಾರ ಮತ್ತು ಶಾಸಕರಿಗಾಗಿ ಟಿಕೆಟ್ ಬೇಡಿಕೆ
ನಿಗದಿತ ಶೇಕಡ 15ರ ಕೋಟಾದ ಹೊರತಾಗಿ ಸುಮಾರು 10,000 ಹೆಚ್ಚುವರಿ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಕೆಎಸ್‌ಸಿಎ ಬೇಡಿಕೆಯಿಟ್ಟಿತ್ತು. ಸಂಸ್ಥೆಯ ಸದಸ್ಯರು, ಸಂಯೋಜಿತ ಕ್ಲಬ್‌ಗಳು, ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಹಂಚಲು ಈ ಟಿಕೆಟ್‌ಗಳನ್ನು ಕೇಳಲಾಗಿತ್ತು. ವಿಶೇಷವಾಗಿ ಕರ್ನಾಟಕ ಸರ್ಕಾರಕ್ಕೆ 700 ಉಚಿತ ಪಾಸ್‌ಗಳನ್ನು ನೀಡುವಂತೆಯೂ ಬೇಡಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಬಿಸಿಸಿಐನಿಂದ ಕಟ್ಟುನಿಟ್ಟಿನ ನಿರ್ಧಾರ
"ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಸಂಪೂರ್ಣ ಜವಾಬ್ದಾರಿ ಬಿಸಿಸಿಐ ಮೇಲಿರುತ್ತದೆ. ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿ ಯಾರಿಗೂ ಹೆಚ್ಚುವರಿ ಟಿಕೆಟ್ ನೀಡಲು ನಮಗೆ ಸಾಧ್ಯವಿಲ್ಲ. ಈ ಬೇಡಿಕೆಗಳು ನಿಯಮಕ್ಕೆ ವಿರುದ್ಧವಾಗಿದ್ದರಿಂದ, ನಮಗೆ ಬೇರೆ ದಾರಿಯಿಲ್ಲದೆ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು," ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಹೇಳುವುದಾದರೆ ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರದ ಹೆಸರಿನಲ್ಲಿ ಕೇಳಲಾದ ಸುಮಾರು 10,000 ಹೆಚ್ಚುವರಿ ಉಚಿತ ಟಿಕೆಟ್‌ಗಳ ವಿವಾದವೇ ಆರ್‌ಸಿಬಿ ಅಭಿಮಾನಿಗಳಿಗೆ ತವರು ಮೈದಾನದಲ್ಲಿ ಫೈನಲ್ ನೋಡುವ ಅವಕಾಶವನ್ನು ತಪ್ಪಿಸಿದೆ ಅಂದ್ರೆ ತಪ್ಪಾಗಲಾರದು. ಈ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ರಾಜಕಾರಣಿಗಳ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications