ಐಪಿಎಲ್ 2026: ಆಟಗಾರರ ಹೋಟೆಲ್ ಕೊಠಡಿಗಳಿಗೆ ಅನಾಮಿಕ ವ್ಯಕ್ತಿಗಳ ಪ್ರವೇಶ, ಬಿಸಿಸಿಐನಿಂದ ಕಟ್ಟುನಿಟ್ಟಿನ ಕ್ರಮ
BCCI Guidelines: ಈಗ ನಡೆಯುತ್ತಿರುವ ಐಪಿಎಲ್ 2026ರ ಆವೃತ್ತಿಯಲ್ಲಿ ಆಟಗಾರರ ಶಿಸ್ತು ಮತ್ತು ಭದ್ರತೆಗೆ ಸಂಬಂಧಿಸಿದಂತೆ ಕೆಲವು ಗಂಭೀರ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಟಗಾರರ ಸಂಬಂಧಿಕರಾಗಿರಲಿ ಅಥವಾ ಸ್ನೇಹಿತರಾಗಿರಲಿ ತಂಡದ ಮ್ಯಾನೇಜರ್ ಅವರ ಲಿಖಿತ ಅನುಮತಿ ಇಲ್ಲದೆ ಆಟಗಾರರ ಹೋಟೆಲ್ ಕೊಠಡಿಗಳನ್ನು ಪ್ರವೇಶಿಸುವಂತಿಲ್ಲ. ಆದರೆ ಇದೀಗ ನಿಯಮ ಮೀರಿ ಆಟಗಾರರ ಕೊಠಡಿಗಳಿಗೆ ಅನಾಮಿಕ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಾ ಬಿಸಿಸಿಐ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹನಿಟ್ರಾಪ್ ಮತ್ತು ಭದ್ರತೆಯ ಭೀತಿ
ಐಪಿಎಲ್‌ನಂತಹ ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಆಟಗಾರರನ್ನು ಗುರಿಯಾಗಿಸಿ ಹನಿಟ್ರಾಪ್ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂತಹ ಘಟನೆಗಳು ಸಂಭವಿಸದಂತೆ ತಡೆಯಲು ಬಿಸಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ. ಹೋಟೆಲ್ ರೂಮ್‌ಗಳಲ್ಲಿ ಅಪರಿಚಿತರ ಭೇಟಿಯು ಆಟಗಾರರ ಖಾಸಗಿತನ ಮಾತ್ರವಲ್ಲದೆ, ಪಂದ್ಯದ ಸಮಗ್ರತೆಗೂ ಧಕ್ಕೆ ತರಬಹುದು ಎಂದು ಮಂಡಳಿ ಆತಂಕ ವ್ಯಕ್ತಪಡಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಭೇಟಿಗೆ ಅವಕಾಶ
ಅತಿಥಿಗಳನ್ನು ಭೇಟಿಯಾಗಲು ಹೋಟೆಲ್‌ನ ಕೆಫೆಟೇರಿಯಾದಂತಹ ಸಾರ್ವಜನಿಕ ಸ್ಥಳಗಳನ್ನು ಮಾತ್ರ ಬಳಸಿಕೊಳ್ಳಬೇಕು. ಖಾಸಗಿ ಕೊಠಡಿಗಳಿಗೆ ಯಾರನ್ನೂ ಕರೆದೊಯ್ಯುವಂತಿಲ್ಲ.
ತಂಡದ ಮಾಲೀಕರಿಗೂ ಪ್ರವೇಶ ನಿರ್ಬಂಧ
ಕೇವಲ ಆಟಗಾರರಿಗೆ ಮಾತ್ರವಲ್ಲದೆ, ತಂಡದ ಮಾಲೀಕರು ಮತ್ತು ಪ್ರತಿನಿಧಿಗಳು ಕೂಡ ಪಂದ್ಯ ನಡೆಯುವ ಸಮಯದಲ್ಲಿ ಆಟಗಾರರ ಮೀಸಲು ಪ್ರದೇಶಕ್ಕೆ ಹೋಗದಂತೆ ಮತ್ತು ಆಟಗಾರರ ಜೊತೆ ನೇರ ಸಂಪರ್ಕ ಸಾಧಿಸದಂತೆ ಸೂಚಿಸಲಾಗಿದೆ.
ದಿಢೀರ್ ತಪಾಸಣೆ
ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ ಮತ್ತು ಭದ್ರತಾ ತಂಡವು ಹೋಟೆಲ್‌ಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ತಪಾಸಣೆ ನಡೆಸಲಿದೆ.
ನಿಯಮ ಉಲ್ಲಂಘಿಸಿದರೆ ದಂಡದ ಜೊತೆ ಕಠಿಣ ಶಿಕ್ಷೆ
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಆಟಗಾರರು ಅಥವಾ ಸಿಬ್ಬಂದಿಯ ಮೇಲೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಜೊತೆ ಅಮಾನತು ಮಾಡುವಂತಹ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಎಚ್ಚರಿಸಿದ್ದಾರೆ.
ಟೂರ್ನಿಯ ಮಧ್ಯಭಾಗದಲ್ಲಿ ಕೆಲವು ಆಟಗಾರರ ಕೊಠಡಿಗಳಿಗೆ ಮ್ಯಾನೇಜರ್‌ಗಳ ಕಣ್ತಪ್ಪಿಸಿ ಅಪರಿಚಿತ ವ್ಯಕ್ತಿಗಳು ಭೇಟಿ ನೀಡುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿತ್ತು. ಇದರಿಂದಾಗಿ ತಂಡದ ಶಿಸ್ತು ಮತ್ತು ಭದ್ರತೆಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಈ ಹೊಸ ಎಸ್‌ಒಪಿ ಜಾರಿಗೆ ತರಲಾಗಿದೆ. ಬಿಸಿಸಿಐನ ಈ ನಿರ್ಧಾರವು ಐಪಿಎಲ್ ಅನ್ನು ಕೇವಲ ಮನರಂಜನೆಯಾಗಿ ಮಾತ್ರವಲ್ಲದೆ ಅತ್ಯಂತ ವೃತ್ತಿಪರ ಮತ್ತು ಸುರಕ್ಷಿತ ಕ್ರೀಡೆಯಾಗಿ ಉಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.












Click it and Unblock the Notifications