ವಿಜಯ್‌ಗೆ ಅವಕಾಶ ನಿರಾಕರಿಸಿದ ರಾಜ್ಯಪಾಲರು: 2018ರಲ್ಲಿ ಬಿಎಸ್‌ವೈಗೆ ಕೊಟ್ಟಿದ್ದ ಚಾನ್ಸ್ ನೆನಪಿಸಿದ ನೆಟ್ಟಿಗರು
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇದೀಗ ಭಾರೀ ಸಂಚಲನ ಸೃಷ್ಟಿಯಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸಲು ತಮಿಳುನಾಡು ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ ಎಂಬ ವಿಚಾರ ಇದೀಗ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ನೆಟ್ಟಿಗರು 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ರಾಜ್ಯಪಾಲರು ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದ ಅವಕಾಶವನ್ನು ಮುಂದಿಟ್ಟುಕೊಂಡು ತಮಿಳುನಾಡು ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರವೊಂದನ್ನು ಟ್ಯಾಗ್ ಮಾಡಿರುವ ಬಳಕೆದಾರರು, "ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಅವರೇ, ದಯವಿಟ್ಟು 2018ರಲ್ಲಿ ಕರ್ನಾಟಕದ ರಾಜ್ಯಪಾಲರು ಹೊರಡಿಸಿದ ಪತ್ರವನ್ನು ಒಮ್ಮೆ ಓದಿ. ಸಂವಿಧಾನದ ನಿಯಮಾವಳಿಗಳ ಪ್ರಕಾರ, ಅಂದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಲಾಗಿತ್ತು ಮತ್ತು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸಲಾಗಿತ್ತು. ಅದೇ ಆರ್‌ಎಸ್‌ಎಸ್ ಬೆಂಬಲಿತ ರಾಜ್ಯಪಾಲರು ಅಂದು ಬಿಜೆಪಿಗೆ ಅವಕಾಶ ಕೊಟ್ಟಿದ್ದರು. ರಾಜ್ಯಪಾಲರು ರಾಜಭವನದೊಳಗೆ ಕುಳಿತು ಸಂಖ್ಯಾಬಲವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ. ಬಹುಮತವನ್ನು ಸಾಬೀತುಪಡಿಸಲು ವಿಧಾನಸಭೆ ಮಾತ್ರ ಏಕೈಕ ಸಾಂವಿಧಾನಿಕ ವೇದಿಕೆಯಾಗಿದೆ" ಎಂದು ನೆನಪಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ವೈಯಕ್ತಿಕ ವಿವೇಚನೆ ಅಥವಾ ಸೈದ್ಧಾಂತಿಕ ಒಲವುಗಳಿಂದ ಬದಲಾಯಿಸಲು ಖಂಡಿತಾ ಸಾಧ್ಯವಿಲ್ಲ. ನೀವು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರಬಹುದು, ಆದರೆ ರಾಜ್ಯಪಾಲರಾಗಿ ರಾಜಕೀಯ ಸಿದ್ಧಾಂತಕ್ಕಿಂತ ಮೇಲೇರಿ ಭಾರತದ ಸಂವಿಧಾನವನ್ನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯವಾಗಿದೆ ಎಂದು ಟ್ವೀಟ್‌ಗಳಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿರುವ ನೆಟ್ಟಿಗರು, "ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸಾಂವಿಧಾನಿಕ ಸಂಪ್ರದಾಯಗಳನ್ನು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪದೇ ಪದೇ ಬದಲಾಯಿಸಬೇಡಿ" ಎಂದಿದ್ದಾರೆ.
Honourable Governor Shri Rajendra Arlekar Bab,
— Girish Chodankar (@girishgoaINC) May 7, 2026
Please go through this letter issued by the Governor of Karnataka in 2018, where the single largest party was invited to form the government and asked to prove its majority on the floor of the House, as mandated by the Constitution.… pic.twitter.com/ByTHGOYxGW
ಮತ್ತೊಂದೆಡೆ, ತಮಿಳುನಾಡಿನ ಜನತೆಯನ್ನು ಕಡೆಗಣಿಸುವ ಪ್ರಯತ್ನವನ್ನು ರಾಜ್ಯದ ಜನರು ತೀವ್ರವಾಗಿ ವಿರೋಧಿಸುತ್ತಾರೆ ಎನ್ನಲಾಗಿದೆ. ನಟ ವಿಜಯ್ ಅವರು ರಾಜಕೀಯದಲ್ಲಿ ಈ ಹಂತಕ್ಕೆ ತಲುಪಲು ಅನೇಕ ಬಿಕ್ಕಟ್ಟುಗಳನ್ನು, ಸಂಕಷ್ಟಗಳನ್ನು ಎದುರಿಸಿದ್ದಾರೆ. ತಮಿಳುನಾಡಿನಲ್ಲಿ ರಾಜಕೀಯ ಪಿತೂರಿಗಳಿಗೆ ಯಾವುದೇ ಅವಕಾಶವಿಲ್ಲ.
ಗೋವಾ ಮೂಲದವರಾಗಿರುವ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ, ಕಾನೂನು ಪಾಲಿಸುವ ಗೋವಾದವರ ಹೆಸರಿಗೆ ಕಳಂಕ ತರಬಾರದು ಎಂಬ ಕಿವಿಮಾತುಗಳೂ ಕೇಳಿಬರುತ್ತಿವೆ.
தமிழக மக்களை அவமதிக்காதீர்கள்.
— Kaaviya TVK (@kaaviyaTVK) May 8, 2026
எத்தனை நெருக்கடிகளை தாண்டி இந்த இடத்திற்கு வந்தவர் அவர் 🥺
அரசியல் சூழ்ச்சிக்கு தமிழ்நாடு இடமில்லை. 🔥 pic.twitter.com/XVg3B21VLg
ಒಟ್ಟಾರೆಯಾಗಿ ತಮಿಳುನಾಡಿನಲ್ಲಿ ದಳಪತಿ ವಿಜಯ್‌ಗೆ ಅವಕಾಶ ನಿರಾಕರಣೆ ಮಾಡಿರುವ ಪ್ರಕರಣವು ರಾಜ್ಯಪಾಲರ ವಿವೇಚನಾಧಿಕಾರ ಹಾಗೂ ನಿಷ್ಪಕ್ಷಪಾತದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಹೊಸ ಸಾಂವಿಧಾನಿಕ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications