ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದ್ರೆ ಕಠಿಣ ಕ್ರಮ
ಹಾವೇರಿ, ಏಪ್ರಿಲ್ 14: ''ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಮತ್ತು ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು'' ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ. '
ಏಪ್ರಿಲ್ 1 ರಿಂದ ರಸಗೊಬ್ಬರ ದರ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಹಾಲಿ ಲಭ್ಯವಿರುವ ದಾಸ್ತಾನಿನ ರಸಗೊಬ್ಬರ ಚೀಲದ ಮೇಲಿನ ಮುದ್ರಿತ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ, ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ಪರವಾನಿಗೆ ರದ್ದುಗೊಳಿಸಲಾಗುವುದು. ಮಾರಾಟ ಮಾಡಿದ ರಸಗೊಬ್ಬರಗಳಿಗೆ ಕಡ್ಡಾಯವಾಗಿ ಬಿಲ್ ನೀಡಲು ಸೂಚನೆ ನೀಡಲಾಗಿದೆ.
ರೈತರು ರಸಗೊಬ್ಬರ ಖರೀದಿಸುವಾಗ ರಸಗೊಬ್ಬರ ಚೀಲದ ಮೇಲೆ ಮುದ್ರಿತ ದರ ಗಮನಿಸಿ ಖರೀದಿಸಬೇಕು. ರಸಗೊಬ್ಬರ ಮಾರಾಟಾಗಾರರು ಚೀಲದ ಮೇಲೆ ಮುದ್ರಿತ ಧಾರಣೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಚೇರಿ ಸಂಪರ್ಕಿಸಿ ದೂರು ನೀಡಬಹುದು. ಮತ್ತು ರೈತರು ಗರಿಷ್ಠ ಚಿಲ್ಲರೆ ಮಾರಾಟ ದರದಲ್ಲಿಯೇ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿದೆ.

ನಿಗದಿತ ದರಕ್ಕಿಂತ ಅಧಿಕ ದರದಲ್ಲಿ ರಸಗೊಬ್ಬರ ಮಾರಾಟದ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸಮಿಪದ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಹಾವೇರಿ/ರಾಣೇಬೆನ್ನೂರು, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ ಅಥವಾ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.












Click it and Unblock the Notifications