ವೃಷಭಾವತಿ ವ್ಯಾಲಿಯಲ್ಲಿ ನೀರು ಸರಾಗ ಹರಿದುಹೋಗಲು ವೈಜ್ಞಾನಿಕ ಯೋಜನೆಗೆ ಸೂಚನೆ: ಪಾಲಿಕೆ
ಬೆಂಗಳೂರು; ಮಳೆಗಾಲ ಶುರುವಾಗಿದ್ದು, ಪೂರ್ವ ಮುಂಗಾರು ಮಳೆ ನಗರದಲ್ಲಿ ಆಗಾಗ ಸುರಿಯುತ್ತಿದೆ. ಇದೇ ಮೇ ಅಂತ್ಯದ ಹೊತ್ತಿಗೆ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಪ್ರವಾಹ ಸಮಸ್ಯೆಗಳ ನಿವಾರಣೆಗೆ ಮುಂದಾಗಿರುವ ನಗರ ಪಾಲಿಕೆ ಇದೀಗ ವೃಷಭಾವತಿ ವ್ಯಾಲಿಯಲ್ಲಿ ಸರಾಗವಾಗಿ ನೀರು ಹರಿದುಹೋಗಲು ವೈಜ್ಞಾನಿಕ ಯೋಜನೆ ರೂಪಿಸಲು ಮುಂದಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿಜಯನಗರ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಮಾತನಾಡಿದರು. ಗಾಳಿ ಆಂಜನೇಯ ದೇವಸ್ಥಾನದ ಬಳಿ ವೃಷಭಾವತಿ ವ್ಯಾಲಿಯನ್ನು ಪರಿಶೀಲಿಸಿ ಹೂಳು, ತ್ಯಾಜ್ಯವನ್ನು ತಕ್ಷಣ ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು.

ಜಲಾವೃತ ತಪ್ಪಿಸಲು ಪ್ಲ್ಯಾನ್
ಮಳೆಗಾಲದ ವೇಳೆ ಗಾಳಿ ಆಂಜನೇಯ ದೇವಸ್ಥಾನದ ಬಳಿ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಜಲಾವೃತ ಆಗುವುದನ್ನು ತಪ್ಪಿಸುವ ಸಲುವಾಗಿ, ವ್ಯಾಲಿಯನ್ನು ನಿರಂತರವಾಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ವ್ಯಾಲಿಗೆ ತ್ಯಾಜ್ಯ ಹಾಕದಂತೆ ಎಚ್ಚರ ವಹಿಸುವಂತೆ ತಿಳಿಸಿದರು. ಇನ್ನು ಕವಿಕಾ ಫ್ಯಾಕ್ಟರಿ ಹಿಂಭಾಗ ವೃಷಭಾವತಿ ವ್ಯಾಲಿಯಲ್ಲಿ ಹೂಳೆತ್ತುವ ಕಾರ್ಯವನ್ನು ಪರಿವೀಕ್ಷಿಸಿ, ಮುಂಗಾರು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕೆಲಸ ಪೂರ್ಣಗೊಳಿಸಬೇಕೆಂದರು.
ಸ್ವಚ್ಛತೆಗಾಗಿ ಹೆಚ್ಚುವರಿ ತಂಡ ನಿಯೋಜಿಸಿ
ಮಳೆಗಾಲದ ವೇಳೆ ಗಾಳಿ ಆಂಜನೇಯ ದೇವಸ್ಥಾನ, ಕವಿಕಾ ಹಾಗೂ ನಾಯಂಡ ಹಳ್ಳಿ ಜಂಕ್ಷನ್ ಭಾಗದಲ್ಲಿ ಜಲಾವೃತ ಆಗುವುದನ್ನು ತಪ್ಪಿಸುವ ಸಲುವಾಗಿ ಹೆಚ್ಚುವರಿ ಯಂತ್ರೋಪಕರಣಗಳನ್ನು ಬಳಸಿಕೊಂಡು ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಅಗತ್ಯವಿದ್ದಲ್ಲಿ ಸ್ವಚ್ಛತೆಗಾಗಿ ಹೆಚ್ಚುವರಿ ತಂಡಗಳನ್ನು ನಿಯೋಜಿಸಿಕೊಳ್ಳಬೇಕೆಂದು ಹೇಳಿದರು.
ಗಾಳಿ ಆಂಜನೇಯ ದೇವಸ್ಥಾನದ ಬಳಿ ರಸ್ತೆಯ ಭಾಗ ಜಲಾವೃತ ಆಗುವುದನ್ನು ತಪ್ಪಿಸುವ ಸಲುವಾಗಿ ತಾತ್ಕಾಲಿಕವಾಗಿ ಕ್ಯಾಚ್ಮೆಂಟ್ ಪಿಟ್ ಸ್ಥಾಪಿಸಿಕೊಂಡು ಎಷ್ಟು ಸಾಮರ್ಥ್ಯದ ಪಂಪ್ ಅವಶ್ಯಕತೆಯಿದೆ ಎಂಬುದನ್ನು ಪರಿಶೀಲಿಸಿಕೊಂಡು Submersible Water Pump ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲದ ವೇಳೆ ಪಂಪ್ ಮೂಲಕ ವ್ಯಾಲಿಗೆ ನೀರು ಹೋಗುವ ವವಸ್ಥೆ ಮಾಡಿ ರಸ್ತೆ ಮೇಲೆ ಯಾವುದೇ ರೀತಿಯ ಜಲಾವೃತವಾಗದಂತೆ ನೋಡಿಕೊಳ್ಳಬೇಕು.
ಮಳೆಗಾಲಕ್ಕೂ ಮುನ್ನ ಕೆಲಸ ಪೂರ್ಣವಾಗಲಿ
ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ(NDRMF) ಯೋಜನೆಯಡಿ, ಕೈಗೆತ್ತಿಕೊಂಡಿರುವಂತಹ ಮಳೆ ನೀರುಗಾಲುವೆ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭ ಆಗುವುದಕ್ಕೂ ಮುಂಚಿತವಾಗಿ ಪೂರ್ಣಗೊಳಿಸಬೇಕು. ಮೈಸೂರು ರಸ್ತೆ ನಾಯಂಡಹಳ್ಳಿ ಮೇಲ್ಸೇತುವೆ ಭಾಗದಲ್ಲಿ ಮಿಲ್ಲಿಂಗ್ ಮಾಡಿಕೊಂಡು ಡಾಂರೀಕರಣ ಹಾಕುವ ಕಾರ್ಯ ಪ್ರಗತಿ ಪರಿಶೀಲನೆ ನಡೆಸಿದರು. ಡಾಂಬರೀಕರಣ ಕೆಲಸವನ್ನು ಗುಣಮಟ್ಟ ಹಾಗೂ ಸಾರ್ವಜನಿಕ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ತಾಕೀತು ಮಾಡಿದರು.













Click it and Unblock the Notifications