Bengaluru: ಬೆಂಗಳೂರಲ್ಲಿ ಹಸಿ - ಒಣ ಕಸ ಮಾತ್ರವಲ್ಲ; ಈ ತ್ಯಾಜ್ಯವನ್ನೂ ಇನ್ಮುಂದೆ ವಿಂಗಡಿಸಿಕೊಡಬೇಕು


ಬೆಂಗಳೂರಿನಲ್ಲಿ ಹಸಿಕಸ ಮತ್ತು ಒಣಕಸ ಮಾತ್ರವಲ್ಲ, ಇನ್ಮುಂದೆ ಇನ್ನೆರಡು ಕಸಗಳನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡುವುದು ಸಹ ಕಡ್ಡಾಯವಾಗಲಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯ ಬೃಹತ್ ತ್ಯಾಜ್ಯ ಉತ್ಪಾದಕರು (Bulk Waste Generators-BWGs), ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಎಜಿಎಂ)ಗಳು ಹಾಗೂ ಮಾರ್ಷಲ್‌ಗಳೊಂದಿಗೆ ಸಭೆ ನಡೆಸಿದ್ದಾರೆ.

Advertisement

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,552 ನೋಂದಾಯಿತ ಬೃಹತ್ ತ್ಯಾಜ್ಯ ಉತ್ಪಾದಕರಿದ್ದು, ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ, ನಿಯಮದ ಚೌಕಟ್ಟಿನಿಂದ ಹೊರಗೆ ಉಳಿದಿರುವ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಜಿಎಂಗಳು, ಕಿರಿಯ ಆರೋಗ್ಯ ಪರಿವೀಕ್ಷಕರು (ಜೆಎಚ್‌ಐ) ಹಾಗೂ ಮಾರ್ಷಲ್‌ಗಳು ನಿಗಾ ವಹಿಸಬೇಕು. ನಿವಾಸಿಗಳ ಕಲ್ಯಾಣ ಸಂಘ (RWAs) ಗಳು ಕೂಡ ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಬಹುದು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

Advertisement

ಮುಂದುವರಿದು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಈಗ ವ್ಯವಸ್ಥಿತ ಯೋಜನೆ ರೂಪಿಸ ಲಾಗುತ್ತಿದ್ದು, ಇದಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕಿದೆ. ಬೃಹತ್ ತ್ಯಾಜ್ಯ ಉತ್ಪಾದಕರು ಸಾಧ್ಯವಾದಷ್ಟು ತ್ಯಾಜ್ಯವನ್ನು ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಸಂಸ್ಕರಿಸಿ ಸಂಪನ್ಮೂಲವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕು. ಇಲ್ಲದಿದ್ದಲ್ಲಿ ನಿಗದಿಪಡಿಸಿದ ಸಂಸ್ಥೆಗಳಿಗೆ ನೀಡಬೇಕು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಂಬಂಧಿತ ಸಂಸ್ಥೆಗಳಿಗೂ ಖರ್ಚು ವೆಚ್ಚಗಳಾಗುತ್ತವೆ. ಈ ನಿಟ್ಟಿನಲ್ಲಿ, ನಿಗದಿಪಡಿಸಿದ ಮೊತ್ತ ನೀಡಿ ಆ ಸಂಸ್ಥೆಗಳಿಗೆ ತ್ಯಾಜ್ಯವನ್ನು ನೀಡಬೇಕು ಎಂದರು.

"ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದಲ್ಲಿ ತ್ಯಾಜ್ಯವು ಸಂಪನ್ಮೂಲವಾಗಿ ಬಳಕೆಯಾಗುತ್ತದೆ. ಈ ನಿಟ್ಟಿನಲ್ಲಿ ಯಶಸ್ವಿಯಾದ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರ ಕೂಡ ಮತ್ತಷ್ಟು ವ್ಯವಸ್ಥಿತ ಯೋಜನೆಯೊಂದಿಗೆ ಮುಂದಡಿಯಿಡುತ್ತಿದೆ. ಅನಧಿಕೃತ ವ್ಯಕ್ತಿ/ ಸಂಸ್ಥೆಗಳಿಗೆ ತ್ಯಾಜ್ಯವನ್ನು ನೀಡುವ ಬದಲು ತಮ್ಮ ತಮ್ಮ ಸ್ಥಳದಲ್ಲಿಯೇ ತ್ಯಾಜ್ಯ ನಿರ್ವಹಣೆ / ಸಂಸ್ಕರಣೆ ಮಾಡಬೇಕು. ಅನುಕೂಲವಿರದಿದ್ದಲ್ಲಿ ಪಾಲಿಕೆ ಸೂಚಿಸಿದ ಅಧಿಕೃತ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ. ಕಸದ ಸಮಸ್ಯೆ ಬಗ್ಗೆ ಪರಸ್ಪರ ದೂರುತ್ತ ಕುಳಿತರೆ ಪ್ರಯೋಜನವಾಗದು. ಕಸದ ಸಮಸ್ಯೆಯಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಕ್ರಮ ಅನಿವಾರ್ಯ"ಎಂದರು.

Advertisement

ಇನ್ನು ತ್ಯಾಜ್ಯ ನೀಡದ, ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥಿತ ಕ್ರಮ ಕೈಗೊಳ್ಳದ ಬೃಹತ್ ತ್ಯಾಜ್ಯ ಉತ್ಪಾದಕರು, ಅನಧಿಕೃತ ಕಸದ ವೆಂಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಟ್ರಾನ್ಸ್‌ಫರ್ ಸ್ಟೇಷನ್

ಪಾಲಿಕೆಯ ಕಸ ಸಂಗ್ರಹಣೆಯ ಲಾರಿ ಪಾಯಿಂಟ್‌ಗಳನ್ನು ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನಾಗಿ ಬದಲಾಯಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ರೀತಿಯ ಟ್ರಾನ್ಸ್ಫರ್‌ ಸ್ಟೇಷನ್‌ಗಳನ್ನು ಸ್ಥಾಪಿಸಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆಗೆ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ, ತ್ಯಾಜ್ಯ ಸಾಗಾಟ ವೇಳೆ ರಸ್ತೆಯಲ್ಲಿ ತ್ಯಾಜ್ಯ ನೀರು ಸೋರಿಕೆಯಾಗದಂತೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿಗಳ ಬಗ್ಗೆ ಮಾಹಿತಿ

Advertisement

ಇದಕ್ಕೂ ಮೊದಲು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ದ ಸಿಒಒ ರಮಾಮಣಿ ರವರು, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. 2026ರ ಎಪ್ರಿಲ್‌ 1ರಿಂದ ಜಾರಿಗೆ ಬಂದಿರುವ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿ ಮಹತ್ವದ್ದಾಗಿವೆ. ನೇರವಾಗಿ ಸುಪ್ರೀಂ ಕೋರ್ಟ್ ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ ಎಂದರು.

ನೋಂದಣಿ ಕಡ್ಡಾಯ

ನಿಯಮದ ಪ್ರಕಾರ ಬೃಹತ್ ತ್ಯಾಜ್ಯ ಉತ್ಪಾದಕರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. 6,000 ಬೃಹತ್ ತ್ಯಾಜ್ಯ ಉತ್ಪಾದಕರು ಬೆಂಗಳೂರಿನಲ್ಲಿದ್ದು, ಸ್ಥಳದಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಕಷ್ಟವಾದಲ್ಲಿ ಸೂಕ್ತ ಕಾರಣವಿದ್ದಲ್ಲಿ, ಅಧಿಕೃತ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ಅಥವಾ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ನೀಡಬಹುದು. ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳನ್ನು ನಿಗದಿಪಡಿಸಲಾಗಿದ್ದು, (ಮೆಟೀರಿಯಲ್‌ ಸೊಲ್ಯೂಷನ್ಸ್‌ ಫಾರ್‌ ಗ್ರೀನ್‌ ಪ್ಲಾನೆಟ್‌ - ಎಂಎಸ್‌ಜಿಪಿ ಮತ್ತು ಸ್ವಚ್ಛ ಇಕೋ ಸೊಲ್ಯೂಷನ್ಸ್‌) ಆ ಸಂಸ್ಥೆಗೆ ತ್ಯಾಜ್ಯವನ್ನು ನೀಡಬಹುದು ಎಂದರು.

Advertisement

ಕಸವನ್ನು ನಾಲ್ಕು ವಿಭಾಗವಾಗಿ ವಿಂಗಡಿಸುವುದು ಕಡ್ಡಾಯ!

ತ್ಯಾಜ್ಯವನ್ನು 4 ವಿಭಾಗಗಳಡಿ (ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ Special Care Waste) ವರ್ಗೀಕರಿಸಿ ನೀಡಬೇಕು. ತ್ಯಾಜ್ಯದ ವಿಲೇವಾರಿ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಾಂಡ್ ಸೆಂಟರ್ ಮೂಲಕ ನಿಗಾ ಇಡಲಾಗುತ್ತದೆ. ಬೃಹತ್ ತ್ಯಾಜ್ಯ ಉತ್ಪಾದಕರು ಅನಧಿಕೃತ ವೆಂಡರ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳುವಂತಿಲ್ಲ. ತ್ಯಾಜ್ಯವನ್ನು ಮಿಶ್ರ ಮಾಡುವಂತಿಲ್ಲ. ಉರಿಸುವಂತಿಲ್ಲ. ತೆರೆದ ಸ್ಥಳಗಳಲ್ಲಿ ಸುರಿಯುವುದು, ಡ್ರೇನ್‌ ಅಥವಾ ಜಲಮೂಲಗಳಲ್ಲಿ ಎಸೆಯುವುದು ಇತ್ಯಾದಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ (ಡಿಜಿಎಂ) ಮುನಿಯಪ್ಪ, ಸ್ವಚ್ಛ ಇಕೋ ಸೊಲ್ಯೂಷನ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ವಿಕ್ಟೋರಿಯಾ, ಎಂಎಸ್‌ಜಿಪಿ ಸಂಸ್ಥೆಯ ಆರ್‌ ಆರ್‌ ನಗರ ವಿಭಾಗೀಯ ವ್ಯವಸ್ಥಾಪಕ ಮಾನಸ್‌, ಬಲ್ಕ್‌ ವೇಸ್ಟ್‌ ಜನರೇಟರ್‌ಗಳು, ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಜಿಎಂಗಳು, ಮಾರ್ಷಲ್‌ಗಳು ಸೇರಿದಂತೆ ಹಲವರು ಇದ್ದರು.

English Summary

Bengaluru Waste Rules: Not Just Dry and Wet Garbage—Residents Must Now Segregate This Waste Too