ಬೆಂಗಳೂರು ಚುನಾವಣೆ ವಿಳಂಬಕ್ಕೆ ಎಎಪಿ ಕಿಡಿ: ಸರ್ಕಾರ ವಿರುದ್ಧ ತೀವ್ರ ಆಕ್ರೋಶ
ಬೆಂಗಳೂರು: ಬೆಂಗಳೂರು ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ನಾಗರಿಕರ ಜನಾಕ್ರೋಶ ಬುಗಿಲೆಳುವ ಮುನ್ನವೇ ಜಿಬಿಎ ಚುನಾವಣೆಗಳನ್ನು ತಕ್ಷಣ ನಡೆಸಬೇಕು ಎಂದು ಎಎಪಿ ಆಗ್ರಹಿಸಿದೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, 2020ರಿಂದ ಬೆಂಗಳೂರಿಗೆ ವಾರ್ಡ್ ಮಟ್ಟದ ಚುನಾಯಿತ ಪ್ರತಿನಿಧಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಹಲವು ಕಸರತ್ತು ನಡೆಸಿತ್ತು. ಕೆಎಂಸಿ ಕಾಯ್ದೆಯನ್ನು ರದ್ದುಪಡಿಸಿ ಬಿಬಿಎಂಪಿ 2020 ಕಾಯ್ದೆ ಜಾರಿಗೊಳಿಸುವ ಮೂಲಕ ಆಡಳಿತಾಧಿಕಾರಿಗಳನ್ನು ನೇಮಿಸಿ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಟೀಕಿಸಿದರು.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಇಬ್ಬರು ಪಾಲಿಕೆ ಸದಸ್ಯರುಗಳು ನ್ಯಾಯಾಲಯದ ಮೊರೆ ಹೋಗಿದ್ದರು. 6 ವರ್ಷಗಳ ನಂತರ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ಇದೇ ವರ್ಷದ ಜೂನ್ 30ರ ಒಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ. ಇದರ ನಡುವೆ ಕಾಂಗ್ರೆಸ್ ಸರ್ಕಾರವು ಸಹ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜಿಸಿ ಅಧಿಕಾರ ವಿಕೇಂದ್ರೀಕರಣದ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿದೆ.
ಸ್ಥಳೀಯ ಜಿಬಿಎ ನಗರಪಾಲಿಕೆಗಳ ಆಡಳಿತದಲ್ಲಿ ಮುಖ್ಯಮಂತ್ರಿಗಳ , ಪ್ರಭಾವಿ ಮಂತ್ರಿಗಳ , ಶಾಸಕರುಗಳ ನೇರ ಹಸ್ತಕ್ಷೇಪ ಉಂಟು ಮಾಡುವ ಮೂಲಕ ಸಂವಿಧಾನದ ಮೂಲ ಆಶಯವನ್ನೇ ಬುಡ ಮೇಲು ಮಾಡಿದೆ. ಹೀಗಿದ್ದರೂ ಸಹ ಬೆಂಗಳೂರಿನ ನಾಗರಿಕರಿಗೆ ಸ್ಥಳೀಯ ಚುನಾವಣಾ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವ ಸಾಂವಿಧಾನಿಕ ಅಧಿಕಾರಕ್ಕೆ ಕೊಡಲಿ ಪೆಟ್ಟು ನೀಡಲು ಅನೇಕ ಕಾರಣಗಳನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯನ್ನು ಮುಂದೂಡಲು ಹವಣಿಸುತ್ತಿದೆ. ಸರ್ಕಾರವು ಕೂಡಲೇ ಚುನಾವಣೆಯನ್ನು ನಡೆಸಿ ಸಮಸ್ಯೆಗಳ ಕೂಪವಾಗಿರುವ ಬೆಂಗಳೂರನ್ನು ಮುಕ್ತಗೊಳಿಸಬೇಕು " ಎಂದು ಆಗ್ರಹಿಸಿದರು.
ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ " ದೇಶದಲ್ಲಿಯೇ ಆರ್ಥಿಕ ಇಂಜಿನ್ ಆಗಿ , ಐಟಿ ಬಿಟಿ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವ ಮಾನ್ಯತೆಯನ್ನು ಪಡೆದಿರುವ ಬೆಂಗಳೂರು ನಗರದ ನಾಗರಿಕರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ 27 ಶಾಸಕರುಗಳು ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಇದುವರೆಗೂ ಸಾವಿರಾರು ಕೋಟಿ ಅಕ್ರಮಗಳನ್ನು ಮಾಡಿದ್ದಾರೆ. ಇವರುಗಳ ನುಂಗುಬಾಕುತನಕ್ಕೆ ಚುನಾವಣೆಯನ್ನೇ ಮುಂದೂಡಲು ಹೊರಟಿರುವುದು ನಾಗರೀಕ ಸಮಾಜ ಸಹಿಸುವುದಿಲ್ಲ. ಕೂಡಲೇ ಚುನಾವಣೆಯನ್ನು ಘೋಷಿಸದಿದ್ದಲ್ಲಿ ಪಕ್ಷವು ಬೆಂಗಳೂರಿನ ನಾಗರೀಕರೊಂದಿಗೆ ಜೊತೆಗೂಡಿ ಮತ್ತೊಂದು ಜನಾಂದೋಲನಕ್ಕೆ ಮುನ್ನುಡಿ ಹಾಡಬೇಕಾಗುತ್ತದೆ " ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಲಕ್ಷ್ಮಿಕಾಂತ್ ರಾವ್, ಶಶಿಧರ್ ಆರಾಧ್ಯ, ಉಷಾ ಮೋಹನ್, ಶಿವರಾಮ್, ಪುಟ್ಟಣ್ಣ ಗೌಡ, ಉಮೇಶ್ ಯಾದವ್, ದೇವರಸಂ, ನವೀನ್ ಅಯ್ಯರ್ ಹಾಗೂ ಮಧುಮಿತ ಸೇರಿದಂತೆ ಹಲವರು ಭಾಗವಹಿಸಿದ್ದರು.














Click it and Unblock the Notifications