Ruby Roman Grape: ಜಗತ್ತಿನ ದುಬಾರಿ ದ್ರಾಕ್ಷಿ ಕೊಪ್ಪಳದಲ್ಲಿ, ಕೆಜಿಗೆ ಬೆಲೆ ಎಷ್ಟು?
ಕೊಪ್ಪಳ, ಫೆಬ್ರವರಿ 24: ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಹಣ್ಣು ಮತ್ತು ಜೇನು ಮೇಳ-2025 ಆಯೋಜನೆ ಮಾಡಲಾಗಿದೆ. ಫೆಬ್ರವರಿ 27ರ ತನಕ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಈ ಮೇಳ ನಡೆಯಲಿದೆ. ಈ ಮೇಳದಲ್ಲಿ ವಿವಿಧ ತಳಿಗಳ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಮತ್ತು ಜೇನು ಹಾಗೂ ಜೇನಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
8ನೇ ವರ್ಷದ ಹಣ್ಣು ಮತ್ತು ಜೇನು ಮೇಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಚಾಲನೆ ನೀಡಿದರು. ಒಟ್ಟು 5 ದಿನಗಳ ಕಾಲ ತೋಟಗಾರಿಕಾ ಇಲಾಖೆ ವತಿಯಿಂದ ಆಯೋಜನೆ ಮಾಡಿರುವ ಹಣ್ಣು ಮತ್ತು ಜೇನು ಮೇಳ-2025 ನಡೆಯಲಿದೆ.

ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಮುಖ ಆಕರ್ಷಣೆ ಜಗತ್ತಿನ ದುಬಾರಿ ದ್ರಾಕ್ಷಿ 'ರೂಬಿ ರೋಮನ್' ಆಗಿದೆ.
ರೂಬಿ ರೋಮನ್: ಮಹಾಶಿವರಾತ್ರಿ ಪ್ರಯುಕ್ತ ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರಿಗೆ ಹಾಗೂ ಎಲ್ಲಾ ಹಣ್ಣುಗಳನ್ನು ಸವಿಯುವ ಗ್ರಾಹಕರಿಗೆ ಅನುಕೂಲವಾಗಲು ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯಲಾಗುವ ಬೇಸಿಗೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ಲಭ್ಯವಿರುವ ವಿವಿಧ ತಳಿಯ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಜನರು ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಈ ಮೇಳದ ಪ್ರಮುಖ ಆಕರ್ಷಣೆ 'ರೂಬಿ ರೋಮನ್' ದ್ರಾಕ್ಷಿ. ಇದು ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿಯಾಗಿದೆ. ರೂಬಿ ರೋಮನ್ ಮೂಲತಃ ಜಪಾನ್ ಮೂಲದ್ದು. ಮೇಳದ ಪ್ರದರ್ಶನದಲ್ಲಿ ಇದು ಮುಖ್ಯ ಆಕರ್ಷಣೆಯಾಇದೆ. ಜಪಾನಿನಲ್ಲಿ ಬೆಳೆಯುವ ಈ ದ್ರಾಕ್ಷಿ ಹಣ್ಣಿನ ಮೌಲ್ಯ ಪ್ರತಿ ಕೆಜಿಗೆ 8 ಲಕ್ಷ ರೂ. ಆಗಿದೆ. ದ್ರಾಕ್ಷಿ ಬೆಳೆಯುವ ರೈತರ ಮಾಹಿತಿಗಾಗಿ ಈ ಬಾರಿ ರೂಬಿ ರೋಮನ್ ದ್ರಾಕ್ಷಿಯನ್ನು ಪ್ರದರ್ಶನದಲ್ಲಿ ಇಡಲಾಗಿದೆ. ರೈತರು, ಜನರು ಉತ್ಸಾಹದಿಂದ ಈ ದ್ರಾಕ್ಷಿಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಹಣ್ಣು ಮತ್ತು ಜೇನು ಪ್ರದರ್ಶನದಲ್ಲಿ ವಿವಿಧ ವಿದೇಶಿ ಹಣ್ಣಿನ ತಳಿಗಳಾದ ಅವಕಾಡೋಫ್ಲಮ್, ಪೀಚ್, ಲಿಚ್ಚಿ, ರೆಡ್‌ಗ್ಲೋಬ್, ಕಿವಿ ಫ್ರೂಟ್, ರಾಮಭೂತಾನ, ಮ್ಯಾಂಗೋಸ್ಟೀನ್, ಜಪಾನ ಮ್ಯಾಂಗೂ, ಐಸ್‌ಗಾವಾ, ಅಮೆರಿಕನ್ ಆಪಲ್, ಗ್ರೀನ್ ಆಪಲ್, ವಿದೇಶಿ ಪ್ಯಾಷನ್ ಪ್ರೂಟ್, ವೈನ್‌ಗ್ರೇಪ್ ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ದೇಶಿಯ ಹಾಗೂ ಕೊಪ್ಪಳ ಜಿಲ್ಲೆಯ ರೈತರು ಬೆಳೆದ ಪ್ಪಪಾಯ, ದ್ರಾಕ್ಷಿ, ಕಲ್ಲಂಗಡಿ, ಪೇರಲ, ಅಂಜೂರ, ಪಪ್ಪಾಯ, ಹಲಸು, ಬಾಳೆ, ಸಪೋಟ, ಅಣಬೆಯನ್ನು ವೀಕ್ಷಿಸಬಹುದು. ಜೇನು ಮಾತ್ರವಲ್ಲ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿವೆ.
ಈ ಮೇಳದಲ್ಲಿ ರೈತರಿಗಾಗಿ ಉಚಿತವಾಗಿ ಸ್ಟಾಲ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. 30ಕ್ಕೂ ಹೆಚ್ಚು ಹಣ್ಣು ಬೆಳೆಗಾರರು, 15 ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡಾ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳ ನೂರಾರು ಸದಸ್ಯ ರೈತರಿಂದ ವಿವಿಧ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗಲಿದೆ.
ಈ ವರ್ಷದ ಮೇಳದ ವಿಶೇಷ ಬಾಕ್ಸ್ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ಪೂರೈಸುತ್ತಿರುವುದು. ಇದರಿಂದಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಹಣ್ಣು ಬೆಳೆಗಾರರಿಗೆ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲು ಆಕರ್ಷಕವಾದ ರಟ್ಟಿನ ಡಬ್ಬಿಗಳನ್ನು ವಿತರಿಸಲಾಗುತ್ತಿದೆ. ಇವುಗಳ ಮೇಲೆ ರೈತರ ಹೆಸರು, ಹಣ್ಣುಗಳು ಅವುಗಳ ತಳಿ, ಅಲ್ಲದೇ ದರವನ್ನು ಕೂಡಾ ಮುದ್ರಿಸಿದ್ದು, ರೈತರಿಗೂ, ಗ್ರಾಹಕರಿಗೂ ಇದು ಅತ್ಯಂತ ಪ್ರಯೋಜನಕಾರಿಯಾಗಲಿದೆ.
ಈ ಮೇಳದಲ್ಲಿ ವಿವಿಧ ಜೇನಿನ ತುಪ್ಪಗಳು ಹಾಗೂ ಜೇನಿನ ಪರಿಕರಗಳಾದ ಜೇನಿನ ಮೇಣದ ಲಿಪ್‌ಬಾಂಬ್, ವಿವಿಧ ಆರ್ಯವೇದ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಿದ ವಿವಿಧ ಬಗೆಯ ಜೇನಿನ ತುಪ್ಪಗಳು ಸಹ ಮಾರಾಟಕಕ್ಕೆ ಲಭ್ಯವಿದೆ. ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಹಲಸಿನ ಪುಡಿ, ಹಲಸಿನ ಚಿಪ್ಸ್ ಮುಂತಾದ ಪರಿಕರಗಳು ಲಭ್ಯವಿರುತ್ತದೆ. ತಾಜಾ ಅಣಬೆ, ಒಣಗಿಸಿದ ಅಣಬೆ, ಅಣಬೆ ಉಪ್ಪಿನಕಾಯಿ, ಅಣಬೆ ಪುಡಿ ಹಾಗೂ ಅಣಬೆ ಬಿಸ್‌ಕೇಟ್‌ಗಳು ಸಹ ಮೇಳದಲ್ಲಿ ಲಭ್ಯವಿರುತ್ತದೆ.












Click it and Unblock the Notifications